Posts Tagged ‘walk in’

ವಾಕ್ ಇನ್ ಸಂದರ್ಶನ!!

ಅಕ್ಟೋಬರ್ 21, 2011

ನಮಸ್ತೆ ನನ್ನೆಲ್ಲ ಆತ್ಮೀಯ ಸ್ನೇಹಿತರಿಗೆ, ಎಷ್ಟೊಂದು ಸಲ ಅಂದುಕೊಳ್ಳುತ್ತೇನೆ  ಯಾವಾಗಲೂ ನಿಮ್ಮೊಂದಿಗೆ  ಏನಾದರೂ ಮಾತನಾಡುತ್ತಲೇ ಇರಬೇಕು, ಬರಿಯುತ್ತಲೇ ಇರಬೇಕು, ಆದರೆ ಎನು ಮಾಡೋದು ಕೆಲಸ ಕೆಲಸ ಕೆಲಸ….. ಈ ಭಾರಿ ಕೆಲಸದ ಮಧ್ಯೆ ಸ್ವಲ್ಪ ಬಿಡುವು ಮಾಡಿಕೊಳ್ಳಲೇಬೇಕೆಂಬ ಹಠ ತೊಟ್ಟು  ಸ್ವಲ್ಪ ಬರೆಯಬೇಕೆಂಬ ಬಯಕೆ ಉಂಟಾಗಿದೆ ಬನ್ನಿ ಸ್ವಲ್ಪ ಹೊತ್ತು ಕಾಡು ಹರಟೆ ಹೊಡೆಯೋಣ..

ಮೊನ್ನೆ ನಮ್ಮ ಆಫೀಸಿನಲ್ಲಿ  ಬಿ ಇ ಮಾಡಿದ ಅನುಭವವಿಲ್ಲ ದ ಹುಡುಗರನ್ನು ಕೆಲಸಕ್ಕೆ ತೆಗೆದುಕೊಂಡೆವು, ಅಂದರೆ ಸಿಂಪಲ್ ಆಗಿ ಹೇಳುವುದಾದರೆ ಫ್ರೆಶರ್ ಗಳನ್ನು ಕೆಲಸಕ್ಕೆ ಸೇರಿಸಿಕೊಂಡೆವು ಅಂತ. ಅಲ್ಲಿ  ಇಂಟರ್ವ್ಯೂ ಮಾಡಲು ಟೆಕ್ ಪ್ಯಾನಲ್ ಗಳಿಗೆ ಸಹಕರಿಸಲು ಜೊತೆಗೆ ಎಚ್ ಆರ್ ಇಂಟರ್ವ್ಯೂ ಮಾಡಲು ನಾನಿದ್ದೆ. ಅದು ಶನಿವಾರ ವಾಕ್ ಇನ್ ಬೇರೆ ಆದ್ದರಿಂದ ನಾವು ಕರೆ ಮಾಡಿದ್ದು ಕೇವಲ 70 ಜನರಿಗೆ ಬಂದದ್ದು 100 ಕ್ಕಿಂತ ಹೆಚ್ಚು ಮಂದಿ. ಅವರನ್ನು ಕೂರಿಸುವುದರಲ್ಲೇ ಸುಸ್ತಾಗಿ ಹೋದೆ ನಾನು. ಮತ್ತೆ  ನಮ್ಮ ಅನುಭವಸ್ಥ ನುರಿತ (?) ಟೆಕ್ ಜೀವಿಗಳು ಬರಲು ಇನ್ನೂ ಸುಮಾರು ಹೊತ್ತು ಇತ್ತು, ಬಿಡಿ ಶನಿವಾರ ನಮ್ಮ ಸಾಫ್ಟ್ ವೇರ್  ಇಂಜಿನೀಯರುಗಳೆ ಹಾಗೆ ಶನಿವಾರ 9 ಗಂಟೆಗೆ ಬನ್ನಿ ಅಂದರೆ ರಾಜಕಾರಣಿಗಳ ರೀತಿ 11 ಗಂಟೆಗೆ ಬರುವುದು ಅವರ ಸಂಪ್ರದಾಯ. ಅದೇ ಸಮಯದಲ್ಲಿ ನಮ್ಮ ಫ್ರೇಶರುಗಳು ಏನು ಮಾಡುತ್ತಿದ್ದಾರೆ ನೋಡೋಣ ಅಂತ ಅನ್ನಿಸಿ ಮತ್ತೊಂದು ಬಾಗಿಲಿನಿಂದ ಅವರು ಕುಳಿತಿದ್ದ ಹಾಲ್ ಗೆ ಹೋದೆ….

ಏನು ನೋಡೋದು ಎಷ್ಟು ಆಶ್ಚರ್ಯ ಗೊತ್ತ ? ಸಾಲಾಗಿ ಕೂರಿಸಿದ್ದೆ ನಾನು, ಆದರೆ ಅವರು ಚೇರುಗಳನ್ನ ಸೇರಿಸಿಕೊಂಡು ಸಣ್ಣ ಸಣ್ಣ ಗುಂಪುಕಟ್ಟಿಕೊಂಡು ಬಿಟ್ಟಿದ್ದಾರೆ, ಒಬ್ಬರು ಹರಟೆ ಹೊಡೆಯುತ್ತಿದ್ದಾರೆ, ಇನ್ನೊಬ್ಬ ಮೊಬೈಲ್ ನಲ್ಲಿ ಜೋರಾಗಿ ಮಾತಾನಾಡೋದು, ಇನ್ನೂ ಕೆಲವರಂತೂ ಜಗತ್ತೇ ತಲೆ ಮೇಲೆ ಬಿದ್ದೋರತರ ಕೂತಿದ್ದಾರೆ, ಮತ್ತೆ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ “ಏನು ಮಗ ಈ ಕಂಪನಿ ನಿಜವಾಗ್ಲೂ ಫ್ರೆಶರ್ ಗಳನ್ನ ತಗೋತಾ ಇದ್ಯ? ಯಾರೋ ಹೇಳಿದ್ರು ನಂಗೆ, ಕಂಪನಿ ಅಷ್ಟು ಚೆನಗಿಲ್ಲ ಆದ್ರೆ ಎಕ್ಷ್ಪೀರಿಯನ್ಸ್ ಗೋಸ್ಕರ ಬಂದು ಸೇರ್ಕೋಬೇಕು ಅಷ್ಟೇ ಅಂತ , ಅದು ಅಲ್ಲ್ದೆ ಮೊನ್ನೆ ಆ ಕಂಪನಿ ಗೆ ಹೋದ್ರೆ ದಿನ ಇಡೀ ಕೂರ್ಸಿ ಏನೂ ಮಾತಡದೆ ಸಂಜೆ ಹೊತ್ತಿಗೆ ಮನೆಗೆ ಕಳ್ಸಿದ್ರು, ಇಲ್ಲೂ ಅದೇ ಕಥೆ ಅನ್ಸುತ್ತೆ  ಎಚ್ ಆರ್ ಇಲ್ಲಿ ನಮ್ಮನ್ನ ಕೂರ್ಸಿ ಎಲ್ಲಿ ಸತ್ತ ಅಂತ ಗೊತ್ತಿಲ್ಲ ನೋಡು, ಅದಕ್ಕೆ ಒಂದು ಪ್ಲಾನ್ ಮಾಡೋಣ ಅಂತ ಇದೀನಿ ನೆಕ್ಸ್ಟ್ ಟೈಮ್  ನನ್ನ ರೇಸ್ಯುಮೆ ಲಿ ನಮ್ಮ ಅಣ್ಣ ನ ಎಕ್ಸ್ಪೀರಿಯನ್ಸ್ ಹಾಕಿಕೊಂಡು ಹೋಗೋಣ ಅಂತ ”  ಅಯ್ಯೋ ಅನ್ನಿಸಿತು ನನಗೆ. ಇನ್ನೂ ಒಬ್ಬ ಮಹಾರಾಯ ಅಲ್ಲಿ ಬಂದಿರೋ ಹೂಡಗೀರನ್ನ ಗೇಲಿ ಮಾಡೋದು ಕಾಲು ಎಳೆಯೋದು ಶುರು ಮಾಡಿದ್ದಾನೆ, ಮಧ್ಯ ಮಧ್ಯ ಅವನ ಗಾನ ಸುಧೆ ಬೇರೆ. ತುಂಬಾ ಸಿಟ್ಟುಬಂದು ಅವನನ್ನ ಮಾತ್ರ ಕರೆದು ನಿಮ್ಮ ರೇಸ್ಯುಮೆಯಲ್ಲಿರೋ  ಅಂಕಗಳು 70% ಕ್ಕಿಂತ ಕಡಿಮೆ ಇದೆ ಆದ್ದರಿಂದ ಇನ್ನೊಂದು ದಿನ ಕರೆಯುತ್ತೇವೆ ನೀವು ಹೊರಡಬಹುದು ಎಂದು ಹೇಳಿ ಕಳಿಸಿಬಿಟ್ಟೆ. ಕೆಲವರು ಟಿ-ಶರ್ಟ್ ಗಳನ್ನು ಹಾಕಿಕೊಂಡು ಕಾಲೇಜಿಗೆ ಬರುವ ಹಾಗೆ ಬಂದಿದ್ದರು ಅದಾದರೂ ಮುಂದೆ ಸುದಾರಿಸಬಹುದು ಅನ್ನುವ ಕಾರಣಕ್ಕೆ ಸುಮ್ಮನಾದೆ. ಮತ್ತೆ ಇನ್ನೂ ಕೆಲವೊಂದಿಷ್ಟು ಜನ ನಮ್ಮ ಆಫೀಸಿನ ದೊಡ್ಡ ದೊಡ್ಡ (?) ಮ್ಯಾನೇಜರುಗಳ ಹೆಸರುಗಳನ್ನ ತಮ್ಮ ರೇಸ್ಯುಮೇಯ ಮೇಲೆ ಹಾಕಿಕೊಂಡು ಬಂದಿದ್ದಾರೆ.

ಕೊನೆಗೂ ನಮ್ಮ ಟೆಕ್ಕಿಗಳು ಬಂದರು ನಾನು ತಕ್ಷಣ ಒಂದು 6 ಜನ ಟೆಕ್ಕಿಗಳನ್ನು ಬೇರೆ ಬೇರೆ ರೂಮುಗಳಲ್ಲಿ ಕೂರಿಸಿ ಒಬ್ಬಬ್ಬರಂತೆ ಕರೆಯುವ ಪ್ಲಾನ್ ಮಾಡಿದೆ ಅದನ್ನೇ ಹೋಗಿ ಹಾಲ್ ನಲ್ಲಿ ಕುಳಿತಿದ್ದ ಫ್ರೇಶರ್ ಗಳಿಗೆ ಹೇಳಿದೆ. ನಂತರ ಕರೆಯಲು ಶುರುಮಾಡಿದಾಗ ಗೊತ್ತಾಗಿದ್ದು ನೋಡಿ ಭಲವಾದ ಸಮಸ್ಯೆ, ತಾ ಮುಂದು ನಾ ಮುಂದು ಅಂತ ಬಾಗಿಲುಗಳ ಬಳಿ ತಿರುಪತಿ ದೇವರ ದರ್ಶನಕ್ಕೆ ಬರುವಂತೆ ನುಗ್ಗಿದರು.  ತಡೆಯಲಾರದೇ ಸರಿಯಾಗಿ, ಜೋರಾಗಿ ಬೈದು ಕೂರಿಸಬೇಕಾಯಿತು , ಆದರೂ ನುಗ್ಗುವಿಕೆ ಕಡಿಮೆ ಆಗಲೇ ಇಲ್ಲ!! ಅಂತೂ ಹಾಗೂ ಹೀಗೂ ಎಲ್ಲರನ್ನೂ ಇಂಟರ್ವ್ಯೂ ಮಾಡಿ ಕಳಿಸುವಾಗ ಸಂಜೆ 4 ಘಂಟೆ ಸಮಯ.

ಇದನ್ನೆಲ್ಲ ಏಕೆ ಹೇಳುತ್ತಿದ್ದೇನೆ ನಿಮಗೆ ಅಂದುಕೊಂಡಿರ? ಕಾರಣ ಇಷ್ಟೇ ನಾವು ಯಾವುದೇ ಅನುಭವವಿಲ್ಲದೆ ಹೊಸದಾಗಿ ಕೆಲಸ ಹುಡುಕಲು ಹೋಗುವಾಗ ನಮ್ಮ ವರ್ತನೆ, ನಡೆ, ನುಡಿ, ಸಭ್ಯತೆ ಎಲ್ಲ ಹೇಗಿರಬೇಕು? ಅನ್ನುವ ಸಾಮಾನ್ಯ  ಮಾಹಿತಿಯನ್ನ ತಿಳಿದುಕೊಳ್ಳುವುದಕ್ಕಾಗಿ, ನನಗಿರುವ ~5 ವರ್ಷಗಳ ಎಚ್ ಆರ್ ಅನುಭವದಲ್ಲಿ ಕೆಲವು ವಿಚಾರಗಳನ್ನ ಹೇಳೋಣ ಅಂತ ಇದೀನಿ. ನಿಮಗೆ ಹೌದು ಅನ್ನಿಸಬಹುದು ನೋಡಿ.

  • ಆದಷ್ಟು ಸಣ್ಣ ಸಣ್ಣ ಕಾರಣಗಳಿಗಾಗಿ ಇಂಟರ್ವ್ಯೂ ಅನ್ನು ತಪ್ಪಿಸಿಕೊಳ್ಳುವುದು ಬೇಡ .
  • ಇಂಟರ್ವ್ಯೂ ಗೆ ಹೋಗುವ ಮುನ್ನ, ಯಾವ ಕಾರಣಕ್ಕೆ, ಮತ್ತು ಯಾವ ಯಾವ ಕುಶಲತೆ (skill expertise) ಗಳನ್ನ ಕೇಳಿದ್ದಾರೆ?ಅಂತ ಅವರು ಕಳಿಸಿರುವ ಮೈಲ್ ಅನ್ನು 2 ಭಾರಿ ಚೆಕ್ ಮಾಡಿ ನೋಡಬೇಕು.
  • ಯಾವ ಕಂಪನಿಯವರು ಕರೆದಿದ್ದಾರೆ? ನಾನು ಹೋಗುತ್ತಿರುವ ಕಂಪನಿಯ ಮೂಲ, ಇತಿಹಾಸ ಹಾಗೂ  ವ್ಯವಹಾರ ಏನು?  ಎಷ್ಟುಜನ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನುವುದನ್ನ ಅವರ ವೆಬ್ ಸೈಟ್ ನೋಡಿ ತಿಳಿದುಕೊಳ್ಳಬೇಕು
  • ಅನುಭವ ಇಲ್ಲದ ಕಾರಣ ಅಲ್ಲಿ ಕೇಳಿರುವ ತಾಂತ್ರಿಕ ಜ್ಞಾನ (Knowledge not experience)ನನ್ನಲ್ಲಿ ಇದೆಯೇ?  ಇಲ್ಲವಾದಲ್ಲಿ ಅದರಬಗ್ಗೆ ಸ್ವಲ್ಪ ಹೊತ್ತು ಓದಿ ಕೊಳ್ಳುವುದು ತುಂಬಾ ಒಳಿತು.
  • ಇಂಟರ್ವ್ಯೂಗೆ ಹೋಗಲು ನನಗೆ ಆ ಕಂಪನಿಯ ವಿಳಾಸ ಸರಿಯಾಗಿ ಗೊತ್ತಿದೆಯೇ? ಇಲ್ಲವಾದಲ್ಲಿ ಹತ್ತಿರದ ಲ್ಯಾಂಡ್ ಮಾರ್ಕುಗಳು ಏನಾದರೂ ಇವೆಯೆ? ಅನ್ನುವುದನ್ನ ನೋಡಿಕೊಳ್ಳಬೇಕು ಇದು ನಾವು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲು ಸಹಾಯಕವಾಗುತ್ತದೆ.
  • ನನ್ನ ಅನುಭವದಲ್ಲಿ ನೋಡಿದ್ದೇನೆ, ನಾವು ಕಳುಹಿಸಿದ ಮೇಲ್ ನಲ್ಲಿ ಅಥವಾ ಇಂಟರ್ನೆಟ್ ನಲ್ಲಿ ಹುಡುಕಿ ನಮ್ಮ ಫೋನ್ ನಂಬರ್ ಗಳಿಗೆ ಫೋನ್ ಮಾಡಿ “ಸಾರ್ ನನಗೆ ತುಂಬಾ ಕಷ್ಟ ಇದೆ ನನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ,ನನಗೆ ಜೀವನ ಸಾಕಾಗಿದೆ , ದಯವಿಟ್ಟು ಕೆಲಸ ಕೊಡಿಸಿ, ಏನಾದರೂ ಮಾಡಿ ಸಾರ್ ಪ್ಲೀಸ್”…. ಅನ್ನುವುದು. ಈ ರೀತಿ ಮಾಡಿದರೆ ನಿಮ್ಮ  ಇಂಟರ್ವ್ಯೂ  ತೆಗೆದು ಕೊಳ್ಳುವ ಶಕ್ತಿ ಕುಂದಿದೆ, ಜೊತೆಗೆ ನಿಮ್ಮಲ್ಲಿಯ ಪಾಸಿಟಿವ್  ಎನರ್ಜಿ ಕಡಿಮೆ ಆಗಿದೆ ಅಥವಾ ನಿಮ್ಮಲ್ಲಿ ಆತ್ಮವಿಶ್ವಾಸ ಕುಂದಿದೆ  ಅಂತ ಅರ್ಥೈಸಿ ನಿಮ್ಮನ್ನು ಇಂಟರ್ವ್ಯೂ ಗೆ ಕರೆಯದೆ ಇರುವ ಸಾಧ್ಯತೆಗಳು ಇರುತ್ತವೆ.

ಇಂಟರ್ವ್ಯೂ ನೆಡೆಯುವ ಸ್ಥಳದಲ್ಲಿ ನಮ್ಮ ನಡತೆ ಹೇಗಿರಬೇಕು?

  • ಆದಷ್ಟು ನಿಮ್ಮ ಮೊಬೈಲ್ ಅನ್ನು ಸೈಲೆಂಟ್ ಮೊಡ್ ನಲ್ಲಿ  ಇರುವಂತೆ ನೋಡಿಕೊಳ್ಳಿ. ಜೋರಗಿನ ರಿಂಗ್ ಟೋನ್ಗಳು  ಅಥವಾ ಹಾಸ್ಯಸ್ತ್ಮಕ ಹಾಡುಗಳು ಬೇರೆಯವರಿಗೆ ಕಿರಿ ಕಿರಿ ಉಂಟುಮಾಡಬಹುದು ಅಲ್ಲವೇ?
  • ನಿಮ್ಮ ಉಡುಪು ಟಿ- ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಆಗಿರದೆ , ನಾರ್ಮಲ್  ಉಡುಪುಗಳಾಗಿರಲಿ. ಉದ್ದದ ನಾಮ, ದೊಡ್ಡ ವಿಭೂತಿ ಪಟ್ಟಿಗಳು ನಿಮ್ಮ ಹಣೆಯನ್ನ ಮುಚ್ಚದಿರಲಿ
  • ಇಂಟರ್ವ್ಯೂ ಹಾಲ್ ನಲ್ಲಿ ಆದಷ್ಟು ನಿಧಾನವಾಗಿ ಮಾತನಾಡುವ ಅಭ್ಯಾಸ ಇರಲಿ. ಗುಂಪುಗಳನ್ನ ಕಟ್ಟಿಕೊಂಡು ಕರೆದ ಕಂಪನಿಯ ಬಗ್ಗೆಯೇ ಹಗುರವಾಗಿ ಮಾತನಾಡುವ ಹವ್ಯಾಸ ಒಳ್ಳೆಯದಲ್ಲವೇನೋ ಅನ್ನುವುದು ನನ್ನ ಅಭಿಪ್ರಾಯ.
  • ಇಡೀ ಪ್ರಪಂಚ ತಲೆ ಮೇಲೆ ಬಿದ್ದಂತೆ ಕುಳಿತುಕೊಂಡಿರುವುದೇಕೆ? ಆತ್ಮವಿಶ್ವಾಸ ದಿಂದ ಸಂದರ್ಶನವನ್ನು ಎದುರಿಸಿ, ಇದಿಲ್ಲದಿದ್ದರೆ ಇನ್ನೊಂದು ಒಳ್ಳೆಯ ಅವಕಾಶ ನಿಮಗಾಗಿ ಕಾದಿರುತ್ತದೆ ಅನ್ನುವ ವಿಶ್ವಾಸ ಇಟ್ಟುಕೊಳ್ಳುವುದು ಅತ್ಯಂತ ಮುಖ್ಯ ಅಲ್ಲವೇ?
  • ನಿಜವಾಗಲೂ ನಮಗೆ ಇಂಟರ್ವ್ಯೂ ಗೆ ಹೋದ ಕಂಪನಿಯ ದೊಡ್ಡ ಮ್ಯಾನೇಜರುಗಳು ಗೊತ್ತಿದ್ದರೆ ಮಾತ್ರ ಅವರ ಹೆಸರನ್ನು ನಮೂದಿಸಿ ಇಲ್ಲವಾದಲ್ಲಿ ಬೇಡ, ಆ ಹೆಸರುಗಳಿಂದಾಗಿ ನಿಮಗೆ ಕೆಲಸ ಬೇಕೆ? ಅಥವಾ ನಿಮ್ಮ ಯೋಗ್ಯತೆಗನುಸಾರ ವಾಗಿಯೇ?
  • ಸಂದರ್ಶನ ಎದುರಿಸುವಾಗಲೂ ಅಷ್ಟೇ, ಭಯವೇಕೆ? ನಡುಗುವ ಧ್ವನಿ ಏಕೆ? ಗೊತ್ತಿರುವ ಪ್ರಶ್ನೆಗಳಿಗೆ ಸ್ಪಷ್ಟ ವಾಗಿ ಉತ್ತರಿಸಿ, ಗೊತ್ತಿಲ್ಲದಿರುವಗಳಿಗೆ “ಅವಕಾಶ ಕೊಟ್ಟಲ್ಲಿ ಖಂಡಿತ ಕಲಿತು ಕೆಲಸ ಮಾಡುತ್ತೇನೆ” ಎನ್ನುವ ಉತ್ತರವೀಯಿರಿ.
  • ಇಂಟರ್ವ್ಯೂ  ರೂಮಿಗೆ ಹೋದ ತಕ್ಷಣ “good morning / afternoon sir” ಅನ್ನುವ ಅಭ್ಯಾಸ ಅತ್ಯಂತ ಒಳ್ಳೆಯದು. ನಗುನಗುತ್ತಾ ಮಾತನಾಡಿ, ಆಳುವ ಧ್ವನಿ ಅಥವಾ ಹೆದರಿದಂತೆ ತೋರಿಸಿಕೊಳ್ಳಬೇಡಿ. ಇದನ್ನು ಮಾಡುವುದು ಕಷ್ಟ ಆದರೆ ಆದಷ್ಟು ಪ್ರ್ಯತ್ನಿಸಿ.
  • ಇಂಟರ್ವ್ಯೂ ಇದೆ ಅಂತ ಬೆಳಗ್ಗಿನ ತಿಂಡಿ ತಿನ್ನದೆಯೇ ಓಡುವುದು ಯಾಕೆ? ಚೆನ್ನಾಗಿಯೇ ಆಹಾರ ಸೇವಿಸಿ ಅದು ನಿಮಗೆ ಸುಸ್ತಾಗದಂತೆ ಕಾಪಾಡುತ್ತದೆ.
  • ಮುಖ್ಯವಾಗಿ ಹಾಗೂ ಕೊನೆಯ ನನ್ನ ಅಭಿಪ್ರಾಯವೆಂದರೆ, ನಾನು ಎಷ್ಟೋ ಭಾರಿ ನೋಡಿದ್ದೇನೆ ನಿಮ್ಮ ಇಂಟರ್ವ್ಯೂ ಆದ ನಂತರ ಮುಂದಿನ ಅಭ್ಯರ್ಥಿಯ ಬಳಿ ಹೋಗಿ ಏನೇನು ಪ್ರಶ್ನೆಗಳನ್ನು  ನಿಮಗೆ ಕೇಳಿದರು ಅನ್ನುವುದನ್ನ ಹೇಳೋದು.!!! ಇದು ಒಳ್ಳೆಯದಲ್ಲ ಅಲ್ಲವೇ? ಏಕೆಂದರೆ ನಿಮಗಿಂತ ಕಡಿಮೆ ಅಂಕಗಳನ್ನು ಗಳಿಸಿದವರು, ಅಥವಾ ಅಶಕ್ತರು  ನಿಮಗೆ ಸಿಗಬೇಕಾದ ಅವಕಾಶವನ್ನ ನಿಮ್ಮಿಂದ ಕಸಿದುಕೊಂಡಂತೆ ಆಗುವುದಿಲ್ಲವೇ? ಅಥವಾ ನಿಮಗೆ ಕೇಳಿದ ಪ್ರಶ್ನೆಗಳನ್ನೇ ಕೇಳುತ್ತಾರೆ ಅನ್ನುವ ಕಲ್ಪನೆ ಬೇಡ…  ಪ್ರಶ್ನೆಗಳನ್ನು  ಬೇರೆ ಬೇರೆ (ವಿಚಿತ್ರ!!)ರೀತಿಯಾಗಿ ಕೇಳುವಂತೆ ಎಚ್ ಆರ್ ಗಳಿಗೆ ತರಬೇತಿ ನೀಡಲಾಗಿರುತ್ತದೆ ..ಅಲ್ಲವೇ?

ನಮ್ಮ ಗುರಿ, ಉದ್ದೇಶ ಹಾಗೂ ನಾವು ಯಾವ ಕ್ಷೇತ್ರದಲ್ಲಿ ಕೆಲಸಮಾಡಬೇಕು ಅಂದುಕೊಂಡಿದ್ದೆವೋ ಅದನ್ನ ಸಾಧಿಸುವವರೆಗೂ ನಮ್ಮ ಆತ್ಮ ವಿಶ್ವಾಸ ಕುಂದದಿರಲಿ, 100 ಇಂಟರ್ವ್ಯೂ ಗಳಾಗಲಿ  101 ನೆಯಯದು ನಿಮಗಿಷ್ಟವಾದ ಕೆಲಸವನ್ನು ತಂದುಕೊಡುತ್ತದೆ ಅನ್ನುವ ನಂಬಿಕೆ ಇರಲಿ. ಸಮಸ್ಯೆಗಳು ಯಾರಿಗಿಲ್ಲ? ಎಲ್ಲರೂ ಒಂದಿಲ್ಲೊಂದು ಸಮಸ್ಯೆಯಲ್ಲೇ ಇರುತ್ತಾರೆ. ಅದನ್ನೆಲ್ಲಾ ಬದಿಗಿಟ್ಟು ನಮ್ಮ ಗುರಿಯತ್ತ ಗಮನವಿರುವೆಡೆಗೆ ಆದಷ್ಟು ಪ್ರಯತ್ನ ಮಾಡೋಣ ಅಲ್ಲವೇ?  ಪ್ರತಿ ಭಾರಿ ಇಂಟರ್ವ್ಯೂ ಕರೆದಾಗಲೂ ಒಳ್ಳೆಯ ರೀತಿಯಲ್ಲಿ  ಪ್ರದರ್ಶನ ನೀಡುತ್ತೇನೆಂಬ  ದೃಡ ಸಂಕಲ್ಪ ವಿರಲಿ, ನನ್ನೆಲ್ಲ ಪ್ರೀತಿಯ ಮಲೆನಾಡ ಕೆಲಸ ಹುಡುಕುವ ಜೀವಗಳಿಗೆ ಆದಷ್ಟು ಬೇಗ ಕನಸು ನನಸಾಗಲಿ…….ಮತ್ತೆ ಇನ್ನೊಂದು ವಿಚಾರ, ಈ ದೀಪಾವಳಿಯ ಸಂಧರ್ಬದಲ್ಲಿ ನಮ್ಮೂರಿನ ಕಾಲೇಜಿನ ಹುಡುಗರಿಗೆ ಈ ವಿಚಾರದಲ್ಲಿ ಒಂದಿಷ್ಟು ಮಾಹಿತಿಯನ್ನ ಅವರ ಕ್ಲಾಸ್ ರೂಮುಗಳಿಗೆ ಹೋಗಿ ತಿಳಿಸುವ ಅವಕಾಶ ಒದಗಿದೆ ಸೋ ನಮ್ಮ ಇಡೀ ತಂಡದೊಂದಿಗೆ ಸಧ್ಯದಲ್ಲೇ ನಮ್ಮೂರಿನ ಭಾವೀ ಉದ್ಯಮಿಗಳನ್ನ / ಪ್ರೊಫೆಷನಲ್ಸ್ ಗಳನ್ನ ಮುಖತ: ಭೇಟಿಮಾಡುತ್ತೇವೆ …..ಬರಲೇ ? ಮತ್ತೆ ಸಿಗೋಣ.

ಈ ಅರ್ಟಿಕಲ್ಲಿಗೆ ಸೇರಿದಂತೆ ನನ್ನ ಮೊದಲ ಲೇಖನ “ಉದ್ಯೋಗ ನಮ್ಮವರಿಗೆಕಿಲ್ಲ” ವನ್ನೂ ನೋಡಬಹುದು.