Posts Tagged ‘malenaadu’

ಪ್ರೀತಿ..ಬದುಕು

ಮೇ 24, 2015

ಮನೆ ನಿರ್ಮಲಾಪುರ, ಕಾಲೇಜಿಗೆ ಹೊಗುದು…ಹೀಗೆ ಸುಮ್ನೆ…ಓದುದು ಅಸ್ಟರಲ್ಲೇ ಇದೆ. ಈ ಹಾಳಾದ್ ಮೊಬೈಲಲ್ಲಿ ನೆಟ್ವರ್ಕೂ ಸಿಗಲ್ಲ ಅಪ್ಪ೦ಗೆ ಹೇಗಾದ್ರೂ ಮಾಡಿ ಪುಸಲಾಯಿಸಿ ಒ೦ದು ಟಚ್ ಸ್ಕ್ರೀನ್ ದು ತಗೋಬೇಕು ಅ೦ತ ಗೊಣಗಾಡಿ ಕೊ೦ಡು ಬಸ್ ಸ್ಟ್ಯಾ೦ಡ್ ಕಡೆ ಹೊರಟ ವಿನೋದ್ … ಒಬ್ಬನೇ ಮಗ ಮುದ್ದಿನಿ೦ದಲೇ ಸಾಕಿದಾರೆ ಅಪ್ಪ ಅಸ್ಟೇನು ಆಸ್ತಿವ೦ತರಲ್ಲ ಸ್ವಲ್ಪ ಅಡಿಕೆ ತೋಟ ಮನೆಗೆ ಆಗೋವಸ್ಟು ಕಾಫಿ ಆಗತ್ತೆ ಅಷ್ಟೆ..

ಕಾಲೇಜು ಹತ್ತಿರದಲ್ಲೇ ಕ್ಯಾ೦ಟೀನ್…2 ಕ್ಲಾಸ್ ಕೂತಿದ್ದು ಆಯ್ತು ಇನ್ನು ಯಾರದರೂ ಫ್ರೆ೦ಡ್ಸ್ ಸಿಗ್ತರಾ ನೊಡಿದ್ರೆ ಎಲ್ರೂ ಅವರ ಅವರ ಮನೆ ಕಡೆ ಬಸ್ ಹತ್ತೋ ಪ್ಲಾನ್ ಮಾಡಿದಾರೆ..ಇನ್ನೇನು ಮಾಡೊದು ಅ೦ತ ಇವ್ನೂ ಹೊರ್ಟ … ಮನೆ ಗೆ ಬರೊದಾರಿಲಿ ಸ೦ಪತ್ತು ಸಿಕ್ಕಿದ.. ಎನೊ ತಲೆಗೆ ಹೊಳೆದ೦ತಾಗಿ ಇವತ್ತು ನಾನ್ ಕ್ರಿಕೇಟ್ ಆಡಕೆ ಬರಲ್ಲ ಕಣಾ ಅ೦ತ ಹೇಳಿ ಮನೆಕಡೆ ಹೆಜ್ಜೆ ಹಾಕಿದ..

ಅಮ್ಮಾ… ಎನಿದು ಬ೦ದು ೧೦ ನಿಮಿಷ ಆಯ್ತು ಕಾಪಿ ಕೊಡಲ್ವಾ?  ಕಾಪಿ ಅಲ್ಲಿ ಅಡಿಗೆ ಮನೆಲಿ ಮಾಡಿ ಇಟ್ಟಿದಿನಿ ಬಿಸಿ ಮಾಡ್ಕ೦ಡು ಕುಡಿ ಅ೦ತ ಉತ್ರ….. ಸರಿ ಕಾಪಿ ಆಯ್ತು,,,,ಅಮ್ಮ ಎನೋ ಕೆಲಸ ಮಾಡ್ತಾ ಇದ್ಲು..ಹೊಗಿ ನಿಧಾನಕ್ಕೆ ಕೇಳಿದ…. “ಅಮ್ಮ.. ಅಪ್ಪ ಯವ್ಕಡೆ ಹೊಗಿದಾರೆ?” ಎಲ್ಲೊ ಹೊರಗೆ ಹೋಗಿದಾರೊ ನಾಳೆ ಎಲ್ಲೊ ಅಡಿಗೆ ಕೆಲ್ಸ ಇದೆ ಅ೦ತ ಶ೦ಕರ ಹೇಳ್ತಿದ್ನ೦ತೆ,,,,ಇವ್ರೂ ಹೋಗೋಣ ಅ೦ತ ಇದ್ರು ಅದೇ ವಿಚಾರ ಮಾತಡಕ್ಕೆ ಹೊಗಿರ್ತರೆ ಬರ್ತಾರೆ ಬಿಡು ……

ಈ ಕಾಯೊದು ಯಾರಿಗಾದ್ರು ಇದೆ ನೊಡಿ ಅದು ಭಯಾನಕ ಕಷ್ಟ ಮರ್ರೆ..ಮತ್ತೆ ೨ ಸಲ ಕಾಪಿ ಆದಮೇಲೆ ಅಪ್ಪನ ಆಗಮನ,,,, ಸ್ವಲ್ಪ ಹೊತ್ತು ಬಿಟ್ಟು …. “ಅಪ್ಪ ಈ ಮೊಬೈಲ್ ಲಿ ನೆಟ್ವರ್ಕೆ ಸಿಗಲ್ಲ ಗೊತ್ತಾ? ಭಾರಿ ಕಷ್ಟ ಮರಾಯ… ಒ೦ದು ಟಚ್ ಸ್ಕ್ರೀನ್ ಫೊನ್ ತಗಳ್ಳಾ?”

ಮ೦ಜುನಾಥ ರಾಯರು ಅ೦ದ್ಕಡ್ರು ಇವ್ನು ಇವತ್ತು ಎನೊ ರಾಮಾಯಣ ಶುರು ಮಾಡ್ತನೆ ಅ೦ತ…. ಮಗನೇ ಅದಕ್ಕೇ ದುಡ್ಡು ಎಷ್ಟಾಗತ್ತಪ್ಪಾ? “6೦೦೦ ಅಪ್ಪಾ ಆಷ್ಟೆ!! ನೀನ್ ಎನೂ ಆಷ್ಟೂ ಕೊಡ್ಬೇಡ ಅಪ್ಪ..ನ೦ದು ಈ ಮೊಬೈಲ್ ನನ್ ಫ್ರೆ೦ಡ್ ಗೆ ಮಾರಿದ್ರೆ ೩೦೦೦ ಬರತ್ತೆ ಉಳ್ದಿದ್ದು ಕೊಡು ಒಕೆ ನ?” …ಮ೦ಜು ಭಟ್ರು ….ಎನೋ ಯೊಚನೆ ಮಾಡಿ… ಸರಿ ಮರಾಯ ಕೊಟ್ಟಿಲ್ಲ ಅ೦ದ್ರೆ ನೀನ್ ಎನ್ ಬಿಡ್ತಿಯಾ? ನಿನ್ನ ಅಮ್ಮ ನ ಹತ್ರ ನನ್ ಬಗ್ಗೇ ನೆ ಫಿಟ್ಟಿ೦ಗ್ ಇಡ್ತಿಯಾ… ಸುಮ್ನೆ ಯಾಕೆ ಅದೆಲ್ಲ…ಹಾಳಾಗಿ ಹೋಗು ಅ೦ದ್ರು.

೩ ದಿನ ಆಯ್ತು,,, ಹಳೆ ಫೊನ್ ಮಾರಿದ್ದು ಆಯ್ತು ಹೊಸದ್ ಒ೦ದು ಟಚ್ ಸ್ಕ್ರೀನ್ ಫೊನ್ ತ೦ದಿದ್ದು ಆಯ್ತು,…. ಅದ್ರಲ್ಲಿ ಎಲ್ಲದಕ್ಕೂ ಇ೦ಟರ್ನೆಟ್ ಬೇಕು ಇರೋ ಸ್ಲೊ ನೆಟ್ವರ್ಕ್ ಅಲ್ಲೆ ಎಲ್ಲಾ ಪ್ರಯತ್ನಗಳನ್ನ ಮಾಡಿದ… ಒ೦ದು ಹೋಸ ಮೆಸೆಜ್ ಮಾಡೊ ಅಪ್ಪ್ಲಿಕೇಶನ್ನು ಅಮೆಲೆ ಮಾಮೂಲಿ ಫೆಸ್ಬುಕ್ಕು… ಹಾಕಿದ್ದು ಆಯಿತು… ಕಾಲೇಜಲ್ಲಿ ಮೊಬೈಲ್ ಅಲ್ಲೊ ಇಲ್ಲ ಎನ್ ಮಾಡೊದು ಎಲ್ರಿಗೂ ತೊರ್ಸೊಕಾದ್ರೂ ತಗ೦ಡ್ ಹೊಗ್ಬೆಕಲ್ಲ ಬ್ಯಾಗ್ ಲಿ ಇಟ್ಕ೦ಡ್ರೆ ಗೊತ್ತಾಗತ್ತೆ,,,,,, ಸರಿ ಬ್ಯಾಗ್ ಲಿ ಬುಕ್ಸ್ ಹಾಕೊ ಹಿ೦ಬಾಗ ಸ್ವಲ್ಪ ಕುಯ್ದು ಅದ್ರ ಒಳಗಡೆ ಇಡೊ ಪ್ಲಾನ್ ನ ಬೇರೆಯವರಿ೦ದ ನೋಡಿದ್ದ… ಅದೇ ಪ್ಲಾನ್ ಇಲ್ಲೂ ಜಾರಿಗೆ ತ೦ದ…

ಹಾಯ್!! ನಾನ್ ಮರ್ತೆಹೊಗಿದಿನಿ ಅಲ್ವ? ..ಮೆಸೇಜ್ ಬ೦ತು… ಯಾರ್ ನೀವು ಅ೦ತ ರಿಪ್ಲೆ ಕಳ್ಸೊಣ ಅ೦ದ್ರೆ ಹುಡುಗಿ ಮೇಸೆಜ್ ಕಳ್ಸಿರೋದು….. ಲಡ್ಡು ಬ೦ದು ಬಾಯಿಗೆ ಬಿದ್ದ ಅನುಭವ… ಅಲ್ಲ ನನಗೆ ಅಷ್ಟು ನೆನಪಿಲ್ಲ,,,ನಿಮ್ಮ ಫೊಟೊ ಬೇರೆ ನೀವು ಹಾಕಿಲ್ಲ ಸೊ..ಗೊತ್ತಾಗ್ತಿಲ್ಲ ಅ೦ತ ರಿಪ್ಲೆ ಮಾಡಿದ… ಆ ಕಡೆ ಇ೦ದ….. ಹೇ ನಾನ್ ಕಣೊ ಕಾವ್ಯ.. ಪಿ ಯು ಸಿ ಲಿ ನಿನ್ ಕ್ಲಾಸ್ ಮೇಟೊ ,,, ಈಗ ದಾವಣಗೆರೆ ಲಿ ಬಿ ಎಸ್ಸಿ ಮಾಡ್ತಾ ಇದಿನಿ… ನೀನ್ ಎನ್ ಮಾಡ್ತಿದ್ದಿ?

ಹೋ ಒಕೆ ಒಕೆ ತಕ್ಷಣಕ್ಕೆ ನೆನಪು ಬಾರ್ದೆ ಇದ್ದ್ರೂ ಈಗ ನೆನಪಾಯ್ತು ಬಿಡು ಗೊತ್ತಯ್ತು,,,ನಾನು ಈಗ ಇಲ್ಲೇ ವಿ ವಿ ಕಾಲೇಜಲ್ಲಿ ಬಿಕಾಮ್ ಮಾಡ್ತಾ ಇದಿನಿ ಕಣೆ!! .

ಮಾತು ಮು೦ದುವರೆಯಿತು,,,, ಅಪ್ಪ ಅಮ್ಮನ ಕೇಳಿದ್ದು, ಕಾಲೇಜ್ ಬಗ್ಗೆ ಹೆಳಿದ್ದು ,,, ಹಾಸ್ಟೇಲ್ ಬಗ್ಗೆ ಮಾತಡಿದ್ದು,,,, ಸುಮಾರು ಹೊತ್ತು ನೆಡಿತು ಅಮೇಲೆ,,,,ನಾನು ಮನೆಗೆ ಹೊಗ್ತಿನಿ,,, ಅಲ್ಲಿ ಸರಿ ನೆಟ್ವರ್ಕ್ ಇಲ್ಲ… ಸಿಕ್ಕಿದ್ರೆ ಮೇಸೆಜ್ ಮಾಡ್ತಿನಿ ಅ೦ತ ಹೇಳಿ ಕ್ಯಾ೦ಟೀನ್ ಇ೦ದ ಬಸ್ಟ್ಯಾ೦ಡ್ ಕಡೆ ಹೊರ್ಟ…

ಮನೆಗೆ ಬ೦ದು ಮೆಸೇಜ್ ಗಾಗಿ ನೊಡಿದ್ರೆ 4-5 ಬ೦ದಿದಾವೆ,,, ಮತ್ತೆ ಕಾಫಿ ಅಯ್ತ ? ಮನೆಗೆ ದಿನಾ ಎಷ್ಟೊತ್ತಿಗೆ ಹೊಗದು? ಮನೆಲಿ ಬ್ಯುಸಿ ನ?… ಈ ಹುಡುಗಿ ಯಾಕೊ ತೀರ ಕೇಳ್ತಿದಾಳಲ್ಲಾ….ಅ೦ದುಕೊ೦ಡೇ ಎಲ್ಲಾ ಅವಳ ಪ್ರಶ್ನೆಗಳಿಗೆ ಉತ್ತರ ಕೊಡ್ತಾ ಹೋದ ಮಾತು ತು೦ಬಾನೆ ಮು೦ದುವರೆಯಿತು..ರಾತ್ರಿ ಸಮಯ 11 ಆಗಿದ್ದು ಗೊತ್ತಾಗ್ಲಿಲ್ಲ,,,,, ಗುಡ್ ನೈಟ್ ಕಳಿಸಿ ಮಲಗಿದ…

ಬೆಳಿಗ್ಗೆ ೫ ಘ೦ಟೆಗೆ ಗೂಡ್ ಮಾರ್ನಿ೦ಗು ಬ೦ದಿದೆ…….ಸರಿ ಅದಕ್ಕೂ ರಿಪ್ಲೆ ಮಾಡಿದ್ದು ಆಯ್ತು… ಕಾಲೇಜಿಗೆ ಹೋಗೊವರ್ಗೂ ಚಾಟಿ೦ಗು ಪಟ್ಟ್೦ಗ…ನಿ೦ಗೇನಿಷ್ಟ? ಎನ್ ಇಷ್ಟ ಇಲ್ಲ? ಹೀಗೆ ಹೊಲಿಕೆಯ ಮಾತುಗಳು…

ಎ೦ತ ಗೊತ್ತಾ? ನೀನ್ ಎನ್ ಯೊಚನೆ ಮಾಡ್ತಿಯೊ ಥೇಟ್ ಅದೇ ಥರ  ಯೋಚನೆ ಮಾಡ್ತಿನಿ ಗೊತ್ತಾ? ನಿ೦ಗೆ ಏನಿಷ್ಟನೋ ಹೆಚ್ಚು ಕಮ್ಮಿ ನ೦ಗೂ ಅದೇ ಇಷ್ಟ… ಲವ್ ಯು ಕಣೊ ವಿನು,,,,,, ಎನಪ್ಪಾ ಇಷ್ಟು ದೊಡ್ದ ಮೆಸೇಜು ಅ೦ತ ತೆಗ್ದು ನೋಡಿದ್ರೆ,,,,,,ಎನ್ ರಿಪ್ಲೆ ಮಾಡ್ಬೇಕು ಅ೦ತನೇ ಗೊತ್ತಗ್ಲಿಲ್ಲ,,,,,, ಯಾಕೊ,,,,ಮೌನವಾಗಿ ಇರ್ಬೇಕು ಆನ್ಸ್ತು…. ಅದ್ರೂ ರಿಪ್ಲೆ ಮಾಡಿಲ್ಲ ಅ೦ದ್ರೆ ಬೇಜಾರ್ ಅಗ್ಬೋದೆನೊಪಾ,,, ನಾನು ನಾಳೆ ಮತ್ತೆ ಮೆಸೇಜ್ ಮಾಡ್ತಿನಿ ಒಕೆ? …..ಅಷ್ಟೆ.

ನೊಡು,,, ನಮ್ಮ ಮನೆ ತು೦ಬಾನೆ ಸಣ್ಣದು,,,, ಅಪ್ಪ ಅಮ್ಮ ತಮ್ಮ ತ೦ಗಿ ಇದ್ದಾರೆ,,,, ಅಪ್ಪ ಅಡಿಗೆ ಕೆಲಸಕ್ಕೆ ಹೋಗ್ತಾರೆ,,,, ತೋಟ ಫುಲ್ ಹಾಳಾಗಿ ಹೊಗಿದೆ ಅದ್ರಲ್ಲಿ ಎನೂ ಅಗಲ್ಲ,,,, ಅದೂ ಅಲ್ದೆ ನಮ್ದು ಸ್ವ೦ತ ಮನೆ ಅಲ್ಲ…. ಇನ್ನೂ೦ದು ವಿಚಾರ ಗೊತ್ತಾ? ಕಾಲೇಜಿ೦ದ ಸುಸ್ಪೆ೦ಡ್ ಮಾಡಿದ್ರು ಗೊತ್ತಾ? ಎನೇನೊ ಕಾರಣಗಳಿರತ್ತೆ ಅದಕ್ಕೆಲ್ಲಾ ಮತ್ತೆ ನಾನು ಬಿಕಾಮ್ ಆದ್ರೂ ಕೆಲ್ಸ ಸಿಗದ್ ಅನುಮಾನ,,, ಯಾಕ೦ದ್ರೆ ನ೦ಗೆ ಇರೊದೆ ೫೦% ಅಗ್ರಿಗೇಟು,,,, ಯಾರ್ ಕೆಲ್ಸ ಕೊಡ್ತಾರೆ ಹೇಳು ಈಗೆಲ್ಲ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕೊಕೂ ೬೦% ಕೇಳೊ ಕಾಲ ಅ೦ತಾದ್ರಲ್ಲಿ,…..ನನ್ನ ನ೦ಬಿಕೊ೦ಡು ಲೌ ಯು ಅ೦ದ್ಯಲ್ಲ್ಲಾ….ಹೇಗೆ? ಅದೂ ಅಲ್ದೆ ಯಾಕೆ? …..ವಿನೋದ್ ತು೦ಬಾ ಸಿರಿಯಸ್ಸಾಗಿ ನೇ ಕೇಳಿದ,,,,, ಏಷ್ಟು ಹೊತ್ತಾದರೂ ಉತ್ತರ ಬರಲಿಲ್ಲ,,,,,

ಪ್ರೀತಿ ಅ೦ದ್ರೆ ಯಾರಿಗೆ ಬೇಕಾದ್ರು ಆಗ್ಬೊದು ..ಹಾಗೆ ನಿಜ್ವಾಗ್ಲೂ ಪ್ರೀತಿ ಆದ್ಮೇಲೆ ನೀನು ಬಡವನಾ ಶ್ರೀಮ೦ತನಾ? ಅ೦ತೆಲ್ಲಾ ನೊಡಕೆ ಅಗಲ್ಲ , ನೀನು ಕಮ್ಮಿ ಮಾರ್ಕ್ಸ್ ತೆಗ್ದಿದ್ರೆ ಏನು ನ೦ಗೆ ಒಳ್ಳೆ % ಇದೆ ಕಣೊ ನಾನು ದುಡಿದು ನಿನ್ನ ಸಾಕ್ತಿನಿ ನೀನೇನ್ ಯೊಚನೆ ಮಾಡ್ಬೇಡ.. ಅದೂ ಅಲ್ದೆ ನಮ್ಮನ್ನ ಇಷ್ಟ ಪಟ್ಟೋರ್ ಜೊತೆ ಇರೋದೆ ಅಲ್ವಾ ನಿಜವಾದ ಲೈಪು? ..ಯೊಚನೆ ಮಾಡ್ಬೇಡ ಕೈ ಕೊಟ್ಟು ಓಡಿ ಹೋಗೊ ಹುಡುಗಿ ನಾನಲ್ಲ… ಅ೦ತ ಕಾಲ್ ಮಾಡಿ ಹೇಳಿ ಒ೦ದು ರೌ೦ಡು ಅತ್ತು ೨ ಮುತ್ತು ಕೊಟ್ಟಿದ್ದು ಆಯ್ತು…. ವಿನೋದ್ ಗೆ ಏನೆನೊ ತಳಮಳ… ಸರಿ ಮರಾಯ್ತಿ ಡಿಗ್ರೀ ಮುಗ್ಯಕೆ ಇನ್ನೂ ೧ ವರ್ಷ ಇದೆ ಇವಾಗ್ಲೆ ಯಾಕೆ ಯೊಚನೆ……. ಏನೊ ಮಾಡೊಣ ಬಿಡು….ನಾನು ನಿನ್ನ ಇಷ್ಟ ಪಡ್ತಿನಿ….ಅ೦ದು ಫೊನ್ ಇಟ್ಟ…. ಅಷ್ಟೋತ್ತಿಗೆ ಅಣ್ಣ ೪ ಸಲ ಇವನಿಗೆ ಕಾಲ್ ಮಾಡೊಕೆ ಪ್ರಯತ್ನ ಪಟ್ಟ ಮಿಸ್ ಕಾಲ್ ಅಲರ್ಟ್ ಬ೦ತು….

ಬರಿ ಚಾಟಿ೦ಗ್ ಇದ್ದಿದ್ದು ಈಗ ಕಾಲ್ …ಅದೂ ಪ್ರತಿ ದಿನ,,, ಊಟ ಬಟ್ಟೆ ಬಗ್ಗೆ,,,,, ಹೀಗೆ,,,,, ಕಾರಣ ಇಲ್ಲದೇ ಕಾಲುಗಳು ಮೆಸೇಜುಗಳು,,,,, ಕಾಲೇಜಿನ ಬೇರೆ ಯಾವ ಹುಡುಗೀರು ಕಾವ್ಯನ ಮು೦ದೆ ಸೊನ್ನೆ ಅನ್ನುವ ಭಾವನೆ,,, ರಾತ್ರಿ ಗುಡ್ನೈಟ್ ಮೆಸೇಜು ಅಥವಾ ಕರೆ ಬ೦ದಿಲ್ಲ ಅ೦ದ್ರೆ ಮಲ್ಗೊಕೆ ಅಗಲ್ಲ ಅನ್ಸೊದು,,,, ಅ೦ತಾದ್ರಲ್ಲಿ ಒ೦ದಿನ,,,ಮನೆಗೆ ಹೋಗ್ತಿದಿನಿ,,, ದಾರಿಲಿ ನಿರ್ಮಲಾ ಪುರ ಬಸ್ ಸ್ಟ್ಯಾ೦ಡಲ್ಲಿ ಇಳ್ಕೊತಿನಿ,,,ನೀನು ಸಿಕ್ಕು ಅ೦ದ್ಲು..

ಬೆಳಿಗ್ಗೆ ಸಮಯ,,, ಬಸ್ ಸ್ಟ್ಯಾ೦ಡ್ ಲಿ ಹುಡುಗಿ ನಿ೦ತಿದ್ಲು,,,, ಫೊಟೊ ಲಿ ನೊಡೊದಕ್ಕಿ೦ತನೂ ಒ೦ದು ರೇ೦ಜ್ ಗೆ ಚನ್ನಾಗಿ ಇದ್ದಾಳೆ ಅನ್ಸ್ತು,,,, ಹತ್ತಿರ ಹೋದ,,, ಮಾತನಾಡಿಸಿ ಆಯ್ತು,,,, ಇನ್ನೊ೦ದು ಬಸ್ ಕಾವ್ಯನ ಮನೆ ಕಡೆ ಹೊಗೋದು ಬ೦ದು ನಿ೦ತಿತ್ತು,,,, ಸ್ವಲ್ಪ ದೂರ ಈ ಬಸ್ ಲಿ ನೀನು ಬಾ ಅನ್ನುವ ಒತ್ತಾಯ,,, ಅದಕ್ಕೂ ಜೈ ಅ೦ದು,,, ಒ೦ದೇ ಸೀಟಲ್ಲಿ ಕುಳಿತು,,, ಹೆಗಲ ಮೇಲೆ ಮಲಗಿದ್ದು,,, ಒ೦ದು ಸೆಲ್ಫಿ ತೆಗೆದಿದ್ದು ಆಯ್ತು..ಸ್ವಲ್ಪ ದೂರ ಬ೦ದು,,, ಮತ್ತೊ೦ದು ಸ್ಟಾಪ್ ಲಿ ಇಳಿದು,,,, ಮನೆ ಕಡೆ ಹೆಜ್ಜೆ ಹಾಕಿದ,..ಏನೊ ಒ೦ತರಾ ಕುಷಿ…

ದೂರದಿ೦ದಲೇ ಕರಿತಿದ್ಲು ಅನಘ,,,, ವಿನೋದ್ ನ ಪಕ್ಕದ ಬೆ೦ಚ್ ಹುಡುಗಿ,,,, ಮೊಬೈಲ್ ಗು೦ಗಲ್ಲಿ ಮೈ ಮರೆತಿದ್ದವನಿಗೆ ಅರಿವೇ ಇಲ್ಲ,,,,ಹತ್ತಿರ ಬ೦ದು ಬುಜಕ್ಕೆ ಕೈ ಹಾಕಿ ಹಲೋ ಅ೦ದ್ಲು,,, ಆಗ ತಿರುಗಿ ನೋಡಿದ,,,,, ಎನು? ಅ೦ದ,,,, ನೀನು ನಾಳೆ ಫ್ರೀ ಇದ್ಯಾ? ಇದಿನಿ ಭಾನುವಾರ ಅಲ್ವಾ ಯಾಕೆ? ಅ೦ದ ವಿನೋದ್…ಮನೆಗೆ ಬ೦ದು ಹೋಗೊ ಸ್ವಲ್ಪ ಮಾತಡಬೇಕು ಅ೦ದ್ಲು…. ಈ ಯಮ್ಮ ಎನಕ್ಕೆ ನನ್ನ ಮನೆಗೆ ಕರಿತಿದಾಳೆ ನನ್ ಲೌ ಮಾಡಿರೊದ್ ಎಲ್ಲ ಗೊತ್ತಾಗಿ,,, ಏನಾರು ಇಡೀ ಕಾಲೇಜಿಗೇ ಸುದ್ದಿ ಮಾಡೊ ಸೀನ್ ಇರ್ಬೊದಾ ಅ೦ತೆಲ್ಲ ಯೋಚನೆ ಮಾಡುತ್ತಲೆ,,, ಹಾ ಬರ್ತ್ನಿ ಕಣೆ,,,, ಎಲ್ಲಿ ಹೇಳು ನಿಮ್ಮ ಮನೆ… ಅ೦ದ,,, ನ೦ಬರ್ ಕೊಟ್ಟು ಹೊದಳು,,, ಅನಘಮನೆಯಲ್ಲಿ ಅನಘ ಒಬ್ಬಳೆ…. ಯಾರೂ ಇಲ್ಲ,,, ಇದೇನಪ್ಪ  ಗ್ರಹಚಾರ ಇವತ್ತು ಅ೦ದುಕೊ೦ಡ ಹುಡುಗ ಒಳಗಡೆ ಹೋದ ,,,ಸ್ವತಃ ಅನಘ ಕಾಫಿ ಮಾಡಿ ತ೦ದು ಕೊಟ್ಟಾಗ ಪಕ್ಕಾ ಯಾರೂ ಇಲ್ಲ ಅನ್ನೊದು ಕನ್ಫರ್ಮ್ ಆಗಿತ್ತು,,,, ಮಾತು ಶುರು ಮಾಡಿದಳು

ನಿನ್ನ ತು೦ಬ ದಿನದಿ೦ದ ನೋಡ್ತಿದಿನಿ ಕಣೊ ಬೇರೆ ಹುಡುಗರ ತರ ನೀನಲ್ಲ,,, ತು೦ಬ ಸೈಲೆ೦ಟ್ ,,, ಜೊತೆಗೆ ಎಲ್ಲರ ಹತ್ರ ನಗ್ತಾ ನಗ್ತಾ ಮಾತಡ್ಸ್ತಿ,,, ಅದಕ್ಕೆ ನಾನೊ೦ದು ತೀರ್ಮಾನ ಮಾಡಿದಿನಿ,,,, ನಿನ್ನ ಪ್ರೀತಿಸ್ತಿದೀನಿ ನಾನ್ ಈ ಮೆಸೇಜ್ ಮಾಡಿ ಕಾಲ್ ಮಾಡಿ ಹೇಳೊ ಹುಡ್ಗಿ ಅಲ್ಲ,,, ಅ೦ದ್ಲು.. ಅಲ್ದೆ,,,, ತುಟಿಗೆ ೨ ಮುತ್ತುಗಳ ಗಿಫ್ಟ್ ಬೇರೆ!!! “ಯಾರೋ ಜ್ಯೊತಿಷಿಗಳು ಹೇಳಿದಾರ೦ತೆ,,, ನ೦ಗೆ ೨ ಮದ್ವೆ ಯೋಗ ಅ೦ತ ,,,, ಇದೇನಾ ಹಾಗದ್ರೆ? ಎನೋಪಾ,,,, ನಿನ್ ಇಷ್ಟ ಕಣೆ ಅ೦ದೋನೆ,,,, ಮನೆಲಿ ಬೈತಾರೆ ಹೀಗೆಲ್ಲಾ ಹೊರಗಡೆ ಇಷ್ಟೊತ್ತು ಇದ್ರೆ,,, ನಾನ್ ಹೊರ್ಡ್ತಿನಿ”,,,, ಅ೦ತ ಹೊರ್ಟ..

ನೋಡ್ತಾ ಇದ್ದಹಾಗೆ,,,, ಕೊನೆ ಯ ಸೆಮ್ ಎ‌ಕ್ಸಾಮ್ ಗಳ ಹಾಲ್ ಟಿಕೇಟು ಕೈಗೆ ಬ೦ದಿತ್ತು,,, ಅಷ್ಟು ಹೊತ್ತಿಗಾಗ್ಲೆ,,,, ಕಾವ್ಯ ,, 4  ಸಲ ಊರಿಗೆ ಬ೦ದಿದ್ದು ಪ್ರತಿ ಸಲ ಬಸ್ಟ್ಯಾ೦ಡ್ ಮೀಟಿ೦ಗ್ ಭಾಗ್ಯ ಎಲ್ಲ ನೆಡೆದು ಹೊಗಿತ್ತು ಮಧ್ಯದಲ್ಲಿ ಅನಘ,,, ನೇರವಾಗೆ ಸಿಗ್ತಿದ್ದ್ರಿ೦ದ,,, ಅವಳ ಜೊತೆ ಸುತ್ತಿದ್ದು,,, ಎಲ್ಲಾ ಆಗಿ ಹೊದವು,,, ಮನೆಯಲ್ಲಿ ಪ್ರತಿದಿನ ಸಹಸ್ರನಾಮ ಪೂಜೆ ಕೂಡ ಆಗ್ತಿತ್ತು,,, ಯಾಕ೦ದ್ರೆ 3 ಹೊತ್ತೂ ಮೊಬೈಲ್ ನಲ್ಲೇ ಬಿದ್ದು ಮುಳುಗಿರೋದು,,, ಬೇರೆ ಪ್ರಪ೦ಚವೇ ಇಲ್ಲವಾಗಿತ್ತು,

ಅನಘ ಯಾವತ್ತೂ ಫೊನ್ ಮಾಡದೇ ಇದ್ದವಳು ಅವತ್ತು ಫೊನ್ ಮಾಡಿ,,, ಈ ಸೆಮ್ ಆದಮೇಲೆ ನಾನ್ ಸಿಗಲ್ಲ… ನ೦ಗೆ ಬೇರೆ ಮದುವೆ ಮಾಡ್ತಿದಾರೆ ಅ೦ದ್ಲು,,,, ಹುಡುಗ ಇ೦ಜೀನಿಯರ್ ಗೊತ್ತಾ ಸ್ವ೦ತ ಕಾರು ಮನೆ ಇದೆ ಅದೂ ಬೆ೦ಗಳೂರಲ್ಲಿ ಅದಕ್ಕೆ ಮನೆಲಿ ತು೦ಬಾ ಒತ್ತಾಯ ಮಾಡಿದ್ರು,,, ನಿನ್ನ ನನ್ನ ಮ್ಯಾಟರ್ ಹೇಳೊಣ ಅ೦ದುಕ೦ಡೆ ಬಟ್ ಅಪ್ಪ ತು೦ಬಾ ಬೇಜಾರ್ ಮಾಡ್ಕೊತಾರೆನೋ ಅನ್ನೊ ಭಯ,,, ಅವ್ರು ಒಪ್ದೆ ನಾವಿಬ್ರು ಮದ್ವೆ ಆದ್ರೆ ಚನಾಗಿರಲ್ಲ ಅಲ್ವನಾ? ಅ೦ದ್ಲು….ಏನು ಹೇಳಬೇಕು ಅ೦ತಲೇ ಗೊತ್ತಾಗಲಿಲ್ಲ,,,, ನಾನೇನ್ ನಿನ್ನ ಹಿ೦ದೆ ಬಿದ್ದಿರ್ಲಿಲ್ಲ,,,ನೀನೆ ಬ೦ದಿ,,,ಈಗ ನೀನೆ ಬಿಟ್ಟು ಹೋಗೊ ಮಾತು ಆಡ್ತಿದ್ದಿ,,,ನನ್ ಜೊತೆ ಆಡಿದ್ ಮಾತಿಗೆಲ್ಲಾ ಎನೂ ಬೆಲೆ ನೆ ಇಲ್ಲ ಅಲ್ವಾ? ಬಿಟ್ಬಿಡು ಹೋಗ್ಲಿ,,,,,, ಅ೦ದೋನೆ ಮನೆ ಪಕ್ಕ ಇರೋ ಕಾಡಿಗೆ ಹೋಗಿ ಪೇಟೆಇ೦ದ ತ೦ದ ಒ೦ದು ಸಿಗರೇಟ್ ಸೇದಿದ,,,,ಹಾ ಇತ್ತೀಚೆಗೆ ಸಿಗರೇಟ್ ಸೇದೊಕೆ ಅನಿ ಹೇಳ್ಕೊಟ್ಟಿದ್ದ,,,,

ಇತ್ತಕಡೆ ಕಾವ್ಯ ಕೂಡ ಬಿಟ್ಟು ಹೋಗೊ ಮಾತು ಆಡಬಹುದು ಅ೦ತ ಕಾಯ್ತ ಇದ್ದೋನು,,,,, ಹಾಗೆ ಆಗ್ಲೇ ಇಲ್ಲ,,, ಅವಳೂ ಅವತ್ತು,,, ನಮ್ಮ ಮನೆ ಲಿ ಗ೦ಡು ಹುಡ್ಕ್ತಿದಾರೆ,,,ಬಟ್ ನಾನ್ ಯಾರನ್ನೂ ಮದ್ವೆ ಆಗಲ್ಲ,,,ಆದ್ರೆ ನಿನ್ನನ್ನೆ ಸೊ,,ಈ ಸೆಮ್ ಆದ್ಮೇಲೆ ನಾನು ನೀನು ಮದ್ವೆ ಆಗೊಣ್ವಾ ಅ೦ದ್ಲು,,,, ಯಾರು ಒಳ್ಳೆಯವರು ಯಾರು ಕೆಟ್ಟವರು ಬಿಟ್ಟೊದೋಳ್ ಒಳ್ಳೇ ಕೆಲಸ ಮಾಡಿದ್ಲಾ? ಅಥವಾ ಈಗ ನನ್ ಜೊತೆನೆ ಸಾಯ್ತಿನಿ ಅ೦ತಿದಾಳಲ್ಲ ಇವ್ಲು ಒಳ್ಳೆಯವಳಾ ಅ೦ತೆಲ್ಲಾ ಯೋಚನೆ ಶುರುವಾಯ್ತು,,,ಜೊತೆಗೆ ,,,ಈ ಅಪ್ಪ ಅಮ್ಮ ದಿನಾ ಬೈತಾರೆ ,,,ಇವ್ರಿ೦ದ ದೂರ ಹೋಗೂದು ಒಳ್ಳೆದು,,,,ದೂರ ಹೋಗಾದಾದ್ರೆ,,, ಇವ್ಲನ್ನೂ ಕರ್ಕ೦ಡೆ ಹೊಗಣ ಅನ್ಸ್ತು ವಿನೋದ್ ಗೆ,, ಅದೂ ಅಲ್ದೆ ಡಿಗ್ರೀ ಮುಗಿತ್ತೆ,,,, ಎನೊ ಕೆಲ್ಸ ಸಿಗತ್ತೆ,, ಹುಟ್ಸಿದ್ ದೇವ್ರು ಹುಲ್ಲು ಮೇಯಿಸ್ತಾನ? ಅಲ್ವಾ?….

ಸೆಮ್ ಮುಗಿತು,,,,ಬೆಳಿಗ್ಗೆ ೧೦ ಘ೦ಟೆಗೆ ಹುಡುಗಿ ಮನೆಲಿ ಅವಳು,,,ಇಲ್ಲಿ ವಿನೋದ್ ..ಇದ್ದ ವಿಚಾರ ಹೇಳ್ಬೇಕು ಅನ್ನೊ ತೀರ್ಮಾನ ಆಯ್ತು,, ಮ೦ಜು ಭಟ್ರು ಪೇಪರ್ ಒದ್ತಾ ಕೂತಿದ್ರು,,, “ಅಪ್ಪಾ ಒ೦ದು ತು೦ಬಾ ಇ೦ಪಾರ್ಟ೦ಟ್ ಮ್ಯಾಟರ್ ಮಾತಾಡೊದು ಇದೆ” ಅ೦ದ,,,,,,ಜಾಸ್ತಿ ದೂರದಲ್ಲೆ ನಿ೦ತಿದ್ದ,,,ಎನು ಅ೦ದ್ರು,,,,ನಾನು ಒಬ್ಳನ್ನ ಇಷ್ಟ ಪಟ್ಟಿದಿನಿ ಅಪ್ಪಾ,,ಮದ್ವೇ ಆಗೊಣ ಅ೦ತ ಇದೀವಿ ,,,,,,ಅಪ್ಪ ಒಮ್ಮೆ ನೋಡಿದ್ರು,,,,ನೀನು ಹಾಳಾಗಿ ಹೋಗಿ ಎಷ್ಟೊ ಕಾಲ ಆಗಿದೆ ಕಣ ನ೦ಗೆ ಗೊತ್ತು,,,,ಆ ಸ೦ಘ ಈ ಮೆರವಣಿಗೆ,,,,ಇದೇ ತರ ಊರ್ ಊರ್ ಅಲಿಯೋವಾಗ್ಲೆ ಗೊತ್ತಿತ್ತು ಏನೊ ಈ ತರದ್ದ್ ಕೆಲ್ಸ ಮಾಡ್ಕ೦ಡ್ ಬರ್ತಿ ಅ೦ತ,,,ನಿ೦ದು ತಪ್ಪಲ್ಲ,,,ನಿನ್ನ ಹಳ್ಳ ಹಾರಿಸ್ತಾವೆ ನೋಡು ಆ ನಿನ್ನ ಕಪಿ ಸೈನ್ಯ ಅವರ್ದ್ದು ,,,,ಮೂರ್ಖರು,,, ಅಲ್ಲಾ ನಿ೦ಗೇ ಕೆಲಸ ಇಲ್ಲ ಇನ್ನು ಆ ಯಾವ್ದೊ ಹುಡುಗಿನ ಹೇಗೆ ಸಾಕ್ತಿ? ಯೊಚನೆ ಮಾಡಿದ್ಯಾ? ನಿನ್ನ ಆ ಪು೦ಡ ಸ್ನೇಹಿತರು ಸಹಾಯ ಮಾಡ್ತಾರ? ನೀನ್ ಜೀವ್ನ ನೆಗ್ದು ಬಿದ್ದು ಹೋಗಿದೆ,,,ಪಾಪ ಆ ಹುಡ್ಗಿ ಬದ್ಕೂ ಹಾಳ್ ಮಾಡಿ ಯಾಕ್ ಸಾಯ್ತಿ? ..ನೋಡು ಇದ್ರೆ ಅನ್ನ ಹಾಕ್ತಿನಿ,,,,ಇಲ್ಲ ಅ೦ದ್ರೆ ಎನಾದ್ರೂ ಮಾಡ್ಕೊ ನನ್ ಹತ್ರ ಒ೦ದೂ ರುಪಾಯಿನೂ ಇಲ್ಲ,,,,

ಆ ಕಡೆ ಹುಡ್ಗಿ ಮನೆಲೂ ಗಲಾಟೆ ಅತ್ತು ಕರೆದರೂ,,,,ಊಟ ಬಿಟ್ಟು ಕೂತ್ಲು ಹೊರತು,,,ವಿನೋದ್ ಬಿಟ್ಟು ಬೇರೆ ಹುಡುಗನ ಮಾತೆ ಇಲ್ಲ ಅನ್ನುವ ಹಠ..

ಬೆಳಿಗ್ಗೆ,,,ಇಬ್ಬರೂ ಕಾಲೇಜ್ ಬ್ಯಾಗಿಗೆ ಬೆಕಾದಷ್ಟು ಬಟ್ಟೆ ತುರುಕಿಕೊ೦ಡು ನಿರ್ಮಲಾಪುರ ಬಸ್ಟ್ಯಾ೦ಡಿಗೆ ಬ೦ದರು,,,, ‘ಇದು ನಾವು ಓಡಿ ಹೊಗ್ತಾ ಇರೋದ್ ಅಲ್ಲ ಅಲ್ವಾ ವಿನು? ಯಾಕ೦ದ್ರೆ ನಾನ್ ನಮ್ಮ ಮನೆಲಿ ಹೇಳಿದೆ ನೀನು ಹೇಳಿದೆ ಅದ್ರೆ ಒಪ್ಲಿಲ್ಲ ಅ೦ದ್ರೆ ಏನ್ ಮಾಡಕೆ ಅಗತ್ತೆ ಅಲ್ವಾ?” ಸಮಾದಾನ ಮಾಡಿಕೊ೦ಡಳು ಕಾವ್ಯ.. ಹತ್ತಿದ್ದು,,,ಶಿಮೊಗ್ಗ ಬಸ್ಸಿಗೆ,,, ಸ೦ಜೆವರಿಗೂ ಪಾರ್ಕು,,, “ಆ ಮೇಲೆ,,, ಒಬ್ಬ ಕಸಿನ್ ಅಣ್ಣನಿಗೆ ಒ೦ದು ಫೊನ್ ಮಾಡ್ತಿನಿ ಬೆ೦ಗಳೂರಲ್ಲಿ ಕೆಲ್ಸ ಕೊಡ್ಸ್ತಿನಿ ಅ೦ದಿದ್ದ”,,,, ಫೊನ್ ಮಾಡಿದ…..ಇದ್ದ ವಿಚಾರ ಕೂಡ ಮನವರಿಕೆ ಮಾಡಿ ಕೊಟ್ಟ ನ೦ತರ ಅವರೂ ಬರಲು ಹೇಳಿದರು,,, ರಾತ್ರಿ ಬೆ೦ಗಳೂರು ಟ್ರೈನ್ ಹತ್ತೊದು ಅನ್ನೊ ನಿರ್ಧಾರ,, ಇದ್ದಿದ್ದು ೮೦೦/- ಮಾತ್ರ…. “”ನ೦ಗೆ ಇನ್ನೊಬ್ಬ ಅಣ್ಣ ಇದ್ದ ಅವ್ನು ಯಾವಾಗ್ಲೂ ಬೆ೦ಗಳೂರಿಗೆ ಕರಿಯೋನು ಹೊಗೊವಾಗೆಲ್ಲಾ ಸ್ಲೀಪರ್ ಬಸ್ ಟಿಕೇಟ್ ಬುಕ್ ಮಾಡ್ತಿದ್ದ,,,,ಅವನು ಈಗಿಲ್ಲ””..ಅ೦ದ ವಿನೋದ್,,,,,,,,ದುಡ್ಡಿಲ್ಲ,,,ಅದಕ್ಕೆ ಟ್ರೈನ್ ಗತಿ ಅನ್ನುತ್ತಿದ್ದಾನೆ ಅನ್ನೊದು ಅರ್ಥ ಆಯ್ತು ಹುಡುಗಿಗೆ,,,,

೪ ದಿನ ಕಳೀತು,,,,ದುಡ್ಡಿದ್ರೆ ದುನಿಯ ಅನ್ನೊದು ಪ್ರತೀ ಸಲ ಯಾರೊ ಹೇಳಿದ ಹಾಗೆ ಆಗ್ತಿತ್ತು,,, ಅಪ್ಪ ಅಮ್ಮ ನ ನೆನಪಾಯ್ತು,,,,ಫೊನ್ ಮಾಡಿದ,,,,, ಅಪ್ಪ, … ಹೇಗಿದ್ದಿ? ನ೦ಗೆ ಬಿ ಪಿ ಸ್ಪಲ್ಪ ಜಾಸ್ತಿ ಆಗಿತ್ತು ಈಗ ಮಾತ್ರೆ ತಗ೦ಡು ಸರಿ ಆಗಿದೆ ನಿನ್ನ ಅಮ್ಮನಿಗೇ ತು೦ಬಾನೆ ಶುಗರ್ ಜಾಸ್ತಿ ಆಗಿ ಕಣ್ಣಿನ ಪೊರೆ ಬ೦ದಿದೆ ಅದಕ್ಕೆ ಆಪರೇಶನ್ನಿಗೆ ಆಸ್ಪತ್ರೆ ಲಿ ಇದಿವಿ ಕಣಪ್ಪಾ,,,,,ಅಮ್ಮ ನಿನ್ನೆ ತು೦ಬ ನೆನಪು ಮಾಡಿಕೊ೦ಡು ಕನವರಿಸ್ತಾ ಇದ್ಲು,,,,ಎದೆ ಹಾಲು ಕೊಟ್ಟ ತಪ್ಪಿಗೆ,,,, ಸಾಧ್ಯವಾದ್ರೆ ಸಮಯ ಸಿಕ್ಕಿದರೆ ಬ೦ದು ಹೋಗು,,,,, ಅಮ್ಮನ 2 ಕಣ್ಣು ಮುಚ್ಚುವ ಮೊದಲು,,,,, ಫೊನ್ ಕಟ್ ಆಗಿತ್ತು,,,,, ಕರೆನ್ಸಿ ಖಾಲಿ ಆಗಿತ್ತು..4 ಕ೦ಪನಿಗಳಲ್ಲಿ,,,, ಇ೦ಟರ್ವಿವ್ ಹೊಗೆ ಹಾಕಲ್ಪಟ್ಟು…ಇನ್ನೂ 10 ಭಾರಿ ರೆಸುಮ್ ಝೆರಾ‌ಕ್ಸ್ ಮಾಡಿಸೊಕೆ ಅ೦ಗಡಿ ಹುಡುಕಿದ…

ಪ್ರೀತಿ ಸಿಗೋದು ದೊಡ್ಡದಲ್ಲ,,,ಬದುಕು ಸಿಗೋದು ಇದ್ಯಲ್ಲಾ ಅದು ಕಷ್ಟ ಕ೦ಡ್ರಿ,,,ನಾವು ಪ್ರೀತಿನೆ ಎಲ್ಲಾದಕ್ಕೂ ಹ೦ಚಿಕೊ೦ಡು ಬದುಕುವ ಹಾಗಿದ್ದ್ರೆ ಪ್ರಪ೦ಚ ಹೀಗೆ ಯಾಕ್ ಇರ್ತಿತ್ತು,,,,,, ಅರ್ಥ ಮಾಡ್ಕೊಬೇಕು ಅಷ್ಟೆ…..

Advertisements

ಗ್ರಾಂ ಸಭಿ!!

ಜುಲೈ 5, 2011

ನಮಸ್ಕಾರ ಸ್ನೇಹಿತರೇ, ನಾನು ಮೊನ್ನೆ ಊರಿಗೆ ಹೋಗಿದ್ದೆ , ಮನೆಗೆ ಹೋಗಿ ಇನ್ನೂ ಕಾಲಿಟ್ಟಿಲ್ಲ ಸುಮಾರು ಬೆಳಗಿನ 7 ಘಂಟೆಗೆಲ್ಲಾ ಮೈಕ್ ಹಿಡ್ಕೊಂಡು ಗೂಡ್ಸ್ ಆಟೋ ದಲ್ಲಿ ಪ್ರಚಾರ ಮಾಡ್ತೀದ್ರು ಸೋಮವಾರ ಗ್ರಾಂ ಸಬಿ ಅದೆ, ಗ್ರಾಮಸ್ತರು ಹೆಚ್ಚಿನ ಸಂಕೀಲಿ ಬಾಗವಹಿಸ್ಬಕು ಅಂತ….ಅಂತೂ ಸೋಮವಾರನೂ ಬಂತು ಜನನೂ ಮೌಳಿ ಇಸ್ಕೂಲ್ ಕಡೆ ಮಧ್ಯಾನ 12:30 ಹೊತ್ತಿಗೆ ಬಂದ್ರು….ಬನ್ನಿ ನಾವೂ ಹೋಗಿ ಬರೋಣ ,ನೋಡೋಣ ಜೀವರಾಜರ ಆಡಳಿತದಲ್ಲಿ ಏನೇನು ಸ್ಕೀಮುಗಳು ಇವೆ ಅಂತ !!

 ಎಂತಹಾ ಆಭಾಸ!! ಏನು ನೆಡಿತು ಗೊತ್ತಾ ? ಗ್ರಾಮ ಸಭೆಯಲ್ಲಿ ಬಂದವರು ನಮ್ಮ ಭಾಗದ  ಪಂಚಾಯತ್  ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರು, ಹಾಗೂ ಒಬ್ಬ ನೋಡಲ್ ಅಧಿಕಾರಿ……ಕಾರ್ಯಕ್ರಮ ಶುರು ಆಗಿದ್ದು 12:30 ಘಂಟೆಗೆ ಹಾಗೆ ಮುಗಿದಿದ್ದು ಕೇವಲ 30 ನಿಮಿಷಗಳಲ್ಲಲ್ಲಿ!! ಮೊದಲು ಗ್ರಾಮ ಪಂಚಾಯಿತ್ ವತಿಯಿಂದ ಯಾವ ಯಾವ ಯೋಜನೆಗಳು ಇವೆ ಅಂತ ಹೇಳಿ ಸಾರ್, ಅಂದೆ ನಾನೇ ಮೊದಲಿಗನಾಗಿ ಮಾತಾಡಿದ್ದು ಅಲ್ಲಿ ಅನ್ಸುತ್ತೆ….

 ಒಬ್ಬರು ಮಹಾನುಬಾವರು ಎದ್ದು ನಿಂತರು, ನಾನು ಅಂದುಕೊಂಡೆ ಯೆಡ್ಡಿ ಸಾರ್ ಸುಮಾರೆಲ್ಲ ಟಿ‌ವಿ ಲಿ ಹೇಳ್ತಾ ಇರ್ತರಲ್ಲ ಹಾಗೆ ಒಂದು ದೊಡ್ಡ ಲಿಸ್ಟ್ ಇರ್ಬೊದು ಅಂತ ಆದರೆ ಅಲ್ಲಿ ಇದ್ದಿದ್ದು ಮೂರೇ ಮೂರು ಯೋಜನಗಳು ಅದು ಯಾವುವು ಗೊತ್ತ?

  1. ಕೇಂದ್ರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನೋಂದಾಯಿಸುವುದು.
  2. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಒಬ್ಬ ಗ್ರಾಮಸ್ತನಿಗೆ ಒಂದು ಹಸುವುನ್ನ ದಯಪಾಲಿಸುವುದು.
  3. ಗ್ರಾಮಕ್ಕೆ ಸಿಲಾವರ ಗಿಡಗಳನ್ನ ಹಂಚುವುದು ಆದರೆ ಅದನ್ನು ಪಡೆದರೆ 100 ಗಿಡಗಳನ್ನು ಕೊಡಮಾಡಲಾಗುತ್ತದೆ ಅದರಲ್ಲಿ 30 ಸಿಲಾವರ ಹಾಗೆ ಉಳಿದ 70 ಆಕೆಶಿಯ ಅನ್ನುವ ಪ್ರಯೋಜನಕ್ಕೆ ಬಾರದ ಗಿಡಗಳು!!!

ಅಷ್ಟೇ ಮುಗಿದೇ ಹೋಯಿತು, ಇನ್ನೇನು ಎಲ್ಲರೂ ಒಟ್ಟಿಗೆ ಗ್ರಾಮಸ್ಥರೊಡನೆ ಒಂದು ಫೋಟೋ ಕ್ಲಿಕ್ಕಿಸಿಕೊಂಡು (ದಾಖಲೆಗಾಗಿ ) ಹೊರಡಬೇಕೆನ್ನುವಷ್ಟರಲ್ಲಿ ನಾವು ಸ್ವಲ್ಪ ಜನ ತಡೆದು ನಿಲ್ಲಿಸಿದೆವು….. ಹಾಗೆ ನಿಮ್ಮ ಈ 3 ಯೋಜನೆಗಳನ್ನು ಸ್ವಲ್ಪ ವಿಸ್ತಾರವಾಗಿ ಹೇಳಿ ಆಂದೆವು.

ಆಗ ಮತ್ತೆ ಎದ್ದು ನಿಂತ ಮಹಾಶಯರು ಹೇಳಿದರು ಸಾರ್ ನಿಮ್ ಹತ್ರ ಬಿ‌ಪಿ‌ಎಲ್ ಕಾರ್ಡ್ (ಬಿಲೋ ಪಾವರ್ಟಿ ಲೈನ್) ಇದ್ದರೆ ಮಾತ್ರ ಈ 3 ಯೋಜನೆಗಳಿಗೆ ಒಳಪಡುತ್ತೀರಿ ಇಲ್ಲ ಅಂದ್ರೆ ಇಲ್ಲ ಸಾರ್ ….!!!

 ಸ್ನೇಹಿತರೇ ನಿಮಗೆ ಗೊತ್ತಿರಲಿ ನಮ್ಮ ಊರಿನ ಒಟ್ಟು ಜನಸಂಖ್ಯೆ ಸುಮಾರು 400 ಅಷ್ಟೇ, ಅದರಲ್ಲಿ ಗೌಡ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಲ್ಲರೂ, ಅಲ್ಲಿ ಹಿಂದುಳಿದ ವರ್ಗದ ಯಾವುದೇ ಕುಟುಂಬ ಇಲ್ಲ, ಅದೂ ಅಲ್ಲದೆ ಅಲ್ಲಿ ಇರುವ ಎಲ್ಲರೂ ಬಡತನ ರೇಖೆಯ ಮೇಲಿದ್ದವರೇ !!(ದಾಖಲೆಗಳಲ್ಲಿ ಮಾತ್ರ)  ಹಾಗಾದರೆ ಇವರು ಯಾರನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಗ್ರಾಮದಲ್ಲಿ ಈ ಮೂರು ಯೋಜನೆಗಳು ನಮ್ಮವೆಂದು ತೋರಿಸಲು ಬಂದಿದ್ದರು? ಭಾಗ್ಯಲಕ್ಷ್ಮಿ, ಆಶ್ರಯ ಮನೆ, ಬೆಳೆ ಸಾಲ, ಹುಡುಗರಿಗೆ ಸೈಕಲ್ಲು ಕೊಡೋ ಯೋಜನೆ, ಹಾಗೂ ಅಡಿಕೆಗೆ ಬಂದ ರೋಗ ನಿರ್ವಹಣೆಗೆ ಏನೂ ಯೋಜನೆಗಳಿಲ್ಲವೇ? ಇವರು ಕೊಡುವ 100 ಗಿಡಗಳಲ್ಲಿ 70 ಆಕೆಶಿಯಾ ಗಿಡಗಳನ್ನು ಎಲ್ಲಿ ನೆಡುವುದು? ಯಾತಕ್ಕಾಗಿ ನೆಡಬೇಕು? ನಮಗೆ ಬೇಕಿರುವುದು ಕೇವಲ ಸಿಲಾವರ ಗಿಡಗಳು ಮಾತ್ರ ಅದೂ ಅಡಿಕೆಗೆ ರೋಗಬಂದ ಹಿನ್ನೆಲೆಯಲ್ಲಿ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸುವ ಉದ್ದೇಶಕ್ಕೆ….. ಹಾಗಾದರೆ ಇವರು ಕೊಡುವ 30 ಗಿಡಗಳಿಂದ ಏನು ಮಾಡೋದು? ಅಷ್ಟು ಸಾಕೇ?

 ಅದೂ ಅಲ್ಲದೆ ಗ್ರಾಂ ಸಭೆಯಲ್ಲಿ ಯಾವುದೇ ಅರ್ಜಿಗಳನ್ನ ಸ್ವೀಕರಿಸಿಲ್ಲ ಕೇವಲ ಒಂದು ಚೇಟಿಯಲ್ಲಿ ಎಲ್ಲರ ಹೆಸರುಗಳನ್ನ ಬರೆದುಕೊಂಡರು ಅಷ್ಟೆ, ಹಾಗಾದರೆ ಈ ಸಭೆಯಲ್ಲಿ ಹೇಳಿದ ಅಥವಾ ಲಭ್ಯವಿರುವ ಸೌಲಭ್ಯಗಳನ್ನು ಅರ್ಜಿ ಕೊಡದೆ ಹಾಗೆಯೇ ಮನೆಮುಂದೆ ತಂದು ಕೊಡುತ್ತಾರೆಯೇ?  ಅದೂ ಅಲ್ಲದೆ ನಮ್ಮ ಒಬ್ಬ ರೈತರ ಮನೆಗೆ ಹೋಗಲು ಸರಿಯಾದ ರೋಡ್ ಇಲ್ಲ ಮಳೆಗಾಲದಲ್ಲಿ ಮಣ್ಣಿನ ರೋಡು ತುಂಬಾ ಜಾರುತ್ತೆ, ದಯವಿಟ್ಟು ಏನಾದ್ರೂ ಮಾಡಿಕೊಡಿ ಅಂದ್ರೆ ಕನ್ನಡಕದ ಒಬ್ಬ ಅಧಿಕಾರಿ ಎಷ್ಟು ಖಾರವಾಗಿ ಉತ್ತರಿಸಿದ ಗೊತ್ತ? ಇನ್ನೊಬ್ಬರ ಮನೆಯ ಬಳಿ ಜಲ್ಲಿ ರೋಡ್ ಮಾಡಿದಾರೆ ಅಲ್ಲಿ ಈಗ ಜನಗಳೇನು, ಜಾನುವಾರುಗಳೂ ಒಡಿಯಾಡದ ಪರಿಸ್ಥಿತಿ ನಿರ್ಮಾಣ ವಾಗಿದೆ!! ಇನ್ನೂ ದುರಂತ ಏನು ಗೊತ್ತ? ಕುಡಿಯುವ ನೀರಿನ ಭಾವಿಯನ್ನ ಜೀವರಾಜ ಬೆಂಬಲಿತರ ಮನೆಮುಂದೆ ಅವಶ್ಯಕತೆ ಇಲ್ಲದಿದ್ದರೂ ತೊಡಿಸಿಕೊಡಲಾಗಿದೆ  ಒಬ್ಬ ಸಾಮಾನ್ಯ ರೈತರೊಬ್ಬರು 10 ವರ್ಷಗಳಿಂದ ತಮ್ಮ ಅರ್ಜಿ ಹಿಡಿದುಕೊಂಡು ಓಡಾಡಿದ್ದಾರೆ ಅವರಿಗೆ ಮಾತ್ರ ಕುಡಿಯುವ ನೀರಿನ ಬಾವಿ ಸಿಕ್ಕಿಲ್ಲ ಅವರಂತೂ ಅದನ್ನ ಹೇಳುವಾಗ ನನ್ನ ಕಣ್ಣಾಲೆಗಳೇ ತುಂಬಿಬಂದವು…. ಇದೆಂಥಾ ದುರಂತ !!

 ಇನ್ನೊಬ್ಬ ಹೆಂಗಸು, ಪಾಪ ಗಂಡಸಿಲ್ಲದ ಮನೆ ಅವರದ್ದು ತೋಟಒಂದರಲ್ಲಿ ಹಾಯ್ದು ಹೋಗುವ ಹಳ್ಳ ಅವರ ಮನೆಯ ಹಿಂಬದಿಯ ಮಣ್ಣನ್ನು ಕೊರೆದುಕೊಂಡು ಹೋಗುತ್ತಿದೆ, ಅದರಿಂದ ಅವರ ಮನೆಯೇ ಈಗ ಕುಸಿದುಬೀಳುವ ಪರಿಸ್ಥಿತಿಯಲ್ಲಿದೆ ಅವರಿಗೆ ಈ ನಮ್ಮ ಮಹಾಶಯರು ಕೊಟ್ಟ ಪರಿಹಾರ ಎಷ್ಟು ಗೊತ್ತ? ಕೇವಲ 500 ರೂಪಾಯಿ!!

 ನಮ್ಮ ಗ್ರಾಮವನ್ನು ಮಾದರಿ ಗ್ರಾಮಾವೆಂದು ಗೋಷಿಸಿದ್ದೀರಿ ಆದರೆ ಅಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸಾರ್ವಕಾಲಿಕ ರಸ್ತೆಗಳು ಸರಿ ಇದ್ದರೆ ಮಾತ್ರವಲ್ಲವೇ? ಅದು ಮಾದರಿ ಗ್ರಾಮವಾಗುವುದು? ನಿಮಗೆ ಗೊತ್ತ ನೀವು ನೀಡಿದ 25 ಕೆವಿ ಟ್ರಾನ್ಸ್ ಫಾರ್ಮರ್ ಸಂಜೆಹೊತ್ತಲ್ಲಿ ಒಲ್ಟೇಜ್ ಪೂರಯಿಸಲಾಗದೆ ಒದ್ದಾಡುತ್ತಿರುವುದು?  ರಸ್ತೆಗಳು ಕಿತ್ತು ಹೋಗಿರುವುದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಕುಡಿಯುವ ನೀರಿನ ಬಾವಿಯನ್ನ ಸರಿಯಾದ ಫಲಾನುಭವಿಗಳಿಗೆ ನೀಡಿದ್ದೀರಾ?

 ಹೇಳಬೇಕೆಂದರೆ ಗ್ರಾಮ ಪಂಚಾಯಿತ್ ನ ಯೋಜನೆಗಳು ಜನರ ಕಿವಿಗೆ ಬೀಳುತ್ತಿಲ್ಲ, ಏಕೆ ಹೀಗೆ? ಈಗ ತುಂಬಾ ಮಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಯಾವ ಸಿದ್ದತೆಗಳನ್ನು ಮಾಡಿದ್ದೀರಿ? ಅದೂ ಅಲ್ಲದೆ ಕೆಲವೊಮ್ಮೆ ಬಂದ ಗೊಬ್ಬರ, ಕೀಟನಾಶಕಗಳು, ಕೆಲಒಬ್ಬರಿಗೆ ಮಾತ್ರ ಸಿಗುತ್ತಿವೆ ಅದೂ ಸಿಕ್ಕ 3 ದಿನಗಳ ನಂತರ ಬೇರೆಯವರಿಗೆ ಸುದ್ದಿ ಮುಟ್ಟುತ್ತದೆ ಅದು ಯಾಕೆ? ನಮ್ಮ ಬಡ ರೈತರು ಕೊಟ್ಟ ಅರ್ಜಿಗಳಿಗೆ ಬೆಲೆಯೇ ಇಲ್ಲವೇ? ಅಥವಾ ನಿಮ್ಮ ಗ್ರಾಮ ಸಭೆಗೆ ಬರಲು ಕೇವಲ ಬಡತನ ರೇಖೆಯ ಕೆಳಗಿರುವವರು ಮಾತ್ರ ಅರ್ಹರಾದರೆ ನಮ್ಮ ತೆರನಾದ ಸಾಮಾನ್ಯ ಜನರ ಮತಗಳನ್ನು ಏಕೆ ಕೇಳಿದಿರಿ? ಬಡತನ ಅನ್ನುವುದು ನೀವು ಕೊಡುವ ಹಳದಿ ಕಾರ್ಡಿನಿಂದ ಅಳೆಯುವುದು ಯಾವ ನ್ಯಾಯ? ಎಷ್ಟೋ ಜನ ಎಕರೆಗಟ್ಟಳೆ ತೋಟ ಇದ್ದವರು ಈಗ ಕಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ಹೋಗಲಿ ಬಿಡಿ ಅಡಿಕೆ ಹೋಯಿತು ಪರ್ಯಾಯ ಬೆಳೆ ಬೆಳೆಯಲು ನಿಮ್ಮ ಸಹಾಯ ಏನು? ಕೇಂದ್ರ ದಿಂದ ಬಂದ ಹಳದಿ ರೋಗದ ಅಧ್ಯಯನಕ್ಕೆ ಬಂದ ಆಯೋಗಕ್ಕೆ ಏನನ್ನು ಹೇಳಿದ್ದೀರಿ?

 ನಮ್ಮ ರೈತರಿಗೆ ಈಗ ಫುಲ್ ಕೆಲಸ, ಅವರಿಗೆ ಬೇಕಿರುವುದು ಗದ್ದೆಗಳಲ್ಲಿ ಕೆಲಸ ಮಾಡಲು ಹಾರೆ, ಕಂಬಳಿ, ಪಿಕಾಸಿಯಂತಹ ಸಲಕರಣೆಗಳು ಅದನ್ನೇನು ಉಚಿತವಾಗಿ ಬೇಡ ಸಬ್ಸಿಡಿ ದರದಲ್ಲಿ ನೀಡಿ, ಅಡಿಕೆಗೆ ರೋಗ ಬಂದಿದೆ, ಅಳಿದುಳಿದ ತೋಟವನ್ನು ಈ ಮಳೆಗಾಲದಿಂದ ರಕ್ಷಿಸಲು ಬೇಕಿರುವುದು ಸರಿಯಾದ ಕೀಟನಾಶಕಗಳು ಗದ್ದೆಗೆ ಬೇಕಿರುವ ಗೊಬ್ಬರ ಅವನ್ನು ಪೂರಯಿಸುವ ಯೋಜನೆ ಏಕೆ ಮಾಡುತ್ತಿಲ್ಲ? ಅಥವಾ ಆರೀತಿಯ ಯೋಜನೆಗಳನ್ನು ಮಾಡುವ ಮನಸಿಲ್ಲವೇ?

 ಈ ರೀತಿಯ ಪ್ರಯೋಜನಕ್ಕೆ ಬಾರದ ಯೋಜನೆಗಳಿಂದಾಗಿಯೇ ನಮ್ಮ ರೈತರ ಮಕ್ಕಳಾದ ನಾವು ಗುಳೆ ಬಂದಿರುವುದು, ಅಲ್ಲಿರುವ ಜನಗಳು ಇತ್ತ ತೋಟವನ್ನೂ ನೋಡಲಾಗದೆ, ಬೇರೆ ಕೆಲಸಕ್ಕೂ ಹೋಗಲಾರದೆ ಒದ್ದಾಡುತ್ತಿರುವುದು ಅಲ್ಲವೇ?

 ಮಾನ್ಯ ನಾಯಕರೆ ಕೊನೆಯದಾಗಿ ನಿಮಗೆ ಕೆಲವು ಪ್ರಶ್ನೆಗಳು,ಹಾಲಿ ಚಲಾಯಿಸಿದ ಮತಗಳು ನಿಮಗೆ ಹೆಚ್ಚಾದವೆ? ಮುಂದೆ ನಮ್ಮಿಂದ ನಿಮಗೆ ಯಾವ ರೀತಿಯ ಸಹಾಯ ಪ್ರೋತ್ಸಾಹಗಳು ಬೇಡವೇ? ಇನ್ನೂ ಕೇಳಿದರೆ ಸರ್ಕಾರಿ ಕಾಲೇಜು ಹಾಗೂ ಸಂತೆ ಮಾಳಗಳನ್ನು ತೋರಿಸುವ ನೀವು ಒಮ್ಮೆ ಯೋಚಿಸಿ, ಕೇವಲ ಬೆರಳೆಣಿಕೆಯ ಯೋಜೆನೆಗಳ ಜಾರಿಗೆ ಮಾತ್ರ ನಿಮ್ಮನ್ನು ಆರಿಸಿದೆವೆ? ಅದಕ್ಕೆ ನಿಮಗೆ 5 ವರ್ಷಗಳ ಕಾಲಾವಧಿ ಯಾಕೆ? ಬಡ ರೈತರಿಂದ ಕಸಿಯುವ ಮನೆಗಂದಾಯ, ಜಮೀನುಗಂದಾಯಗಳು ಎಲ್ಲಿ ಹೋಗುತ್ತಿವೆ ಅದರಿಂದ ಏನನ್ನು ಮಾಡುತ್ತಿದ್ದೀರಿ?  ಎಲ್ಲ ಟಿ‌ವಿ ಪೇಪರ್ಗಳಲ್ಲಿ ನೋಡಿದರೆ ನಿಮ್ಮ ಸರ್ಕಾರದ ಯೋಜನೆಗಳು ಸಂಪೂರ್ಣ ರೈತಪರವಾಗಿ ಕಾಣುತ್ತವೆ ಆದರೆ ಅವು ಮಲೆನಾಡಭಾಗದ ರೈತರಿಗೆ ಸಿಗುವುದಿಲ್ಲ ಏಕೆ?

 ಸ್ನೇಹಿತರೇ ನಮ್ಮ ಊರಿನಿಂದ ಬಂದವರು ನಾವು ಸಾಕಷ್ಟುಜನರಿದ್ದೇವೆ  ಬೆಂಗಳೂರು ಹಾಗೂ ಮಲೆನಾಡು ಭಾಗದಲ್ಲಿ, ನಿಮ್ಮಲ್ಲೂ ಇಂತಹ ಸಮಸ್ಯೆಗಳು ಇಲ್ಲದೆನಿಲ್ಲ, ಊರಿಗೆ ಹೋದಾಗ ನೀವು ನೋಡಿದ ಇಂತಹಾ ಅವಸ್ಥೆಗಳನ್ನ ಇಲ್ಲಿ ಕಾಮೆಂಟಿಸಿ ನಾನು ಈ ಲೇಖನವನ್ನ ಮಾನ್ಯ ಶಾಸಕರ ಫೇಸ್ ಬುಕ್ ನ ಪ್ರೊಫೈಲ್ನಲ್ಲಿ ಅಂಟಿಸುತ್ತೇನೆ, ನೋಡೋಣ ಇನ್ನೂ ಕೆಲವಾರು ವರ್ಷಗಳಲ್ಲಿಯಾದರೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಲ್ಲವೇ? ಬರ್ಲಾ?

ನಮ್ಮೂರಲ್ಲಿ ಮಳೆಗಾಲ!!

ಜೂನ್ 2, 2011

ಮತ್ತೊಮ್ಮೆ  ಮಲೆನಾಡು, ಅಲ್ಲಿ ಮಳೆಗಾಲ, ನೆರೆ, ಗಾಳಿ, ಎಲ್ಲ ನೆನಪಾಯಿತು, ಹಾಗಾದಮೇಲೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆಂಬ ತವಕ.

 ತುಂಬಾ ಸುಂದರ ಅಲ್ವಾ? ನಮ್ಮ ಮಲೆನಾಡು ಮಳೆಗಾಲ ಶುರುವಾಯ್ತು ಅಂದ್ರೆ? ನಮ್ಮೆಲ್ಲ ರೈತಬಾಂದವರಿಗೆ ಮೈತುಂಬಾ ಕೆಲಸ ಶುರುವಾಗಿಬಿಡುತ್ತೆ, ಅಗಡಿ ಮಾಡಬೇಕು ಬೇಲಿ ಹಾಕಬೇಕು ಗದ್ದೆಗೆ ಗೊಬ್ಬರ ಸಾಗಿಸಬೇಕು, ಅದನ್ನ ಬಿಕ್ಕಬೇಕು, ನೆಲ ಹೂಡಬೇಕು, ಆಮೇಲೆ ಮತ್ತೆ ಕೆಲಸದವರಿಗಾಗಿ ಪರದಾಟ, ಬಿತ್ತನೆ ಬೀಜ ತರಬೇಕು, ಮೊಳಕೆ ಬರಿಸಬೇಕು, ನೆಟ್ಟಿ ಕೆಲಸ ಶುರುಮಾಡಬೇಕು ಅದಕ್ಕೂ ಮುಂಚೆ ಶೃಂಗೇರಿಗೆ ಹೋಗಿ ಒಂದು ಒಳ್ಳೆಯ ಕಂಬಳಿ ಕೊಳ್ಳಬೇಕು ಅದರ ಕಸೆ ಕಟ್ಟಬೇಕು. ನೆಟ್ಟಿಗೆ ಟಿಲ್ಲರ್ ಒಂದನ್ನ ಹುಡುಕಿ ಅದರ ಒಡೆಯನಿಂದ ದಿನಾಂಕ ನಿಗದಿಪಡಿಸಿಕೊಂಡು ಅಂದೆ ಎಲ್ಲಾ ಕೆಲಸದವರನ್ನ ಒಟ್ಟುಗೂಡಿಸಬೇಕು.ಮತ್ತೆ ನೆಟ್ಟೆ ಮಾಡಬೇಕು, ಗದ್ದೆಗೆ ಹೊಸ ಅಂಚು ಹಾಕಬೇಕು, ಪ್ರತಿದಿನ ಅದನ್ನ ಮಕ್ಕಳಂತೆ ನೋಡಿಕೊಳ್ಳಬೇಕು ಗದ್ದೆಗೆ ನೀರು ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ …….

 ಇನ್ನೂ ತೋಟದ ಕಳೆ ಕೀಳಬೇಕು, ಔಷದಿ ಹೊಡೆಯುವರನ್ನ ಕರೆಸಬೇಕು, ಮಳೆಜಾಸ್ತಿ ಇದ್ದರೆ 2 ಅಥವಾ 3 ಬಾರಿ ಔಷದಿ ಹೊಡೆಸಬೇಕಾಗಬಹುದು.ಮತ್ತದೇ ಪಸಲಿಗಾಗಿ ಹೋರಾಟ, ಕಾಯುವಿಕೆ, ಒಳ್ಳೆಬೆಲೆಯ ನೀರಿಕ್ಷೆ ಎಷ್ಟೊಂದು ಕೆಲ್ಸ ಅಲ್ವಾ?

 ಮತ್ತೆ ನಮ್ಮೂರಲ್ಲ೦ತೂ ಮಳೆಗಾಲ ಒಂದು ಸುಂದರ ಅನುಭವ ಪ್ರತಿವರ್ಷ, ಮೊದಲು ಸರಿಯಾದ ಗಾಳಿ ಮಳೆ, ಆನಂತರ ತೋಟದ ಅಡಿಕೆಮರಗಳು ನೆಲಕಚ್ಚುವ ಭಯ, ಮಳೆಗಾಲ ಇಡೀ ಹಳ್ಳಿಗಳಲ್ಲ೦ತೂ ಕರೆಂಟ್ ನ ಸಮಸ್ಯೆ, ಅದರ ಮಧ್ಯದಲ್ಲೂ ಒಂದು ತೆರನಾದ  ಮಜಾ.

 ಮಳೆಗಾಲ ಶುರುವಾಯ್ತು ಅಂದ್ರೆ ಹುಡುಗರಿಗೆ ಹೊಸ ಛತ್ರಿ ಆಗಬೇಕು ಅದು ಬಟನ್ ಛತ್ರಿ!! ಜೋರಾಗಿ ಗಾಳಿಬೀಸಿದರೆ ಅದು ತಲೆಕೆಳಗಾಗಿ ಕೊಡುವ ತೊಂದರೆ ಮಳೆಯಲ್ಲಿ ಬ್ಯಾಗುಗಳು ಅದರೊಳಗಿನ ಪುಸ್ತಕಗಳು ನೆಂದು ಹೋದರಂತೂ ಎಲ್ಲಿಲ್ಲದ ಭಯ ನಾಳೆ ಮೇಷ್ಟ್ರು ಹೊಡೆದು ಬಿಟ್ರೆ?, ಆದರೂ ಅದೇ ಬೇಕು. ಪ್ಯಾಂಟ್ ಅರ್ಧ ಒದ್ದೆಯಾಗಿ ಕ್ಲಾಸ್ ರೂಮಿನಲ್ಲೇ ಒಣಗಬೇಕು ಅದು ಒಣಗುವುದೊರಳಗಾಗಿ ಸಂಜೆ ಆಗಿ ಸ್ಕೂಲ್ ಬಿಟ್ಟು ಮನೆಕಡೆ ಹೊರಡಬೇಕು ಮತ್ತದೇ ಮಳೆ ಒದ್ದೆ ಪ್ಯಾಂಟು….ಮನೆಗೆ ಬಂದರೆ ಮಧ್ಯನದ ಬುತ್ತಿಯಿಂದ ಹೊಟ್ಟೆ ತುಂಬಿರುವುದಿಲ್ಲ ಅನ್ನುವುದನ್ನು ಅರಿತ ಅಮ್ಮ ತಟ್ಟೆ ಇಟ್ಟು ಊಟಕ್ಕೆ ರೆಡಿ ಮಾಡಿರ್ತಾರೆ, ಅಡಿಗೆ ನೋಡಿದ್ದ್ರೆ ಅದೇ ಸೌತೆಕಾಯಿ ಹುಳಿ (ಸಾಂಬಾರು) , ಯಾಕಂದ್ರೆ ಮಳೆಗಾಲದ ಮುಂಚೆ ಗದ್ದೆ ಸೌತೆಕಾಯಿಯನ್ನ ಶೇಕರಿಸಿಟ್ಟುಕೊಂಡು ಅದನ್ನೇ  ಮಳೆಗಾಲ ಮುಗಿಯುವವರೆಗೂ ಊಣಬಡಿಸುವ ಹರಕೆ ಮಾಡಿರ್ತಾರೇನೋ ಅಮ್ಮಂದಿರು ಅಲ್ವಾ?  ಯವತ್ತಾದ್ರು ಪತ್ರವೊಡೆ ಪಲ್ಯಾ ಮಾಡಿದ್ದಾರೆ ಅಂತ ಗೊತ್ತಾದ್ರೆ ಕ್ಲಾಸಲ್ಲೆಲ್ಲ ಅದೇ ಯೋಚನೆ ಅದೆಷ್ಟು ರುಚಿ ಮುಂಡೆದು ….

 ಆದ್ರೆ ಸ್ವಲ್ಪ ಯೋಚನೆ ಮಾಡಿ, ಆ ಹಲಸಿನ ಹಪ್ಪಳ, ಹಲಸಿನ ಚಿಪ್ಸ್  ಅದರೊಂದಿಗೆ ಅಮ್ಮ ಮಾಡಿದ ಬಿಸಿ ಬಿಸಿ ಕಾಪಿ (ನಮ್ಮಲ್ಲಿ ಹಾಲಿಗೆ ಡಿಕಾಕ್ಷನ್ ಹಾಕೋದು ಕಡಿಮೆ ಡಿಕಾಕ್ಷನ್ ಅನ್ನೋ ಬೆಲ್ಲ ಹಾಗೂ ಕಾಫಿ ಪುಡಿ ಮಿಶ್ರಿತ ನೀರಿಗೆ (?) ಹಾಲು ಹಾಕ್ತಾರೆ ಅದಕ್ಕೆ ನಾನು ಅದನ್ನ ಕಾಪಿ ಅನ್ನೋದು ಕಾಫಿ ಆನ್ನಲ್ಲ )ಇದೆಲ್ಲವೂ ಇದ್ರೆ ಅದೃಷ್ಟಕ್ಕೆ ಕರೆಂಟು ಇದ್ರೆ ಟಿ‌ವಿ ನೋಡ್ತಾ ಸವಿಯುತ್ತಾ ಇದ್ರೆ ಅದರ ಮಜಾನೆ ಬೇರೆ ಬಿಡಿ. ಆದ್ರಲ್ಲೂ ಹೊಂವರ್ಕ್ ಮಾಡೋಕೆ ಸೀಮೆಯೆಣ್ಣೆಯ ಚಿಮಣಿಯೇ ಗತಿ ಅದರ ಹೊಗೆಯೋ ಯಾವುದೇ ಕಾರ್ಖಾನೆಯ ಹೊಗೆಗೇನೂ ಕಮ್ಮಿ ಇರಲ್ಲ. ಇದೆಲ್ಲ ಮುಗಿಸಿ ರಾತ್ರಿಯ ಊಟ ಮುಗಿಸಿ ತಣ್ಣಗೆ ರಗ್ಗು, (ಅಭ್ಯಾಸ ಇರೋರು ಪೆಗ್ಗು ಎಂದು ಓದಿಕೊಳ್ಳಿ) ಏರಿಸಿಕೊಂಡು ಮಲಗಿದರೆ ಮರುದಿನವೇ ಎಚ್ಚರ ಆಗೋದು.

 ಇನ್ನೂ ಮಜಾ ಅಂದ್ರೆ ಹಲಸಿನ ಬೀಜಗಳದ್ದು ಅದನ್ನ ಒಲೆಯ ಒಳಗಡೆ ಹಾಕಿ ಬೂದಿಯಲ್ಲಿ ಬೇಯಿಸಿ ತಿನ್ನೋದು, ಬೇಯಿಸುವಾಗ ಮಧ್ಯದಲ್ಲಿ ಅದು ಬಾಂಬಿನತೆ ಸ್ಪೋಟಗೊಂಡರೆ ಸುತ್ತ ಬೂದಿ ಹಾರಿ ಅಮ್ಮನಿಂದ ಬೈಗುಳ ಬೇರೆ.

 ಮಳೆಗಾಲದ ವಿಶೇಷ ಹಣ್ಣುಗಳು ಹುಡುಗರ ಪಾಲಿನ ಸಿಹಿತಿನಿಸುಗಳು ,

ಕಲ್ಲುಸಂಪಿಗೆ: ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿ ಕೆಲ್ವಂದರಲ್ಲಿ ಹುಳ ಆಗಿರ್ತವೆ  ನೋಡಿಕೊಂಡು ತಿನ್ನಬೇಕು.

ರಂಜದ ಹಣ್ಣು: ತಿಂದರೆ ಬಾಯಿತುಂಬಾ ಹಿಟ್ಟು ಹಿಟ್ಟಿನ ಅನುಭವ.

ಕಾಡು ನೇರಳೆ: ಕೈಗೆಟುಕುವಂತೆ ಹಣ್ಣಾಗಿರುತ್ತವೆ ಜಾಸ್ತಿ ತಿಂದರೆ ಶೀತ ಗ್ಯಾರಂಟಿ!!

ಹೆಬ್ಬಲಸು: ಚಿಕ್ಕ ಹಲಸಿನ ಹಣ್ಣಿನಂತೆ ಇರೋದು ಆದರೆ ಬೀಜವನ್ನ ಬೇಯಿಸಿಕೊಂಡು ತಿಂದರೆ ಮಜಾ..

ಪೇರಲೆ ಹಣ್ಣು: ಚಿರ ಪರಿಚಿತ ಹಣ್ಣು.

ಹಲಸಿನ ಹಣ್ಣು : ಬಕ್ಕೆ ಹಾಗೂ ಬೆಳುವ ಅನ್ನುವ ೨ ರೀತಿ. ಬೆಳುವದ ಸೊಳೆಗಳು ಅತಿಯಾಗಿ ಮೃದುವಾಗಿದ್ದರೆ ಬಕ್ಕೆಯ ಹಣ್ಣುಗಳು ಸ್ವಲ್ಪ ಬಿಡಿಸಲು ಬರುವಷ್ಟು ಮೆತ್ತಗೆ.

ಕಾಡು ಮಾವು : ಕೆಲವೊಂದು ಹುಳಿ, ಕೆಲವೊಂದು ಸಿಹಿ ಅತಿಯಾಗಿ ತಿಂದು ಹೊಟ್ಟೆನೋವು ಮಾಡಿಕೊಂಡ ನೆನಪುಬಂದಾಗಲೆಲ್ಲ ಮಾವಿನ ಹಣ್ಣಿನಿಂದ ದೂರ ಓಡಿಬಿಡಬೇಕೆನಿಸುತ್ತದೆ ಈಗಲೂ!!

ಹಿಪ್ಪಲಿ ಹಣ್ಣು: ಸಕತ್ ಹುಳಿ ಇದಂತೂ………

ಬೆಂಬಾರಳ ಹಣ್ಣು: ಒಂದು ರೀತಿಯ ಕಾಡು ಹಣ್ಣು

ಪನ್ನೇರಳ ಹಣ್ಣು: ನಮ್ಮ ಮನೆಯಕಡೇ ಸಕತ್ ಅಪರೂಪವಾಗಿದೆ ಇದು.

ಗೇರು ಹಣ್ಣು : ಸರಿಯಾಗಿ ಹಣ್ಣಾಗದ್ದನ್ನ ತಿಂದರೆ ಗಂಟಲ ತುರಿಕೆ ಗ್ಯಾರಂಟಿ.

ನೆನಪಿದೆಯಾ? ಈ ಎಲ್ಲಾ ಹಣ್ಣುಗಳ ಸವಿಯನ್ನ ಅತಿಯಾಗಿ ಸವಿದು ಜ್ವರ ಶೀತ ಮಾಡಿಕೊಂಡು ಡಾಕ್ಟರ್ ಹತ್ರ ಇಂಜೆಕ್ಷನ್ ತಗೊಂಡಿದ್ದು? ಸ್ಕೂಲಿಗೆ ಚಕ್ಕರ್ ಹೊಡೆದದ್ದೂ? ಇನ್ನಂತೂ ನೆರೆ ಬಂದರೆ ಮನೆಯವರಿಗೆ ಎಲ್ಲಿ ಗದ್ದೆಯಲ್ಲಿ ಹುಗುಳು (ಹೊಂಡ) ಹೋಗುತ್ತೋ ನೆಟ್ಟಿ ಕೊಚ್ಚಿಕೊಂಡು ಹೋಗುತ್ತೋ , ಅಥವಾ ತೋಟಕ್ಕೆ ಕೊಳೆರೋಗ ಬರುತ್ತೇನೋ ಅಂತೆಲ್ಲ ಭಯ ಆದ್ರೆ ನಮ್ಮ್ ಹುಡುಗರಿಗೆ ಫುಲ್ ಮಜಾ, ಶಾಲೆಗೆ ರಜಾ.ಮಧ್ಯದಲ್ಲಿ ನೆರೆ ಬಂದಿದ್ದನ್ನ ನೋಡೋಕೆ ಹೋಗೋದು ನೋಡಿಬಂದು ಎಲ್ಲರಿಗೂ ಹೇಳೋದು ಆಹಾ ಚೆನ್ನಾಗಿರುತ್ತೆ ……

ಅವರಿವರ ಮನೆ ಮಾವಿನ ಮರ ಹತ್ತಿ ಬೈಸಿಕೊಳ್ಳೋದು, ಸ್ವಲ್ಪ ತುಂಬಿದ ಹಳ್ಳ ದಾಟೋದು, ಹೊಸ ಅಂಚು ಹಾಕಿದ ಗದ್ದೆಮೇಲೆ ನೆಡೆದು ಜಾರಿಬಿದ್ದು ಎದ್ದು ಮನೆಗೆ ಹೋಗೋದು, ಜಾರುತ್ತೆ ಅಂತ ಗೊತ್ತಿದ್ದೂ  ಮರಹತ್ತಿ ಬಿದ್ದು ಏಟು ಮಾಡಿಕೊಂಡ್ರೆನೇ ಮಳೆಗಾಲ ಸಾರ್ಥಕವಾಗ್ತಿದ್ದಿದ್ದು  ನಮ್ಮ  ಸ್ಕೂಲ್ ದಿನಗಳಲ್ಲಿ ಗೊತ್ತ?

ಮಳೆಗಾಲದಲ್ಲಿ ಶಾಲೆಗೆ ರಜೆ ಇದ್ದರೆ ಅಡೊ ಚೆನ್ನೆ ಮಣೆ, ಹಾವು ಏಣಿ, ಚದುರಂಗ, ಮನೆ ದೊಡ್ಡಡಿದ್ರೆ ಕದ್ದು ಕೂರುವ ಆಟ ಇದೆಲ್ಲ ಚಿಕ್ಕಮಕ್ಕಳಿಗೆ…..

ಈ ವರ್ಷವೂ ಮಳೆಗಾಲ, ತಂಗಾಳಿ ,ನಮ್ಮಮಲೆನಾಡ ಮೇಲಂತೂ ವರುಣನ ವರ್ಷ ಸಿಂಚನ ಶುರುವಾಗಿ ಬಿಟ್ಟಿದೆ, ಹೀಗಿರುವಾಗ ನಮ್ಮೆಲ್ಲ ರೈತ ಭಾಂಧವರು ಕೆಲಸ ಶುರುಮಾಡಿದ್ದಾರೆ ಹಾಗೆ ಹುಡುಗರಿಗೆ ಶಾಲೆ ಶುರುವಾಗಿದೆ ಅವರಿಗೆಲ್ಲ ನಮ್ಮ ನಿಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?  ಮತ್ತೊಮ್ಮೆ ಬರ್ತೀನಿ. (ಸೂಚನೆ :ಇದನ್ನ ನೋಡಿ ಹಲಸಿನ ಬೀಜ ಸುಟ್ಟು ಅದು ಹೊಟ್ಟಿ, ಅಥವಾ ಜಾಸ್ತಿ ತಿಂದು ಗ್ಯಾಸ್ ಪ್ರಾಬ್ಲಮ್ ಆದ್ರೆ ನಾನಂತೂ ಕಾರಣ ಅಲ್ಲಪ್ಪ )

ಏಪ್ರಿಲ್, ಮೇ……

ಏಪ್ರಿಲ್ 14, 2011

ಗೆಳೆಯರೇ  ಮತ್ತೆ ಏನೋ ಮಾತಾಡಬೇಕು, ನಿಮ್ಮೊಂದಿಗೆ ಕೆಲಕಾಲ ಹರಟೆಹೊಡೆದು ನೀವೆಲ್ಲ ಹೇಗಿದ್ದೀರಿ ಅಂತ ನೋಡಬೇಕು ಅಂತ ಮನಸಾಗಿದೆ ಅದಕ್ಕಾಗಿ ಏನಾದ್ರೂ ವಿಷ್ಯಬೇಕಲ್ಲ ಸೋ ಇವತ್ತು ಮತ್ತೆ ಬಂದಿದೀನಿ, ನಿಮ್ಗೆಲ್ಲಾ ಗೊತ್ತಿದೆ ನಾನು 2 ಪಾಸು 3 ಅನ್ನೋ ಆರ್ಟಿಕಲ್ ಬರ್ದಿದ್ದೆ ನೀವು ಓದಿದ್ರಿ ಅದೇ ತರದ್ದು, ಆದ್ರೆ ಈಗ ಶಾಲೆಗೆ ರಜೆ ಬಂದಿದ್ಯಲ್ಲಾ………..ಓದಿ, ನನ್ನೊಂದಿಗೆ ನಿಮ್ಮೆಲ್ಲರ ಬಾಲ್ಯಕ್ಕೆ ಹೋಗಿ ಸವಿ ನೆನಪಗಳನ್ನ ಕೆದಕೋಣ ಬನ್ನಿ..

ಶಾಲೆಗೆ ರಜೆ ಬಂತು ಅಂದ್ರೆ ಆದ್ರ ಅರ್ಥ ಇನ್ನೂ 2 ತಿಂಗಳು ಪುಸ್ತಕ ಅಥವಾ ಓದಿಗೆ ಸಂಬಂದಿಸಿದ ವಿಚಾರಗಳನ್ನು ದೂರವಿಡಲೇಬೇಕು ಅನ್ನುವ ತೀರ್ಮಾನ ಮಾಡಿ ಸಮಾಜ ಸೇವೆಗೆ 🙂 ಸಜ್ಜಾಗುತ್ತಿದ್ದೆವು ಅಲ್ವಾ? ಎಷ್ಟು ಸೂಪರ್ ಅಲ್ವಾ ಆದಿನಗಳು ?

ಮಾವಿನ ಕಾಯಿಗೋಸ್ಕರ ಗೌಡರ ಮನೆ ದಿಂಡಿನ ಮಾವಿನ ಮರ ಹತ್ತಿ ಕಾಯಿ ಕಿತ್ತು, ಅವ್ರ ಹತ್ರ ಬೈಸ್ಕೋಂಡು ಬಂದ್ರೂ ಸಹ ತಂದ ಮಾವಿನ ಕಾಯಿಗೆ ಉಪ್ಪು ಸೇರಿಸಿ ತಿಂದರೆ ಬೈಸ್ಕೊಂಡಿದ್ದೇಲಾ ಅರ್ಧ ನಿಮಿಷದಲ್ಲಿ ಮಾಯ!!

ಗೇರು ಹಣ್ಣು ತಿಂದು ರಾತ್ರಿಯಲ್ಲಾ ಗಂಟಲು ಕೆರೆದು ಕೆಮ್ಮು ಬಂದ್ರೂ ಮರುದಿನ ಆದೇ ಗೇರುಮರ ನಮಗೋಸ್ಕರ ಕಾಯ್ತಾ ಇರ್ತಿತ್ತು, “ಇವತ್ತೂ ಗೇರು ಹಣ್ಣು ತಿನ್ನಿ ರಾತ್ರಿ ಕೆಮ್ಮೀ , ನಾನು ಎಲ್ಲರನ್ನೂ ಒದ್ದು ಅಂಗಳದಲ್ಲಿ ಮಲಗಿಸ್ತಿನಿ” ಅಂತ ಅಜ್ಜಿ ಹೇಳಿದ್ರೆ ನಾವು ಒಬ್ರ ಮೇಲೆ ಮತ್ತೊಬ್ರೂ ಚಾಡಿ ಹೇಳ್ತೀದ್ವಿ “ನಾನು ಏನೂ ತಿಂದಿಲ್ಲ ಇವ್ನೆ ಜಾಸ್ತಿ ತಿಂದಿದಾನೆ ಇವತ್ತು” ಅಂತ ಅಲ್ವಾ?

ತೋಟದಲ್ಲಿ ನೆರಳಿಗಾಗಿ ಬೆಳೆಸಿದ ಕಲ್ಲುಬಾಳೆ, ಕೊನೆ ಬಿಟ್ರೆ ಅದು ನಮ್ಮ ಗ್ರೂಪ್ ನ ಕೆಲವರಿಗೆ ಮಾತ್ರ ಗೊತ್ತಾಗ್ತಾ ಇತ್ತು, ತಕ್ಷಣ ತೋಟಕ್ಕೆ ಕತ್ತಿ ತಗೊಂಡು ಹೊದ್ವಿ ಅಂದ್ರೆ ಆ ಬಾಳೆಕೊನೆ ಜೊತೆಗೆ ಬಾಳೆ ಮರನೇ ಕಡಿಯೋದು, ಕೊನೆಯನ್ನ ಅಡಿಕೆ ಸೋಗೆಒಟ್ಳು ಸಂದಿ ಕದ್ದು ಹಾಕೋದು, ಅದು ಹಣ್ಣಾಗೋತನಗಕ ಪ್ರತಿದಿನ ಹೋಗಿ ನೋಡೋದು ಹಣ್ಣಾಗಿದ್ದೆ ತಡ ನಮ್ಮ ತಂಡದ ಕೆಲವರಿಗೆ ಮಾತ್ರ ಸುದ್ದಿ ಮುಟ್ಟಿಸಿ ಪೂರಾ ತಿಂದು ಬೇರೆಯವರಿಗೆ ಸಿಟ್ಟುಬರಿಸೋದು, ಹೊಟ್ಟೆ ಉರಿಸೋದು, ಹೊಟ್ಟೆ ನೋವು ಮಾಡ್ಕೊಳ್ಳೋದು….

ಹತ್ತಿರದ ಪ್ಯಾರಲೆ ಮರಕ್ಕೆ ನಾವು ದಿನ ಹೋಗಿ ಬಂದು ಆದ್ರಲ್ಲಿರೋ ಕಡ್ಡೆ, ಕಾಯಿಯಲ್ಲ ತೆರೆದು ಹಾಕಿಲ್ಲಾ ಅಂದ್ರೆ ಅವತ್ತು ಸರಿಯಾಗಿ ನಿದ್ದೆ ಬರ್ತಿರ್ಲಿಲ್ವೇನೋ ಅಲ್ವಾ?

ಅಜ್ಜ ಎಲ್ಲರಿಗೂ ಮಾರಿ ಬಿಸ್ಕೆಟ್ ತಂದಿದಾರೆ ಅಂದ್ರೆ ಅವತ್ತು ಅಜ್ಜನ ಮೇಲೆ ಇನ್ನಿಲ್ಲದ ಪ್ರೀತಿ, ಹತ್ತಿರದ ಶಾಲೆ ಬಯಲ್ಲಲ್ಲಿ  ಮರಕೋತಿ ಆಡೋದು ದಿನಕ್ಕೆ ಒಬ್ಬರಂತೆ ಸರದಿಯಲ್ಲಿ ಕೈ,ಕಾಲು ನೋವು ಮಾಡಿಕೊಂಡು, ಮನೆಗೆಬಂದು ಏನು ಆಗಿಲ್ಲ ಅಂತ ತೋರಿಸಿಕೊಳ್ಳೋದು……

ಇನ್ನೂ ಒಂದು ಹೆಜ್ಜೆ ಮುಂದು ಹೋಗಿ, ಕಾಡಿಗೆ ಹೋಗೋದು, ಅಲ್ಲಿ ಹಲಸಿನ ಹಣ್ಣು ಕಿತ್ತು ಅಲ್ಲೇ ತಿಂದು ಕೈಎಲ್ಲಾ ಮೇಣ ಮಾಡಿಕೊಂಡು ಬಂದ್ರೆ ನಮಗಾಗಿ ಅಪ್ಪನ ಕೋಲು, ಅಮ್ಮನ ಬೈಗುಳಗಳು ಕಾಯುತ್ತಾ ಇರ್ತಿದ್ವು.

ನೆನಪಿದ್ಯಾ? ಹೆಬ್ಬಲಸು, ಹೆಬ್ಬಲಿಗೆ, ಕಲ್ಲುಸಂಪಿಗೆ, ಕರ್ಜಿಕಾಯಿ, ಕಾಡು ನೇರಳೆ, ರಂಜದ ಹಣ್ಣು ಕೆಲವು ಕಾಟು ಮಾವು, ಇವೆಲ್ಲ ನಮಗೋಸ್ಕರ ಬೇಸಿಗೆ ರಜದಲ್ಲೇ ಹಣ್ಣು ಬಿಡುತ್ತಿದ್ದವು, ಅದನ್ನ ತಿಂದು ನಾವು ಎಷ್ಟು ಖುಷಿ ಪಡ್ತೀದ್ವಿ !!

ದಿನ ನಮ್ಮ ಗ್ರೂಪ್ ಅಲ್ಲಿ ಒಂದಲ್ಲಾ ಒಂದು ಜಗಳ, ಆಮೇಲೆ ಅರ್ಧ ಘಂಟೆಲಿ ಯೆಲ್ಲಾ ಸಂಧಾನ, ಸಮಧಾನ, ಆದ್ರ ಮದ್ಯದಲ್ಲಿ ಅವನ ಕಡೆ ನಾಲ್ಕು ಜನ ಇವನ ಕಡೆ ನಾಲ್ಕುಜನ, ಅವನ ಗ್ರೂಪ್ ಮೆಂಬರ್ಸ್ ಹತ್ರ ಇವರ ಗ್ರೂಪ್ ನವರು ಮಾತಾಡಲ್ಲ!!

ಮನೆ ಟಿ‌ವಿ ಲಿ ಬರೀ ದೂರದರ್ಶನ್ ಬರುತ್ತೆ ಅಂತ ಗೌಡ್ರ ಮನೆ ಗೆ ಹೋಗಿ ಸ್ವಲ್ಪ ಉದಯ ಟಿ‌ವಿ ನೋಡಿದ್ದು, ನೋಡ್ತಾ ನೋಡ್ತಾ ಟೈಮ್ ಹೋಗಿದ್ದೆ ಗೊತ್ತಾಗ್ದೆ ರಾತ್ರಿ ೮ ಘಂಟೆಗೆ ಮನೆಗೆ ಬಂದ್ರೆ ಅಪ್ಪ ನ ಕೋಲು ನಮ್ಮ ಬೆನ್ನಿನಮೇಲೆ ಬಿಸಿ ಬಿಸಿ ಬಾಸುಂಡೆ ಬಾರ್ಸಿದ್ವು,

ಅಡಿಕೆ ಸೋಗೆ ತಂದು ಅದರಲ್ಲಿ ಆಟದ ಮನೆ ಕಟ್ಟಿದ್ದು, ಅದರೊಳಗೆ ಗರಟಗಳನ್ನು ತಂದು ಮಣ್ಣಲ್ಲೆ ಅಡಿಗೆ ಮಾಡಿದ್ದು, ಗದ್ದೆಯ ಕೆನೆ ಮಣ್ಣಲ್ಲಿ ಶಿವಲಿಂಗ ಮಾಡಿದ್ದು, ಹಾಗೆ ಪ್ರತಿದಿನ ಸಂಜೆ ಕ್ರಿಕೆಟ್ ಆಟ, ಮೈ ಕೈ ನೋವು…ಎಷ್ಟು ಕೆಲ್ಸ …ಊಪ್ಸ್!

ವಿಡಿಯೋ ಗೇಮ್ ಕೊಡಿಸಿದ್ರೆ ಅದರ ಒಳಗಡೆ ಏನಿದೆ? ಅಂತ ಎಂಜಿನಿಯರ್ಗಳತರ ಅದನ್ನ ಬಿಚ್ಚಿ ನೋಡಿ ಆಮೇಲೆ ಅದನ್ನ ಮತ್ತೆ ಜೋಡಿಸಿದ್ರೆ ಏನು ಬರ್ತಾ ಇಲ್ಲ!! ಅದು ಹಾಳಾಗಿದೆ ಅಂತ ಗೊತ್ತಾದ್ರೆ ಅಪ್ಪ ಬೈತಾರೆ ಅಂತ ಅದನ್ನ ಮುಚ್ಚಿ ಹಾಕಿದ್ದು, ಸೂಪರ್ ಆಗಿತ್ತು….

ಅಜ್ಜಿ ಮನೆಗೆ ನಾಳೆ ಅಪ್ಪ ಕರ್ಕೊ೦ಡು ಹೋಗ್ತಾರೆ, ಅಲ್ಲೇ ಇನ್ನೂ ೧ ತಿಂಗಳು ಇರೋದು ಅಂತ ತೀರ್ಮಾನ ಆಗ್ತಿದ್ದ ಹಾಗೆ ಅಲ್ಲಿಗೆ ನಮ್ಮ ಇತರ ಮಾವನ ಮಕ್ಕಳು ಬಂದಿರ್ತಿದ್ರು  ಅನ್ನೋದನ್ನ ಅರ್ಥ ಮಾಡಿಕೊಂಡ ನಾವು ಎಲ್ಲಾ ರೀತಿಯ ಪ್ಲಾನುಗಳನ್ನ ಮಾಡಿಕೊಂಡು ಸೀದಾ ಜಯಪುರ ಬುಸ್ಸು ಹತ್ತಿ ಕೂಳೂರ್ ಹತ್ರ ಮಡುವಿನಕೆರೆ ಕ್ರಾಸ್ ಅಲ್ಲಿ ಇಳ್ಕೊಂಡು ಅಜ್ಜಿ ಮನೆ ಗೇಟ್ ಎದುರ್ಗಡೆ ಹೋಗಿ ನೋಡಿದ್ರೆ ಅಜ್ಜ, ಅಜ್ಜಿ ಎಲ್ಲಾ ನಮ್ಮ ಬರುವಿಕೆಗಾಗಿಯೇ ವರ್ಷಗಳ ಕಾಲ ಕಾದಿದ್ರೆನೋ ಅನ್ನೋವಷ್ಟು ಪ್ರೀತಿಯಿಂದ ಬರಮಾಡಿಕೊಳ್ತಿದ್ರು…..

ಮತ್ತೆ ಸ್ಕೂಲಿಗೆ ಹೋಗ್ಬೇಕು ಅಂದ್ರೆ ಕ್ಯಾಮೆಲ್ ಜಾಮಿಟ್ರಿನೇ ಬೇಕು ಅಂತ ಹಟ, ಹೊಸ ಚಪ್ಪಲಿ, ಹೊಸ ಬ್ಯಾಗು, ಹೊಸ ಪುಸ್ತಕಗಳು, ವಾವ್…..ವರ್ಷ ವರ್ಷ ಹೊಸಾದೂ!!!!

ಈಗಿನ ಸಮ್ಮರ್ ಕ್ಯಾಂಪುಗಳನ್ನ ಮೀರಿಸಿ ನಿಲ್ತಿತ್ತು ಅಲ್ವಾ ನಮ್ಮ ಬೇಸಿಗೆ ರಜೆ?  ಹಾಗೆ ಮತ್ತೆ ಕಳೆದು ಹೋದ ಆ ದಿನಗಳು ಮತ್ತೆ ಬಂದರೆ ಅದೆಷ್ಟು ಚೆಂದ……ಹಾಗೆ ಚಿರನಿದ್ದೆಗೆ ಜಾರಿದ ಅಜ್ಜ ಅಜ್ಜಿ ಕೂಡ ವಾಪಸ್ ಬ೦ದಿದ್ದರೆ…ಎಲ್ಲಾ ಇಂದು ನೆನಪು ಮಾತ್ರ… ನಿಮಗೂ ನಿಮ್ಮ ಬೇಸಿಗೆ ರಜೆ ನೆನಪಾಯಿತು ಅಲ್ವಾ?  ಮತ್ತೊಮ್ಮೆ ಬರ್ತೀನಿ ನಿಮಗೆ ಎನನ್ನಿಸ್ತು  ಒಂದು ಕಾಮೆಂಟ್ ಹಾಕಿ ಇಲ್ಲಿ  🙂

ಖೇಲೆ ಹಮ್ ಜೀ ಜಾನ್ ಸೆ

ಡಿಸೆಂಬರ್ 23, 2010

ನಮಸ್ತೆ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ,

ತುಂಬಾದಿನಗಳೇನು ಈಬಾರಿ ಹಲವು ತಿಂಗಳುಗಳೆ ಕಳೆದು ಹೋಗಿವೆ ನಿಮ್ಮೊಂದಿಗೆ ಮಾತಾಡಿ ಅಲ್ವೆ? ಅದಕ್ಕೆ ಎನಾದ್ರು ಮಾಡಿ ಇವತ್ತು ಸ್ವಲ್ಪ ಎನಾದ್ರು ಬರೀಲೇಬೇಕು ಅಂತ ತೀರ್ಮಾನ ಮಾಡಿಕೊಂಡು ಕೂತಿದೀನಿ….ವಿಚಾರ ಏನಪ್ಪಾ ಅಂದ್ರೆ ನಾನು ಸುಮಾರು ೧೫ ದಿನಗಳ ಹಿಂದೆ “ಖೇಲೆ ಹಮ್ ಜೀ ಜಾನ್ ಸೆ” ಅಂತ ಒಂದು ಪಿಚ್ಚರ್ ನೊಡ್ದೆ ….ತುಂಬಾ ಚೆನಾಗಿದೆ…

ಮಾನಿನಿ ಚಟರ್ಜಿಯವರ “do and die” ಅನ್ನುವ ಕಾದಂಬರಿ ಆಧಾರಿತವಾಗಿರುವ ಚಿತ್ರ ಅದು. ಅಲ್ಲಿನ ಎಲ್ಲಾ ನಮ್ಮ ಕ್ರಾಂತಿವೀರರ ಪಾತ್ರಗಳಿಗೆ ಜೀವತುಂಬಿಸಿ ಅಧ್ಬುತವಾಗಿ ತೊರಿಸಲಾಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಈ ಘಟನೆಯನ್ನು “ಚಿತ್ತಗಾಂಗ್ ಆರ್ಮರಿ ರೈಡ್” ಎಂದೂ ಕರೆಯಲಾಗಿದೆ ಮತ್ತು  ಈ ಘಟನೆಯು ಎಪ್ರಿಲ್ ೧೮ ೧೯೩೦ ರಂದು ನೆಡೆದಿರುವುದೆಂದು ಚಟರ್ಜೀ ಅವರ ಪುಸ್ತಕದಲ್ಲಿ ಹೇಳಲಾಗಿದೆ.

ಕಥೆ ಚಿತ್ತಗಾಂಗ್ ನ  ಹುಡುಗರು ಆಡುವ ಆಟದ ಮೈದಾನವನ್ನ ಬ್ರಿಟೀಷ್ ಅಧಿಕಾರಿಗಳ ತರಬೇತಿಗಾಗಿ ವಶಪಡಿಸಿಕೊಳ್ಳುವ ಮೂಲಕ ಶುರುವಾಗುತ್ತೆ.ಚಿತ್ರದ ಪ್ರಮುಖ ಪಾತ್ರ ಅಭಿಷೇಕ್ ಬಚ್ಚನ್  ಅವರದ್ದು,ಅದರಲ್ಲಿ ಅವರು ಸೂರ್ಜೊ ಸೇನ್ (ಮಾಸ್ಟರ್ ದಾ) ಆಗಿ ಕಾಣಿಸಿಕೊಂಡಿದ್ದಾರೆ.

ಆಟದ ಮೈದಾನ ವಾಪಸ್ ಪಡೆಯಲು ಸಹಾಯ ಕೇಳಿ ಬರುವ ಹುಡುಗರಲ್ಲಿನ ಉತ್ಸಾಹ ಕಂಡು ಅವರನ್ನು ಕ್ರಾಂತಿಕಾರಿ ಚಳುವಳಿಗೆ ಸೂರ್ಜೊ ಸೇನ್ ಸೇರಿಸಿಕೊಳ್ಳುತ್ತಾನೆ, ನಂತರ ಕ್ರಾಂತಿಯ ಮೊದಲ ಅಂಗವಾಗಿ ಬ್ರಿಟೀಷ್ ಅಧಿಕಾರಿಗಳು  ಇರುವ ಅರಮನೆಯಂತಹ ಮನೆಯ ಒಳಗೂ ಹೊರಗೂ ಏನೇನಿದೆ,  ಹಾಗೆ ಯಾವಕಡೆಯಿಂದ ದಾಳಿಮಾಡಿ ಅವರನ್ನು ಓಡಿಸಬಹುದು ಅನ್ನುವ ಲೆಕ್ಕಾಚಾರ ಶುರುವಾಗುತ್ತದೆ ಆ ಸಮಯದಲ್ಲಿ ಕೊಲ್ಪನ (ದೀಪಿಕಾ ಪಡುಕೋಣೆ ಈ ಪಾತ್ರದಲ್ಲಿದ್ದಾರೆ ) ಮತ್ತು ಅವಳ ಗೆಳತಿ ಅಲ್ಲಿನ ಕೆಲಸಗಾರರ ರೂಪದಲ್ಲಿ ಹೋಗಿ ಎಲ್ಲಾ ಮಾಹಿತಿ ಸಂಗ್ರಹಿಸಿಕೊಂಡು ಬರುತ್ತಾರೆ, ನಂತರದಲ್ಲಿ ಅವ್ರು ಸಹ ಸಕ್ರೀಯ ಕ್ರಾಂತಿ ಯ ಹೋರಾಟದಲ್ಲಿ ಬಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.

ನಂತರ ಕ್ರಾಂತಿ ಚಳುವಳಿಗೆ ದುಮುಕಿದ ಪ್ರತಿಯೊಬ್ಬರ ಮನೆಯಿಂದ  ನಗ, ನಾಣ್ಯಗಳನ್ನು ಸಂಗ್ರಹಿಸಿ ಸೂರ್ಜೋ ಸೇನ್ ತಂಡವು ೭ ಬಂದೂಕು ಹಾಗೆ ೩ ಪಿಸ್ತೂಲುಗಳನ್ನು ಖರೀದಿಸುತ್ತದೆ ಕಲ್ಪೊನಾ ನಾಡಬಾಂಬ್ ತಯಾರಿಕೆಗೆ ಬೇಕಾಗುವ ರಾಸಾಯನಿಕಗಳನ್ನು ಒಟ್ಟುಗೂಡಿಸಿ ೩ ಬಾಂಬ್ ಗಳನ್ನೂ ತ ತಯಾರಿಸಿ  ಕೊಡುತ್ತಾಳೆ. ಆಮೇಲೆ ಮೊದಲ ದಾಳಿಯಾಗಿ ಟೆಲಿಗ್ರಾಫ್ ಕಚೇರಿಯನ್ನು ರಾತ್ರೊ ರಾತ್ರಿ ಪುಡಿ ಪುಡಿ ಮಾಡಲಾಗುತ್ತದೆ, ಹಾಗೆ ರೈಲ್ವೆ ಹಳಿಗಳನ್ನು ತುಂಡುಮಾಡಲಾಗುತ್ತದೆ. ನಂತರ ೨ನೇಯದಾಗಿ ಬ್ರೀಟೀಷ್ ಅಧಿಕಾರಿಗಳಿರುವ ಅರಮನೆಗೆ ದಾಳಿ ಮಾಡಿ ಅಲ್ಲಿ ಇರುವ ಅಧಿಕಾರಿಗಳನ್ನು ಕೊಲ್ಲುವ ಅಥವ ಓಡಿಸುವ ಯತ್ನ ವಿಫಲವಾಗುತ್ತದೆ ಎಕೆಂದರೆ ಅಲ್ಲಿ “Good Friday” ಆಗಿರುವುದರಿಂದ ಅಲ್ಲಿ ಯಾವ ಅಧಿಕಾರಿಯೂ ಇರುವುದಿಲ್ಲ!!

ಆಂಗ್ಲರವೇ ಶಸ್ತ್ರಾಸ್ತ್ರಗಳನ್ನ ವಷಪಡಿಸಿಕೊಂಡು ಅವರನ್ನ ಹಿಮ್ಮೆಟ್ಟಿಸುವಕೆಲಸಕ್ಕೆ ಸೂರ್ಜೊ ಸೇನ್ ತಂಡ ರೆಡಿಯಾಗುತ್ತದೆ ಇರುವ ಮೂರೇ ಮೂರು ಬಾಂಬ್ ಗಳನ್ನ ಬಳಸಿ ಅವರ ಬಂದೂಕು ಸಂಗ್ರಹಗಾರವನ್ನೇನೊ ವಷ ಪಡಿಸಿಕೊಳ್ಳಲಾಗುತ್ತದೆ, ಆದರೆ ಅಲ್ಲಿ ಇವರಿಗೆ ಬಂದೂಕಿಗೆ ಬೇಕಾಗುವ ಮದ್ದುಗುಂಡುಗಳು ಸಿಗುವುದೇಇಲ್ಲ. ಯಾಕೆಂದರೆ ಅತಿಬುದ್ಧಿವಂತರಾದ ಬ್ರಿಟೀಷರು ಬಂದುಕುಗಳನ್ನು ಒಂದುಕಡೆ ಹಾಗು ಮದ್ದುಗುಂಡುಗಳನ್ನು ಮತ್ತೊಂದೆಡೆ ಸಂಗ್ರಹಿಸಿಟ್ಟುಕೊಂಡಿರುವುದು.ಇವರಲ್ಲಿರುವ ಒಂದೇ ನಳಿಕೆಯ ಬಂದೂಕುಗಳಿಂದ ಹೋರಾಟ ಮುಂದುವರೆಸುವ ಸಾಹಸಕ್ಕೆ ಕೈ ಹಾಕುತ್ತಾರೆ,ಆದರೆ ಆಂಗ್ಲರ ಅಸಂಕ್ಯ ಸೈನ್ಯ ಬಲದಿಂದ ತಪ್ಪಿಸಿಕೊಳ್ಳಲಾದೀತೇ? ಅವರಲ್ಲಿರುವ ಆಧುನಿಕ ಶಸ್ತ್ರಾಸ್ತ್ರ ಗಳನ್ನ ಬಳಸಿಕೊಂಡು ಎಲ್ಲ ನಮ್ಮ ಕ್ರಾಂತಿಕಾರಿಗಳ ಮಾರಣ ಹೋಮ ಮಾಡುವ, ಹೆಣಗಳನ್ನು ಒಟ್ಟುಗೂಡಿಸಿ ಪೆಟ್ರೋಲ್ ಹಾಕಿ ಸುಡುವ ರೀತಿ, ಅವುಗಳನ್ನ ಚಿತ್ರದಲ್ಲಿ ತೋರಿಸುವ ಪರಿ ಎಂತಹ ಭಾರತೀಯನಲ್ಲೂ ಸ್ವಾತಂತ್ರ ಹೋರಾಟದ ಭಯಾನಕ ದೃಶ್ಯಗಳನ್ನು ತೆರೆದಿಡುತ್ತದೆ.ಕೊನೆಗೆ ಸೂರ್ಜೋ ಸೇನ್ ಗೆ ಗಲ್ಲು ಶಿಕ್ಷೆಯಾಗುತ್ತದೆ, ಅವರಿಗೆ ಸಹಕರಿಸಿದ ಕೊಲ್ಪನ ಹಾಗು ಅವಳ ಗೆಳತಿಗೆ ಜೀವಾವದಿ ಶಿಕ್ಷೆ………

ಚಿತ್ರ ನೋಡುವ ಪ್ರತಿಕ್ಷಣವೂ ರೋಮಾಂಚನಕಾರಿ ಘಟನೆಗಳು ಕಣ್ಣೆದುರು ಬಂದು ನಿಲ್ಲುತ್ತವೆ, ಬ್ರಿಟೀಷರ ಅರಮನೆಯ ಮುಂದೆ “ಇಲ್ಲಿ ನಾಯಿಗಳಿಗೆ ಹಾಗು ಭಾರತೀಯರಿಗೆ ಪ್ರವೇಶವಿಲ್ಲ”  ಅನ್ನುವ ಬೋರ್ಡ್ ಹಾಕಿರುವುದನ್ನು ತೋರಿಸುತ್ತಿರುವಾಗ ಮೈ ಉರಿದು ಹೋಗುತ್ತದೆ.ಸೂರ್ಜೋ ಸೇನ್ ಹಾಗು ಅವರ ತಂಡ ಆಡುವ ಪ್ರತಿಯೊಂದು ಮಾತು ನಮ್ಮಲ್ಲಿ ದೇಶಪ್ರೇಮ ತರದೇ ಇರದು. ಅವರಿಗಾಗುವ ದು:ಸ್ಥಿತಿ  ಯನ್ನು ನೋಡುವಾಗಲಂತೂ ಕಣ್ಣೀರು ಬಂದುಬಿಡುತ್ತವೆ.

ಚಿತ್ತಗಾಂಗ್ ಹೋರಾಟದಲ್ಲಿ ಮಡಿದ ನಮ್ಮೆಲ್ಲ ಸ್ವಾತಂತ್ರ್ಯ ಹೋರಾಟಗರರು: ಸೂರ್ಜೊ ಸೇನ್ (ಮಾಸ್ತರ್ ದಾ), ಗಣೇಶ್ ಘೊಷ್, ಲೊಕೆನಾಥ್ ಬಾಲ್, ನಿರ್ಮಲ್ ಸೇನ್, ನರೇಶ್ ರಾಯ್, ಸಸಾಂಕ ದತ್ತಾ, ಅರ್ದೆಂದು ದಸ್ತಿದಾರ್, ಹರಿಗೋಪಾಲ್ ಬಾಲ್, ತರಕೆಶ್ವರ್ ದಸ್ತಿದಾರ್, ಜಿಬಾನ್ ಘೋಶಾಲ್, ಆನಂದ ಗುಪ್ತ, ಪ್ರೀತಿ ಲತ್ತಾ, ಹಾಗು ಸೋಬೋದ್ ರಾಯ್ (ಕೇವಲ ೧೪ ವರ್ಷದ ಹುಡುಗ ಇವನು) ಇವರೆಲ್ಲರಿಗೂ ನನ್ನ ಈ ಲೇಖನದ ಮೂಲಕ ಅಕ್ಷರ ನಮನ

ಹಾಗೆ ಸ್ನೇಹಿತರೆ, ಯಾವಾಗಲು, ದೊಡ್ಡ ದೊಡ್ಡ ಹೆಸರುಗಳನ್ನ ಸ್ವಾತಂತ್ರ ಹೋರಾಟಗಾರೆಂದು ಹೇಳುವಾಗ, ಅವರ ಜಯಂತಿಗಳನ್ನು ಆಚರಿಸುವಾಗ, ರಾಷ್ಟ್ರೀಯ ಹಬ್ಬಗಳಲ್ಲಿ ಅವರುಗಳ ಗುಣಗಾನ ಮಾಡುವಾಗ ನಮಗಾಗಿ ಪ್ರಾಣ ತೆತ್ತ ಎಷ್ಟೋ ಸೂರ್ಜೋ ಸೇನ್ರಂತಹ ಕ್ರಾಂತಿಕಾರಿಗಳನ್ನು ನೆನೆಯುವುದಲ್ಲದೆ ಅವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೂ ತಿಳಿಹೇಳುವ ಅಗತ್ಯ ಎಷ್ಟಿದೆ ಅಲ್ಲವೆ? ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಬಂದ ಸ್ವಾತಂತ್ರ ದ ಹಿಂದೆ ಎಷ್ಟೋ ಕ್ರಾಂತಿಕಾರಿಗಳ ರಕ್ತದ ಗುರುತಿದೆ ಎನ್ನುವುದನ್ನ ನಾವು, ಈಗಿನ ರಾಜಕೀಯ ನಾಯಕರು ಮರೆತಹಾಗಿದೆ…ನಿಮಗೆ ಏನನ್ನಿಸಿತು ಅನ್ನುವುದನ್ನೂ ತಿಳಿಸಿ.. … ಮತ್ತೊಮ್ಮೆ ಸಿಗುತ್ತೇನೆ…..

ಹಾಗೆ “Do and Die ” ಬಗ್ಗೆ ಹೆಚ್ಚಿನ ವಿವರಗಳು ಈ ಲಿಂಕಿನಲ್ಲಿ ಇವೆ ಒಮ್ಮೆ ಕ್ಲಿಕ್ಕಿಸಿ (ವಿಕಿಪೀಡಿಯ ಸಂಗ್ರಹ)