Posts Tagged ‘ಶೃಂಗೇರಿ’

ಕನ್ನಡ ಮತ್ತು ಇಂಗ್ಲೀಷ್

ಜೂನ್ 7, 2012

ನಮಸ್ಕಾರ ಸ್ನೇಹಿತರೇ ಹೇಗಿದ್ದೀರಿ? ಎಷ್ಟೊಂದು ದಿನ ಆಯಿತಲ್ಲ ನಿಮ್ಮನ್ನ ಭೇಟಿಮಾಡಿ, ಹಾಗಾಗಿ ನಿಮ್ಮೊಂದಿಗೆ ಮತ್ತೆ ಮಾತಾಡಬೇಕು ಅನ್ನಿಸಿದೆ, ಮತ್ತೊಂದು ವಿಷಯಸಿಕ್ಕಿದೆ, ಬನ್ನಿ ಸ್ವಲ್ಪ ಹೊತ್ತು ವಿಚಾರ ವಿನಿಮಯ ನೆಡೆಸೋಣ ಏನಂತೀರಿ?

ಇತ್ತೀಚೆಗ ನಮ್ಮ ಘನ ಸರ್ಕಾರ , ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಇಂಗ್ಲೀಷ್ ಕಲಿಕೆಯನ್ನು ಪ್ರಾರಂಭಗೊಳಿಸುವ ಚಿಂತನೆಯನ್ನ ನೆಡೆಸಿದೆ ಅದಕ್ಕೆ ಪೂರಕವಾದ ಅಧಿಕೃತ ಆದೇಶ ಹೊರಬೀಳಬೇಕಿದೆ ಅಷ್ಟೇ….ಆದರೆ ಅದರ ಪರ ಹಾಗೂ ವಿರೋಧ ಚರ್ಚೆಗಳು ಶುರುವಾಗಿಬಿಟ್ಟಿದೆ……ಆದರೆ ಒಬ್ಬ ಸಾಮಾನ್ಯ ಕನ್ನಡಿಗನಾಗಿ ನಮ್ಮ ಚಿಂತನೆ ಏನು ಅನ್ನುವುದು ಅಲ್ಲವೇ?

ಎಷ್ಟೋ ಸಲ ನೋಡಿದ್ದೇವೆ, ನಮ್ಮ ವಿದ್ಯಾರ್ಥಿಗಳು  ಸರ್ಕಾರಿ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಓದಿ ನಂತರ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಇಂಗ್ಲೀಷ್ ಭಾಷೆಯ ಪ್ರೌಡಿಮೆಯ ಕೊರತೆಯಿಂದಾಗಿ ತಮ್ಮನ್ನ ತಾವು ಎಷ್ಟು ಸಮರ್ಥರೆಂದು ತೋರಿಸಿಕೊಳ್ಳಲಾಗದೆ ತೊಳಲಾಡುವುದನ್ನ. ಹಾಗೆ ಎಷ್ಟೋ ಹುಡುಗರು ನಮ್ಮ ಕಾಲದಲ್ಲಿ ಇಂಗ್ಲೀಷ್ ಪೇಪರ್ ನ ಮೂರು ಅಥವಾ ಅದಕ್ಕಿಂತ ಹೆಚ್ಚುಬಾರಿ ಬರೆದು ತಮ್ಮ  ಎಸ್ ಎಸ್ ಎಲ್ ಸಿ ಯನ್ನ ಪಾಸ್ ಮಾಡಿಕೊಂಡಿದ್ದನ್ನ ಕಂಡಿದ್ದೇವೆ, ಇನ್ನೂ ಕೆಲವರಂತೂ ಇಂಗ್ಲೀಷ್ ಪೇಪರ್ ಫೈಲ್ ಆಗಿದೆ ಅಂತ ಗೊತ್ತಾಗ್ತಾ ಇದ್ದ ಹಾಗೆ ತಮ್ಮ  ಶಿಕ್ಷಣವನ್ನೇ ನಿಲ್ಲಿಸಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಂಸಾರದ ಸಾವಿರ ಸಾವಿರ ತಲೆಬಿಸಿಯನ್ನ ಹೆಗಲ ಮೇಲೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಹೊತ್ತಿರುವುದನ್ನ ನೋಡಿ ಒಮ್ಮೆ ಮರುಗಿ ಹೋಗಿದ್ದೇವೆ ಅಲ್ಲವೇ? ಯಾರಿಗೆ ಗೊತ್ತು ಅವರಿಗೆ ಸ್ವಲ್ಪ ಹೆಚ್ಚಿನ ಅವಕಾಶ ಸಿಕ್ಕಿದ್ದರೆ ಹೆಚ್ಚು ಓದಿ ಒಳ್ಳೆಯ ರೀತಿಯಲ್ಲಿ ಸಮಸ್ಯೆಗಳನ್ನ ಎದುರಿಸುವ ಶಕ್ತಿ ಹೊಂದಿರುತ್ತಿದರೋ ಏನೋ?

ಇಂಗ್ಲೀಷ್ ಸಮಸ್ಯೆಗಳು ಇಲ್ಲಿಗೆ ನಿಂತಿಲ್ಲ , ಎಷ್ಟೋ ಬಾರಿ ನಮ್ಮ ರೈತ ಭಾಂದವರು ಮೋಸ ಹೋಗಿದ್ದೂ ಉಂಟು, ಅವರಿಗೆ ಬಂದ ನೋಟೀಸ್ , ಕಾಗದ, ಅಥವಾ ಬಂದ ಇನ್ನೇನೋ ಸರ್ಕಾರಿ ಆದೇಶಗಳನ್ನ ಸ್ವತಃ ಓದಿ ಅರ್ಥಮಾಡಿಕೊಳ್ಳಲಾಗದೆ ಯಾರೋ ಊರಲ್ಲಿ ಅರೆ ಬರೆ ಓದಿದ ವ್ಯಕ್ತಿಯ ಹತ್ತಿರ ಅದನ್ನ ಕೊಟ್ಟು ಓದಿಸಿ, ನಂತರ ಏನೂ ಗೊತ್ತಾಗದೆ ಸರ್ಕಾರಿ ಕಚೇರಿಗಳಿಗೆ, ಮಧ್ಯವರ್ತಿಗಳೊಂದಿಗೆ, ಓಡಾಡಿ ದುಡ್ಡು ತಿನ್ನಿಸಿ ಲಂಚದ ಬಲೆಯಲ್ಲಿ ಬಿದ್ದು, ಕೊನೆಗೆ ನಿರಾಶೆಯ ಕೈ ಹೊತ್ತು ಕೂತಿರುವುದನ್ನ ನೋಡಿದರೆ ತುಂಬಾ ಬೇಸರವಾಗುತ್ತದೆ ಅಲ್ಲವೇ?

ಯಾರೋ ದೊಡ್ಡದಾಗಿ ಇಂಗ್ಲಿಷ್ ಪೇಪರ್ ನ ಓದುವುದನ್ನ ನೋಡಿದಾಗ, ಎಲ್ಲೋ ಯಾರೋ ಅರೆ ಬರೆ ಇಂಗ್ಲೀಷ್ ಮಾತಾಡೋವಾಗ, ಇನ್ನೂ ಯಾರೋ ಒಮ್ಮೆ ತಮ್ಮ ದೊಡ್ಡತನ ತೋರಿಸಿಕೊಳ್ಳಲು ಇಂಗ್ಲೀಷ್ ನಲ್ಲೇ ಮಾತಾಡಿಸಿದಾಗ ಅದೆಷ್ಟು ಬಾರಿ ಯೋಚಿಸಿಲ್ಲ ….. ಛೇ ನನಗೇಕೆ ಹಾಗೆ ಇರಲು ಸಾದ್ಯವಿಲ್ಲ? ನನ್ನಲ್ಲಿ ಇಷ್ಟು ಜ್ಞಾನವಿದ್ದರೂ ಯಾಕೆ ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾದ್ಯವಿಲ್ಲ ? ನಾನೇಕೆ ಅಷ್ಟು ಹೆದರುತ್ತೇನೆ ಇವರ ಮುಂದೆ ? ಈ ಎಲ್ಲ ಪ್ರಶ್ನೆಗಳೂ ನಮ್ಮನ್ನ ಹಲವು ಬಾರಿ ಕಾಡಿವೆ ಹಾಗೆ ಕಾಡುತ್ತಲೇ ಇವೆ.

ಈಗ ಕನ್ನಡ ದಲ್ಲಿಯೇ ಕಡ್ಡಾಯ ಶಿಕ್ಷಣ ಅನ್ನುವುದನ್ನ ಒಪ್ಪಿದೆವು ಅಂದುಕೊಳ್ಳೋಣ……ನೋಡಿ ಅದೆಷ್ಟೋ ಲಕ್ಷಾಂತರ ಜನ ಪ್ರತಿವರ್ಷ ನಮ್ಮ ದೇಶದ ವಿವಿದ ಭಾಗಗಳಿಂದ ತಮ್ಮ ಇಂಜೀನಿರಿಯಂಗ್ , ಪದವಿಗಳನ್ನ ಮುಗಿಸಿಕೊಂಡು ಹೊರಬರುತ್ತಾರೆ ಅವರೆಲ್ಲರಿಗೂ ಅವರ ಮಾತೃಬಾಷೇಯನ್ನೇ  ಉಪಯೋಗಿಸಿಕೊಂಡು ಕೆಲಸ ಮಾಡುವ ಅವಕಾಶ ಸಿಗುತ್ತದೆಯೇ? ಇಲ್ಲವೇ ಎಲ್ಲ ಸ್ನೇಹಿತರೇ,ಈಗಿನ ಎಲ್ಲ ಕಾರ್ಪೊರೇಟ್ ಕಂಪನಿಗಳು, ಸಂಸ್ಥೆಗಳು ಇಂಗ್ಲೀಷ್ ನಲ್ಲೇ ಸಂದರ್ಶನ ಮಾಡುವುದು ಅಲ್ಲವೇ? ಅದಿರಲಿ ಎಲ್ಲರಿಗೂ ಅವರ ರಾಜ್ಯದಲ್ಲಿಯೇ ಕೆಲಸ ಸಿಗುತ್ತದೆಯೇ? ಇಲ್ಲ ಅವರು ಬೇರೆ ಕಡೆ ಹೋಗಲೇ ಬೇಕು ಆಗ ತಕ್ಷಣ ಅಲ್ಲಿನ ಸ್ಥಳೀಯ ಭಾಷೆಯನ್ನ ಕಲಿತುಬಿಡುವುದು ಸಾದ್ಯವೇ? ಹಾಗೆ ಸರ್ಕಾರಿ ಶಾಲೆಗಳಲ್ಲಿ 10 ನೇ ತರಗತಿಯವರೆಗೆ ಕನ್ನಡ ಕಡ್ಡಾಯ ಮಾಡಿದರೆ ಖಾಸಗೀ ಶಾಲೆಗಳು ಇಂಗ್ಲೀಷ್ ಅನ್ನ ಚನ್ನಾಗಿ ಕಲಿಸುತ್ತವೆ, ಆಗ ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದಿದ ನಮ್ಮ ಹುಡುಗರು ಕಾನ್ವೆಂಟ್ ಹುಡುಗರ ಮಧ್ಯೆ ಸ್ಪರ್ಧೆ ಮಾಡಲಾಗದೆ ಅವಕಾಶ ವಂಚಿತರಾಗುವುದಿಲ್ಲವೇ? ಹಾಗೆ ನಾವು ಯಾವುದೇ ವೃತ್ತಿ ತರಬೇತಿ ಅಥವಾ ಮೆಡಿಕಲ್, ಇನ್ನೇನೋ ಓದಲು ಹೋದಾಗ ಇಂಗ್ಲೀಷಿನಲ್ಲೇ ಓದಬೇಕು ಆಗ ನಮಗೆ ಆ ಭಾಷೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲ ಎಂತಾದರೆ ನಾವು ಎಷ್ಟರ ಮಟ್ಟಿಗೆ ಯಶಸ್ವಿಯಾಗಬಹುದು?

ಈಗ ಮೈಕ್ರೋ ಕಂಪ್ಯೂಟರ್ ಗಳು, ಟ್ಯಾಬ್ಲೇಟ್ ಪಿ ಸಿ ಗಳ ಕಾಲ, ಇಡೀ ಪ್ರಪಂಚ ಒಂದು ಚಿಕ್ಕ ಗ್ರಾಮದಂತೆ ಕ್ಷಣಾರ್ಧದಲ್ಲಿ ಕನೆಕ್ಟ್ ಆಗಿಬಿಡುತ್ತದೆ, ಆಗ ನಮಗೆ ಕೇವಲ ಕನ್ನಡ ಮಾತ್ರ ಗೊತ್ತಿದ್ದರೆ ಸಂಪರ್ಕ ಭಾಷೆಯಾದ ಇಂಗ್ಲೀಷ್ ಗೊತ್ತಿಲ್ಲ ಅಂದರೆ, ಹೇಗೆ ಹೊರಗಿನ ಪ್ರಪಂಚದೊಂದಿಗೆ ನಾವೂ ಕೂಡ ಸೇರಿಕೊಳ್ಳುವುದು? ಹಾಗೆಂದು ಪ್ರತಿಯೊಬ್ಬರೂ ಸ್ಪಷ್ಟವಾಗಿ ಇಂಗ್ಲೀಷ್ ನಲ್ಲೇ ಮಾತನಾಡಬೇಕು ಅಂತಲ್ಲ ಆದರೆ ನಮಗೆ ಕನ್ನಡದಂತೆಯೇ ಇಂಗ್ಲೀಷ್ ನ ಜ್ಞಾನವೂ ಇರಬೇಕು ಅಲ್ಲವೇ….? ಕೊನೆಯ ಪಕ್ಷ ನಮಗೆ ಬೇರೆ ಕ್ಷೇತ್ರಗಳಲ್ಲಿ ಹೋಗಿ  ಅಧ್ಯಯನ ಮಾಡಲು ಸಹಕಾರಿಯಾಗುವ ಮಟ್ಟಿಗೆ ತಿಳಿದಿದ್ದರೆ ಸಾಕು.

ಹಾಗೆಂದು ನನ್ನ ಅಭಿಪ್ರಾಯ ಸಂಪೂರ್ಣ ಇಂಗ್ಲೀಷ್ ಶಿಕ್ಷಣ ಕೊಡಬೇಕು ಅಂತಲ್ಲ, ಸಮಾನಾಂತರವಾಗಿ ಕನ್ನಡ ಹಾಗೂ ಇಂಗ್ಲೀಷ್ ನ ಶಿಕ್ಷಣ ನೆಡೆಯಲಿ ಅಷ್ಟೇ, ಕನ್ನಡ ಒಂದು ಸ್ಥಳೀಯ ಭಾಷೆಯಾಗಿ, ಜೊತೆಗೆ ಇಂಗ್ಲೀಷ್ ಒಂದು ಸಂಪರ್ಕ ಬಾಷೆಯಾಗಿ ಭೋದಿಸುವ ಕೆಲಸ ನೆಡೆಯಲಿ, ನಮ್ಮ ಕನ್ನಡ ಪ್ರೇಮವನ್ನ ನಮ್ಮ ಹೃದಯದಲ್ಲೇ ಇಟ್ಟುಕೊಂಡು ಕನ್ನಡ ಭಾಷೆಯನ್ನ ಎಲ್ಲೆಡೆ ಬಳಸೋಣ, ನಮ್ಮ ಸಾಹಿತ್ಯವನ್ನ ಪುರಸ್ಕರಿಸೋಣ ವ್ಯವಹಾರಿಕವಾಗಿ ಇಂಗ್ಲೀಷ್ ಬಳಕೆಯ ಅಗತ್ಯತೆ ಬಂದಾಗ ನಾವು ಯಾರಿಗೂ ಕಮ್ಮಿ ಇಲ್ಲ ಅನ್ನೋದನ್ನ ತೋರಿಸಿ ಕೊಡೋಣ. ಅದನ್ನ ಬಿಟ್ಟು ಕನ್ನಡದಲ್ಲಿ ಮಾತ್ರ ಶಿಕ್ಷಣ ಕೊಡಬೇಕು ಅನ್ನುವುದು ಸಮಂಜಸವಲ್ಲ ಅಲ್ಲವೇ? ಹಾಗೆ ನಾವು ಕನ್ನಡದಲ್ಲೇ ಓದಿರೋದು ಇಡೀ ಪ್ರಪಂಚ ನಮ್ಮೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು ಅಂದರೆ ಅದನ್ನ ಪ್ರಪಂಚ ಕೇಳುತ್ತದೆಯೇ? ಒಂದು ವಿಚಾರ ಸ್ಪಷ್ಟ ಸ್ನೇಹಿತರೇ ನಮಗೆ ಇಂತಹ ಒಂದು ಭಾಷೆಯಲ್ಲಿ ಮಾತ್ರ ವ್ಯವಹಾರ ಗೊತ್ತಿರೋದು ನಮಗೆ ಕೆಲಸ ಕೊಡಿ ಅಂತ ಎಲ್ಲಾದರೂ ಹೋಗಿ ಕೇಳಿದರೆ………ಏನು ಹೇಳಿಯಾರು ಯೋಚಿಸಿ ನೋಡಿ.. ನಾವಿಲ್ಲದಿದ್ದರೆ ನಮ್ಮನ್ನ ಮೀರಿಸುವ ಜನ ಇಲ್ಲಿ ಇದ್ದಾರೆ ಅವರು ಆ ಒಳ್ಳೆಯ ಅವಕಾಶವನ್ನ ನಮ್ಮಿಂದ ಕಸಿದುಕೊಂಡು ಬಿಡುತ್ತಾರೆ ಅದಕ್ಕೆ ನಾವು ಕನ್ನಡಿಗರು ಆಸ್ಪದ ಕೊಡಬೇಕೇ? ಇನ್ಯಾರೋ ಬೇರೆ ರಾಜ್ಯದಿಂದ ಬಂದು ಇಲ್ಲಿ ನಮಗೆ ಸಿಗಬೇಕಾದ ಅವಕಾಶಗಳನ್ನ ಕಿತ್ತು ಅವರು ಅದನ್ನ ಪಡೆಯುವುದನ್ನ ನೋಡಿದರೆ ನಮಗೆ ಬೇಸರವಾಗುವುದಿಲ್ಲವೇ? ನಾವು ಒಂದೇ ಬಾಷೆಗೆ ನಮ್ಮನ್ನ ಸೀಮಿತಗೊಳಿಸಿಕೊಂಡು ಬಿಟ್ಟರೆ ಅನ್ಯ ಬಾಷಿಗರು ಬೆಂಗಳೂರಿನಂತಹ ನಗರಗಳಲ್ಲಿ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನ ಕಾಣಬೇಕಾಗುತ್ತದೆ ಏನಂತೀರಿ?

ಸ್ನೇಹಿತರೇ ಇದು ವ್ಯವಹಾರದ ಯುಗ, ಭಾರತದಂಥ ದೇಶಗಳು ತಮ್ಮ ವ್ಯವಹಾರಕ್ಕಾಗಿ ಅವಲಂಬಿಸಿರುವುದು ಇತರ ರಾಷ್ಟ್ರಗಳನ್ನ, ಹಾಗೆ ಬಹುಪಾಲು ರಾಷ್ಟ್ರಗಳು ಇಂಗ್ಲೀಷ್ ಅನ್ನ ಸಂಪರ್ಕಬಾಷೆಯನ್ನಾಗಿ ಮಾಡಿಕೊಂಡಿವೆ, ಅವರೆಲ್ಲ ನಮಗೆ ಏನಾದರೂ ವಹಿವಾಟು ನೀಡಬೇಕಾದರೆ ಅವರೊಂದಿಗೆ ನಾವು ಚೆನ್ನಾಗಿ ಚರ್ಚೆಮಾಡಿ, ಅವರನ್ನ ಒಪ್ಪಿಸಿ ವ್ಯಾಪಾರ ಕುದುರಿಸಬೇಕು….ಹಾಗಾಗಿ ಇಂಗ್ಲೀಷ್ ಅತ್ಯಂತ ಮುಖ್ಯ,ಅದನ್ನ ಮನಗಂಡು ನಮ್ಮ ವ್ಯವಹಾರಕ್ಕೆ ಎಷ್ಟುಬೇಕೋ ಅಷ್ಟು ಪ್ರೌಡಿಮೆಯನ್ನ ನಾವು ಪಡೆದು ಕೊಳ್ಳಲು ನಮ್ಮ ಶಿಕ್ಷಣ ನೆರವಾಗಬೇಕು ನಮಗೆ.

ಈ ವಿಚಾರದಲ್ಲಿ ಕನ್ನಡ ಸಾಹಿತ್ಯ ಚಿಂತಕರಿಗೂ, ಕನ್ನಡ ಪ್ರೇಮಿಗಳಿಗೂ ನನ್ನ ಸಂಪೂರ್ಣ ಬೆಂಬಲ ಇದ್ದೇ ಇದೆ, ನಮ್ಮ ನಾಡು ನುಡಿ, ಜಲ ನೆಲದ ಇತಿಹಾಸ, ಸಂಸ್ಕೃತಿಯನ್ನ ಖಂಡಿತಾ ನಾವು ಮುಂದಿನ ಪೀಳಿಗೆಗೆ ನೀಡಲೆ ಬೇಕು, ಅದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಕೂಡ ಆದರೆ ನಾವೂ ಪ್ರೀತಿಸುವ ಭಾಷೆಯಾಗಿ ನಮ್ಮ ಮನದಲ್ಲಿ ಕನ್ನಡ ಸದಾ ಇರಲಿ ಅದನ್ನ ಒಗ್ಗಟ್ಟು, ಹೊಂದಾಣಿಕೆ, ಪ್ರೀತಿ ವಿಶ್ವಾಸದ ಮೂಲಕ ಎಲ್ಲರೊಂದಿಗೆ ಹಂಚಿಕೊಳ್ಳೋಣ ಆದರೆ ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಅದು ಹೇಗೋ ಒಗ್ಗಿಕೊಂಡು ಬಿಟ್ಟಿದೆ ಹಾಗಾಗಿ ಅದು ನಮಗೆ ಗೊತ್ತಿಲ್ಲ ಅಂತ ಯಾಕೆ ಆಗಬೇಕು……ಬೇರೆಯವರೊಂದಿಗೆ ತಲೆ ಎತ್ತಿ ಹೆಮ್ಮೆ ಇಂದ ಹೇಳೋಣ ನಾವೂ ಆಧುನಿಕ ಪ್ರಪಂಚವನ್ನ ಎದುರಿಸುವಲ್ಲಿ ಸರ್ವ ಸಮರ್ಥರು ಅನ್ನುವುದನ್ನ,

ಕೊನೆಯದಾಗಿ: ಕನ್ನಡ ಮಾಧ್ಯಮವಾಗಿರಲಿ, ಅಥವಾ ಇಂಗ್ಲೀಷ್ ಮಾಧ್ಯಮವೇ ಆಗಿರಲಿ, ಆದರೆ ನಿಮ್ಮ ಮಾತೃಭಾಷೆಗೆ ಹೆಚ್ಚಿನ ಗೌರವವನ್ನ ನೀಡಿ, ಜೊತೆಗೆ ಸಾಹಿತ್ಯ , ಸಂಸ್ಕೃತಿಯನ್ನ ಉಳಿಸಿ ಬೆಳಸುವ ಕಾರ್ಯದಲ್ಲಿ ಕೈ ಜೋಡಿಸಿ ಹಾಗೆ ಇಂಗ್ಲೀಷ್ ಅನ್ನೋ ಭಾಷೆಯ ಸಮಸ್ಯೆ ಬಂದಾಗ ಅದನ್ನ ದಿಟ್ಟವಾಗಿ ಎದುರಿಸಿ ಯಶಸ್ವಿಯಾಗುವ ತೆರದಲ್ಲಿ ಕಲಿತು ಬಾಳುವಂತಾಗಲಿ, ಆಗ ಈ ಭಾಷಾ ತರತಮ್ಯದ ಸಮಸ್ಯೆ ಯೇ ಇರುವುದಿಲ್ಲ. ಎನಂತೀರಿ? ಮತ್ತೊಮ್ಮೆ ಸಿಗುತ್ತೇನೆ.

Advertisements

ಜಯ ಹೇ!!

ಆಗಷ್ಟ್ 14, 2011

ಬಿಡುವಿಲ್ಲದ ಕೆಲಸದಿಂದಾಗಿ ನಾನು ಬರಿಯೋದನ್ನ ಬಿಟ್ಟು ಬಿಡ್ತಿನೇನೋ ಅನ್ನೋಭಯ ಒಂದು ಕಡೆ,ಹಾಗೆ ನಿಮ್ಮನೆಲ್ಲ ಮಾತಾಡಿಸಿ ಸುಮಾರು ದಿನಗಳು ಆಯ್ತಲ್ಲ ಅನ್ನುವ ಬೇಸರ ಇನ್ನೊಂದು ಕಡೆ… ಈ ವಾರಂತ್ಯ ಸುಧೀರ್ಘ  ಅಂದರೆ ಲಾಂಗ್ ವೀಕೆಂಡು, ಅದು ಸ್ವತಂತ್ರ ದಿನಾಚರಣೆಯ ಕಾರಣಕ್ಕೆ, ಅದರ ಬಗ್ಗೆಯೇ ಯಾಕೆ ಮಾತಾಡಬಾರದು? ಅಲ್ವಾ?

 ಸ್ವಾತಂತ್ರ್ಯ ಬಂದು ಇಂದಿಗೆ ಸುಮಾರು ೬೫ ವರ್ಷಗಳು ಕಳೆದು ಹೋಗಿವೆ, ೧೮೫೭ ರ ಮೊದಲ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಆರಂಭವಾಗಿದ್ದು ನಮ್ಮ ದೇಶವನ್ನ ಬ್ರಿಟೀಷರ ದಾಸ್ಯದಿಂದ ಬಿಡಿಸುವ ಹೊರಾಟ. ನಿರಂತರ ೨೦೦ ವರ್ಷಗಳು ಅವರು ಆಳಿದರು,ದೋಚಿದರು,ಕಬ್ಬಿನ ಜಲ್ಲೆಯಂತೆ ಹಿಂಡಿದರು,ಎಷ್ಟೋ ನಮ್ಮ ಮುಗ್ಧ ಜನರು ತಮ್ಮ ಪ್ರಾಣ ತ್ಯಾಗ ಮಾಡಿದರು, ಸುಭಾಶ್ ಚಂದ್ರ ಬೋಸ್ , ಭಗತ್ ಸಿಂಗ್, ಸೂರ್ಜೋ ಸೇನ, ಮುಂತಾದ ಸಾವಿರಾರು ಕ್ರಾಂತಿಕಾರಿಗಳ ನರಬಲಿ ನೆಡೆದು ಹೊಯಿತು  ಕೊನೆಗೆ ಗಾಂಧಿ ಅನ್ನುವ ತಾತ ಮಾಧ್ಯಮವಾಗಬೇಕಾಯಿತು  ಭಾರತ ಮತ್ತು ಪಾಕಿಸ್ತಾನಗಳನ್ನ ಬೇರೆ ಬೇರೆ ಮಾಡಿ ಸಧಾ ಕಚ್ಚಾಡುವ ತೆರದಲ್ಲಿ ಮಾಡಿ, ಮುಂದೆ ಅದನ್ನೇ ಮುಖ್ಯ ವಿಚಾರವನ್ನಾಗಿರಿಸಿಕೊಂಡು  ದೇಶದ ಒಳಗಡೆಯೂ ಎರಡು ಕೋಮುಗಳ ನಡುವೆ ಬಿರುಕು ಉಂಟುಮಾಡಿ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಅಂತರಿಕ ವಾಗಿ ರಾಜಕಾರಣಿಗಳು ಮನಸೋ ಇಚ್ಛೆ  ದೋಚುವ ಲೈಸೆನ್ಸ್ ಕೊಡಿಸಲು!! ಅಲ್ಲವೇ?

 ೧೯೬೫ ರಲ್ಲಿ ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಂದರ್ಭದಲ್ಲಿ ಕೊಡುವುದೆಲ್ಲವನ್ನು ಕೊಟ್ಟು ಕಳಿಸಿದ್ದರೂ ಕಾಲು ಕೆರೆದುಕೊಂಡು ಬಂದರು ಯುದ್ದ ಮಾಡಲು,ಆವಾಗ ನಮ್ಮ ದೇಶದ ಸೈನ್ಯವನ್ನು ಎಷ್ಟು ಭದ್ರವಾಗಿ ಕಟ್ಟಿದ್ದೆವೆಂದರೆ ನಮ್ಮ ಮುಂದೆ ತರಗೆಲೆಗಳಂತೆ ಉದುರಿ ಹೊಯಿತು ಪಾಕಿಸ್ತಾನ. ಸ್ವತಹ ಆಗಿನ ಪ್ರದನಿಗಳಾಗಿದ್ದ ಲಾಲ್ ಭಾಹದ್ದೂರ್ ಶಾಸ್ತ್ರಿಗಳು ಮುಂದಾಳತ್ವ ವಹಿಸಿ “೨ನೆ ಕಾಶ್ಮೀರ ಕಧನ”ವನ್ನ ಎದುರಿಸಿದರು, ಅವರೊಂದಿಗೆ ಲೆಫ್ಟಿನೆಂಟ್  ಜನರಲ್ ಚೌದರಿ, ಲೆಫ್ಟಿನೆಂಟ್ ಜನರಲ್ ಹರ್ಭಕ್ಶ್ ಸಿಂಗ್ , ಏರ್ ಚೀಫ್ ಮಾರ್ಷಲ್ ಅರ್ಜುನ್ ಹಾಗು ಮುಂತಾದವರು ಜೊತೆಯಾದರು. ಕೊನೆಗೆ ಆ ಯುದ್ಧವೂ “ತಾಷ್ಕೆಂಟ್ ಒಪ್ಪಂದ”ವನ್ನ ಸಂಯುಕ್ತ ರಾಷ್ಟ್ರ ಸಂಘಟನೆಯ ಮಧ್ಯಸ್ತಿಕೆಯಲ್ಲಿ ಪರಸ್ಪರ ಭಾರತ ಹಾಗು ಪಾಕಿಸ್ತಾನಗಳು ಸಹಿ ಹಾಕಿಸುವಲ್ಲಿ  ಮುಕ್ತಾಯಗೊಂಡಿತು.

 ೧೯೭೧ ರಲ್ಲಿ ಮತ್ತೊಮ್ಮೆ ಪ್ರಹಾರ, ಆಗಿನ ಸಂದರ್ಭದಲ್ಲಿ ಇಂದಿರಾ ಗಾಂಧಿಯವರು ದೇಶದ ಪ್ರದಾನಿಯಗಿದ್ದರು. ಡಿಸೆಂಬರ್ ೩ ೧೯೭೧ ರಂದು ಪ್ರಾರಂಭಗೊಂಡ ಯುದ್ದವು ಕೇವಲ ೧೩ ದಿನಗಳಲ್ಲಿ ಮುಗಿದು ಹೊಯಿತು,ಹಾಗು ವಿಶ್ವ ಕಂಡ ಅತ್ಯಂತ ಕಡಿಮೆ ಸಮಯದ ಯುದ್ದ ಇದಾಗಿತ್ತು, ಆದರೆ ಆಗಿನ ಲೆಫ್ಟಿನೆಂಟ್ ಜನರಲ್ ಗಳಾದ ಜೆ. ಎಸ್ ಅರೋರ, ಜಿ. ಬೀವರ್, ಸಗಥ್ ಸಿಂಗ್, ಅಡ್ಮಿರಲ್ ನಂದ, ಹಾಗು ಏರ್ ಚೀಫ್ ಮಾರ್ಷಲ್  ಪ್ರತಾಪ್ ಲಾಲ್ ಅವರ ಹೋರಾಟ ಹೇಗಿತ್ತೆಂದರೆ ಹದಿಮೂರು ದಿನಗಳಲ್ಲಿ  ಪಾಕಿಸ್ತಾನ ತನ್ನ ಶಸ್ತ್ರಾಸ್ತ್ರ ಗಳನ್ನ ತ್ಯಜಿಸಿ ಬೇಷರತ್ ಶರಣಾಯಿತು,ನಂತರ ಪೂರ್ವ ಪಾಕಿಸ್ತಾನ ಬಾಂಗ್ಲಾದೆಶವೆನ್ನುವ ಸ್ವಾತಂತ್ರ್ಯ ರಾಷ್ಟ್ರವಾಯಿತು.

 ೧೯೯೯ ರಲ್ಲಿ ನಡೆದ ಕಾರ್ಗಿಲ್ ಯುದ್ದವಂತೂ ನಿಮಗೆಲ್ಲ ಗೊತ್ತೇ ಇದೆ, ಆಗಿನ ಪ್ರಧಾನಿಗಳಗಿದ್ದವರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರು. ಸುಮಾರು ೨ ತಿಂಗಳು ನಡೆದ  ಕದನದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಕಾರ್ಗಿಲ್ ಭಾಗವನ್ನ ಮತ್ತೆಂದು ಅವರಿಗೆ ಬಿಟ್ಟು ಕೊಡದಂತೆ ವಾಪಸ್ ಪಡೆದೆವು. ಆಗ ದೇಶಕ್ಕಾಗಿ ಪ್ರಾಣ ತೆತ್ತ ಸುಮಾರು ಸೈನಿಕರಿಗೆ ಪರಮವೀರ ಚಕ್ರ ಪ್ರಶಸ್ತಿಗಳನ್ನ ಕೊಡಮಾದಲಾಯಿತು, ಅವರಲ್ಲಿ ಯೋಗಿಂದ್ರ ಸಿಂಗ್ ಯಾದವ್, ಮನೋಜ್ ಕುಮಾರ್ ಪಾಂಡೆ, ವಿಕ್ರಂ ಭಾತ್ರ, ಅನುಜ್ ನಾಯರ್, ಸರವಣನ್, ಅಜಯ್ ಅಹುಜಾ, ಸಂಜಯ್ ಕುಮಾರ್, ಹಾಗು ರಾಜೇಶ್ ಸಿಂಗ್ ಅಧಿಕಾರಿ ಮುಂತಾದವರು ಮುಖ್ಯವಾದವರು.

 ಓದಿದಿರಲ್ಲ ಇದನ್ನೆಲ್ಲಾ? ಇದನ್ನೆಲ್ಲ ನಮಗೆ ಗೊತ್ತಿಲ್ಲ ಅನ್ನುವ ಕಾರಣಕ್ಕೆ ಹೇಳುತ್ತಿಲ್ಲ, ನಾವು ಮರೆತಿದ್ದೇವೆ ಅನ್ನುವುದನ್ನ ನೆನಪಿಸುತ್ತಿದ್ದೇನೆ ಅಷ್ಟೇ. ನಮಗೆ ಬಂದಿರುವ ಸ್ವಾತಂತ್ರ್ಯ ಎಂತಹದು ? ಸದಾ ಒಂದು ಭಾಗದಿಂದ ಒಳನುಸುಳಿ ಕಂಡ ಕಂಡಲ್ಲಿ ಬಾಂಬುಗಳನ್ನ ಇಟ್ಟು ಅಮಾಯಕರನ್ನ ಸಾಯಿಸುವ  ಪಕ್ಕದ ದೇಶ ಒಂದು ಸೃಷ್ಟಿಯಾಯಿತು, ಪದೇ ಪದೇ ಕಾಶ್ಮೀರದಲ್ಲಿ ದಲ್ಲಿ ಗಲಾಟೆ ಮಾಡುವುದು, ಮತ್ತೊಂದು ಕಡೆ ಇಂದ ಬಾಂಗ್ಲಾದೇಶ ಅನ್ನುವ ಚಿಕ್ಕ ರಾಷ್ಟ್ರದವರು ನಮ್ಮ ದೇಶಕ್ಕೆ ಅಕ್ರಮ ವಾಗಿ ಒಳನುಸುಳುವುದು, ಭಯೋತ್ಪಾದನೆಯನ್ನ ಪ್ರತ್ಯಕ್ಷವಾಗಿ ಬೆಂಬಲಿಸುವ ಪಾಕಿಸ್ತಾನವೆಂಬ ನರಕ ನಮಗೆ ಸಿಕ್ಕಿತು ಅಲ್ಲವೇ? ಹಾಗೆಂದು ಸ್ವಾತಂತ್ರ್ಯ ಸಂದರ್ಭದಲ್ಲಿ ವಿಭಜನೆ ಮಾಡಬಾರದಿತ್ತು  ಅನ್ನುವ ಅಭಿಪ್ರಾಯವಲ್ಲ  ಆದರೆ ವಿಭಜನೆಯಾದಮೇಲೆ ಸುಮ್ಮನಿದ್ದುಕೊಂಡು ದೇಶದ ಆಂತರಿಕ ಅಭಿವೃದ್ದಿಯನ್ನ ಗಮನಿಸಬೇಕು ಹೊರತು,ಮತ್ತೆ ಮತ್ತೆ ಕಾಲು ಕೆರೆದುಕೊಂಡು ಬರುವುದು ಯಾವ ಮಾಹ ಘನ ಕಾರ್ಯ ಸಾದಿಸಲು? ಅನ್ನುವುದು.

 ನಮ್ಮನ್ನು ಪ್ರತಿಕ್ಷಣವೂ ಹಿಂಸಿಸುತ್ತಿರುವ ಪಾಕಿಸ್ತಾನ,ಬಾಂಗ್ಲಾದೇಶ,ಚೀನಾಗಳು ಒಂದುಕಡೆಯಾದರೆ ಇನ್ನೊಂದು ಆಂತರಿಕವಾಗಿ ಸಾಮಾನ್ಯ ಜನರನ್ನು ಕಿತ್ತು ತಿನ್ನುತ್ತಿರುವ ಹೊಲಸು ರಾಜಕಾರಣಿಗಳು!! ಎಂತಹ ನಾಯಕರುಗಳು!!! ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಹಗರಣಗಳನ್ನು  ನಡೆಸುತ್ತಿದ್ದಾರೆ, ಜನ ಸೇವೆಯ ಹೆಸರಲ್ಲಿ  ತಮ್ಮ  ೧೦ ತಲೆಮಾರುಗಳು ಕೂತು ತಿನ್ನುವಷ್ಟು ದುಡ್ಡು ದೋಚುತ್ತಿದ್ದಾರೆ, ತಮ್ಮ ಸ್ವಂತ ಆಸ್ತಿಯಂತೆ ಮಣ್ಣು ಅಗೆದು ಅಕ್ರಮ ಗಣಿಗಾರಿಕೆಯನ್ನ ರಾಜಾರೋಷವಾಗಿ ನೆಸುತ್ತಿದ್ದಾರೆ ಇನ್ನು ಕೆಲವರಂತೂ ಮುಗ್ಧ ರೈತರ ಭೂಮಿಯನ್ನ ಕಸಿದುಕೊಳ್ಳುತ್ತಿದ್ದಾರೆ, ಕೇಳಲು ಹೋದರೆ ಅನ್ನದಾತನ ತಲೆಗೆ ಗುಂಡಿಟ್ಟು ಗೋಲಿಬಾರ್ ಮಾಡುತ್ತಿದ್ದಾರೆ!! ಆದರೆ ಮಾಧ್ಯಮದ ಮುಂದೆ ಸತ್ಯ ಹರಿಶ್ಚಂದ್ರ ರಂತೆ ಪೋಸು ಕೊಡುವುದನ್ನ  ಅಭ್ಯಾಸ ಮಾಡಿಕೊಂಡಿದ್ದಾರೆ.

 ಧರ್ಮದ ಹೆಸರಲ್ಲಿ ಇನ್ನು ಕೆಲವರದ್ದು ಮೋಸ ಹಾಗು ಹಗಲು ದರೋಡೆ, ಕೋಟ್ಯಾಂತರ ರೂಪಾಯಿಗಳನ್ನ ನೆಲಮಾಳಿಗೆಯಲ್ಲಿ ಬಚ್ಚಿಡುತ್ತಿದ್ದಾರೆ, ಸಂತನೆಂದು ಹೇಳಿಕೊಂಡು ವ್ಯಭಿಚಾರವನ್ನ ನಡೆಸುವ ಕಳ್ಳ ಸ್ವಾಮಿಜಿಗಳು ನಮ್ಮ ದೇಶದಲ್ಲಿ ಮೆರೆಯುತ್ತಿದ್ದಾರೆ, ಧರ್ಮದ ಹೆಸರಿನಲ್ಲಿ ಜರನರನ್ನ ಮೋಸಗೊಳಿಸಿ ಮಂಕು ಬೂದಿ ಎರಚಿ ಹಗಲಿನಲ್ಲೇ ರಾಜಾರೋಷವಾಗಿ ಜನರ ಸಮಯ ಹಾಗು ಹಣವನ್ನ ದೋಚುತ್ತಿದ್ದಾರೆ, ಇನ್ನು ಕೆಲವು ಸ್ವಾಮಿಗಳು ಕೆಲವು ಹೊಲಸು ರಾಜಕಾರಣಿಗಳನ್ನ ನೇರವಾಗಿ ಹಳಿಯುವ, ಅಥವಾ ಬೆಂಬಲಿಸುವುದನ್ನ ನೋಡಿದರೆ ಅವರು ಧರ್ಮ ಪ್ರಚರಕರಲ್ಲ ಕೇವಲ ಅಪ ಪ್ರಚಾರಕರು ಅನ್ನುವುದು ಸ್ಪಷ್ಟವಾಗುತ್ತೆ ಅಲ್ಲವೇ?

 ಪೊಲೀಸರದು ಇನ್ನು ವಿಚಿತ್ರ ಹಿಂಸೆ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಸರಿಯಾಗಿ ನಿಮ್ಮ ವಾಹನಗಳನ್ನ ಸರಿಯಾಗಿ ಓಡಿಸಿದ್ದರೂ, ಸಂಚಾರಿ ನಿಯಮಗಳನ್ನ ಪಾಲಿಸಿದ್ದರೂ, ಸಾಮಾನ್ಯರನ್ನ ಹಿಡಿದು ಫೈನ್ ಹೆಸರಿನಲ್ಲಿ ದೋಚುತ್ತಿದ್ದಾರೆ, ಪೊಲೀಸ್ ಎನ್ನುವ ಟೋಪಿ ದರಿಸಿಕೊಂಡು ರೋಲ್ಕಾಲ್ ಮಾಡುವ ಅಧಿಕಾರಿಗಳು, ಅವರನ್ನು ಬೆಂಬಲಿಸುವ ರಾಜಕೀಯದ ಕಾಣದ ಕೈಗಳು.

 ಬ್ರಷ್ಟಾಚಾರದ ವಿರುದ್ಧ ಯಾರಾದರು ಪ್ರತಿಭಟನೆ ಮಾಡಿದರೆ, ಅವರ ಮೇಲೆ ಲಾಟಿ ಚಾರ್ಜ್ ಮಾಡುವುದು,ಅರೆಸ್ಟ್ ಮಾಡುವುದು, “ಜನರಿಗೆ ಉಪಯೋಗಕ್ಕೆ ಬರುವ ಬ್ರಷ್ಟಾಚಾರ ವಿರೋಧಿ ಕಾನೂನನ್ನ ಜಾರಿಗೆ ತನ್ನಿ” ಎಂದರೆ , ರಾಜಕೀಯದವರಿಗೆ ಬೇಕಾಗುವ, ಅವರಿಗೆ ಮತ್ತಷ್ಟು ದೋಚಲು ಅನುಕೂಲವಾಗುವ೦ತೆ ಅದನ್ನ ತಿರುಚಿ ಅದನ್ನೇ ಸಂಸತ್ತಿನಲ್ಲಿ ಮಂಡಿಸುವುದನ್ನ ನೋಡಿದರೆ ರಕ್ತ ಕುದಿಯುವುದಿಲ್ಲವೇ?

 ಅದಕ್ಕೆ ಕೇಳಿದ್ದು ಸ್ನೇಹಿತರೆ ಎಲ್ಲಿಯ ಸ್ವಾತಂತ್ರ್ಯ? ಯಾವ ಸ್ವಾತಂತ್ರ್ಯ ನಮಗೆ ಬಂದಿರುವುದು? ಹೋಗಲಿ ಒಂದು ತಮಾಷೆ ಗೊತ್ತಾ? ನಮ್ಮ ಸ್ವಾತಂತ್ರ್ಯ ದಿನಾಚರಣೆ ಯನ್ನೇ ನಾವು ನೆಮ್ಮದಿಯಾಗಿ ಆಚರಿಸಲು ಆಗುತ್ತಿಲ್ಲ!! ಪಕ್ಕದ ಪಾಕಿಗಳು ಯಾವಾಗ ಬಾಂಬ್ ಹಾಕುತ್ತಾರೋ ? ಯಾವಾಗ ನಾವು ಸಾಯಬೇಕೋ ಅನ್ನುವ ಭಯದಲ್ಲೇ ಇಡೀ ದೇಶ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ, ಎಷ್ಟು ನಾಚಿಕೆಗೇಡಿನ ಸಂಗತಿಯಲ್ಲವೇ? ಇನ್ನೆ೦ದೂ ನಮಗೆ ತೊಂದರೆ ಕೊಡದ ರೀತಿಯಲ್ಲಿ ಪಾಕಿಗಳನ್ನ ಸಧೆಬಡಿಯುವ ಸರ್ಕಾರ ಯಾಕೆ ಬರುತ್ತಿಲ್ಲ? ಅಥವಾ ನಮ್ಮ ರಾಜಕಾರಣಿಗಳಿಗೆ  ಅದನ್ನ ಮಾಡುವ ಮನಸಿಲ್ಲ ಏಕೆ?

ಒ೦ದೇ ಪರಿಹಾರ ಅದು ಮೊದಲು ನಮ್ಮ  ನಮ್ಮಲ್ಲೇ ಇದ್ದು ನಮ್ಮಲ್ಲೇ ಒಡಕನ್ನ ಉಂಟುಮಾಡಿ ರಾಜಕೀಯದ ಬೆಳೆಬೇಯಿಸಿಕೊಳ್ಳುತ್ತಿರುವ ರಾಜಕೀಯದ ಹೊಲಸು ನಾಯಕರುಗಳಿಗೆ ಬುದ್ದಿ ಕಲಿಸುವುದು, ಬ್ರಷ್ಟಾಚಾರವನ್ನ ಸಾಯಿಸಲು ಸೋಮರಿತನವನ್ನ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ದುಡಿಯುವುದು.. ಅಲ್ಲವೇ? ಇಲ್ಲದಿದ್ದಲ್ಲಿ ಇನ್ನೊಂದು ದಿನ ನಮ್ಮ ದೇಶದಲ್ಲಿ ನಾವೇ ಅಲ್ಪ ಸಂಖ್ಯಾತರಾಗಿ, ಪಾಕಿಸ್ತಾನದ ದಾಸರಾಗಿ ಹೋಗಬೇಕಾಗುತ್ತದೆ ಅಷ್ಟೇ ಅಲ್ಲ ನಮ್ಮ ಸೋಮಾರಿತನಕ್ಕೆ ನಮ್ಮ ಮೊಮ್ಮಕ್ಕಳು ನರಕಯಾತನೆಯನ್ನ ಅನುಭವಿಸಬೇಕಾಗುತ್ತದೆ ಅಲ್ಲವೇ?

 ಎಲ್ಲಾ ಅಂತರಿಕ ಕೆಸರೆರಚಾಟಗಳ ನಡುವೆಯೂ ದೇಶಕ್ಕಾಗಿ,ನಮ್ಮ ಉಜ್ವಲ ನಾಳೆಗಳಿಗಾಗಿ ಪ್ರಾಣ ತೆತ್ತು ವೀರ ಸ್ವರ್ಗವನ್ನ ಏರಿರುವ ಎಲ್ಲ ನಮ್ಮ  ಸೈನಿಕ ಭಾಂದವರಿಗೆ ಭಾವ ಪೂರ್ಣ ಅಶ್ರುತರ್ಪಣವನ್ನ ಸಲ್ಲಿಸೋಣ.. ಹಾಗೆ ಬನ್ನಿ…. ಸ್ವಾತಂತ್ರ್ಯ ದಿನಾಚರಣೆಯ ಈ ಸಂಧರ್ಬದಲ್ಲಿ ಅಣ್ಣ ಹಜಾರೆಯವರ ಬ್ರಷ್ಟಾಚಾರಿ ವಿರೋಧಿ ಕಾಯ್ದೆ  “ಲೋಕ ಪಾಲ್  ಬಿಲ್” ಅನ್ನು ಸಂಪೂರ್ಣವಾಗಿ ಬೆಂಬಲಿಸೋಣ, ಸಾಧ್ಯವಾದಷ್ಟು  ಬ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡೋಣ, ದೇಶವನ್ನ ಅಭಿವೃದ್ಧಿಯ ದಿಸೆಯಲ್ಲಿ ಮುನ್ನೆಡೆಸುವ ನಾಯಕರನ್ನ ಆರಿಸುವ ಜವಾಬ್ದಾರಿಯನ್ನ ಅರಿಯೋಣ ಹಾಗು ಅರಿವನ್ನ ಮೂಡಿಸುವ ಪ್ರಯತ್ನ ಮಾಡೋಣ ಅಲ್ಲವೇ? ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಷಯಗಳು …ಮತ್ತೊಮ್ಮೆ  ಬರ್ತೀನಿ……….

ರಾಮ್ ದೇವ್ ಅವರನ್ನ ಆಡಿಕೊಳ್ಳುವ ಮೊದಲು…….

ಜುಲೈ 8, 2011

ನಮಸ್ಕಾರ ನನ್ನೆಲ್ಲ ಸಹೃದಯೀ ಸ್ನೇಹಿತರಿಗೆ, ಬಾಬಾ ರಾಮ್ ದೇವ್ ಅವರ ಬಗ್ಗೆ ನಮಗೆ ಎಷ್ಟು ಗೊತ್ತು ಯಾರು ಅವರು? ಅವರ ವಾದ, ತತ್ವ ಸಿದ್ದಾಂತ, ಬೇಡಿಕೆಗಳು ಸರಿಯೇ ತಪ್ಪೇ? ನೋಡೋಣ ಬನ್ನಿ.

ಬಾಬಾ ರಾಮ್ ದೇವ್  ಗುಲಾಬೊ ದೇವಿ ಹಾಗೂ ರಾಮ್ ನಿವಾಸ್ ಯಾದವ್ ಅವರ ಸುಪುತ್ರ, ಹುಟ್ಟಿದ್ದು ಅಲಿ ಸಾಯದ್ ಪುರ್ (ಅಲಿಗರ್) ಅನ್ನುವ ಹರಿಯಾಣ ರಾಜ್ಯದ  ಮೂಲೆ. ಬಾಲ್ಯದಿಂದಲೇ  ರಾಮ್ ಪ್ರಸಾದ್ “ಬಿಸ್ಮಿಲ್” , ನೇತಾಜಿ ಸುಭಾಶ್ಚಂದ್ರ ಭೋಸ್ ರಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಿತರು ಬಾಬಾ ರಾಮ್ ದೇವ್. ತನ್ನ 8 ನೇ ತರಗತಿಯ ವಿಧ್ಯಾಬ್ಯಾಸದ ನಂತರ ಖಾನ್ಪುರ ದ ಆರ್ಯ ಗುರುಕುಲ ಒಂದಕ್ಕೆ ಸೇರಿ ಸಂಸ್ಕೃತ ಹಾಗೂ ಯೋಗ ಪದ್ದತಿಗಳನ್ನು ಆಚಾರ್ಯ ಪ್ರದ್ಯುಮ್ನ ಅವರಲ್ಲಿ ಅಭ್ಯಾಸ ಮಾಡಿದರು.

ರಾಮ್ ದೇವ್ ಅವರ ಮೊದಲ ಹೆಸರು  ರಾಮ ಕೃಷ್ಣ ಯಾದವ್, ಆದರೆ ಅವರು ಆಚಾರ್ಯ ಬಲದೇವರಿಂದ ಸನ್ಯಾಸ ದೀಕ್ಷೆ ಪಡೆದ ನಂತರ ಬಾಬಾ ರಾಮ್ ದೇವ್ ಎಂಬ ಹೆಸರಿನಿಂದ ಕರೆಯಲ್ಪಟ್ಟರು. ಕಲ್ವ ಗುರುಕುಲದಲ್ಲಿ (ಜಿಂದ್ ಜಿಲ್ಲೆ ಹರಿಯಾಣ ರಾಜ್ಯದಲ್ಲಿದೆ) ಹಳ್ಳಿಯ ಜನರಿಗೆ ಯೋಗ ಗುರುವಾಗಿಯೂ ಸೇವೆ ನಿರ್ವಹಿಸಿದರು,

2003 ರರಲ್ಲಿ  ಆಚಾರ್ಯ ಬಾಲ ಕೃಷ್ಣ ರೊಂದಿಗೆ ಸೇರಿ “ ದಿವ್ಯ ಯೋಗ ಮಂದಿರ ಟ್ರಸ್ಟ್ “ ಅನ್ನು ಹುಟ್ಟು ಹಾಕಿದರು ನಂತರ “ ಆಸ್ಥಾ” ಅನ್ನುವ ಧಾರ್ಮಿಕ ಟಿ‌ವಿ ವಾಹಿನಿಯಲ್ಲಿ ಬೆಳಗ್ಗಿನ ಯೋಗ ಕಾರ್ಯಕ್ರಮದಲ್ಲಿ ಯೋಗ ಗುರುವಾಗಿ ಕಾಣಿಸಿಕೊಂಡರು, ಅವರಿಗೆ ಆ ಮೂಲಕ ಸಿಕ್ಕ ಭಾರಿ ಜನಮನ್ನಣೆ ಇಂದಾಗಿ ದೇಶ ವಿದೇಶದ ಜನ ರಾಮ್ ದೇವ್ ರ ಯೋಗ ಕಾರ್ಯಕ್ರಮಗಳನ್ನ ನೋಡುವುದರೊಂದಿಗೆ ಭಾಗವಹಿಸುವ ಅವಕಾಶ ಸಿಕ್ಕಂತೆ ಆಯಿತು. ಅಮೆರಿಕಾದ ಪ್ರಖ್ಯಾತ ನಿಯತಕಾಲಿಕೆ “ ಟೈಮ್ಸ್ ಆಫ್ ನ್ಯೂ ಯಾರ್ಕ್” ಬಾಬಾರ ಯೋಗ ಸಾಧನೆಗೆ   “ಭಾರತೀಯನಮೋಬ್ಬನ  ಯೋಗ ಸಾಮ್ರಾಜ್ಯ” ವೆಂದು ಹೊಗಳಿದೆ.

ಬಾಬಾ ರಾಮ್ ದೇವ್ “ಪಾತಂಜಲಿ ಯೋಗ ಕೇಂದ್ರ” ವನ್ನು ಸ್ಥಾಪಿಸಿದ್ದಲ್ಲದೆ ಅಲ್ಲಿ ಬಡ ರೋಗಿಗಳಿಗೆ ಆಯುರ್ವೇದ ಹಾಗೂ ಯೋಗ ಪದ್ದತಿಯ ಮೂಲಕ ಚಿಕಿತ್ಸೆ ಕೊಡುವ ಕಾರ್ಯವನ್ನೂ ಈಗಲೂ ಮಾಡುತ್ತಿದ್ದಾರೆ, ಹಾಗೆಯೇ ಪಾತಂಜಲಿ ಯೋಗ ಕೇಂದ್ರ ಸೇರಿದಂತೆ , ಪಾತಂಜಲಿ ಆಯುರ್ವೇದ ಕಾಲೇಜು, ಪಾತಂಜಲಿ ಚಿಕಿತ್ಸಾಲಯ, ಯೋಗ ಗ್ರಾಮ, ಗೋಶಾಲೆ, ಪಾತಂಜಲಿ ಆಹಾರ ಮತ್ತು ಹರ್ಬಲ್ ಉದ್ಯಾನವನಗಳು, “ದಿವ್ಯ ಯೋಗ ಮಂದಿರ ಟ್ರಸ್ಟ್ “ ನವತಿಯಿಂದ ನೆಡೆಸಲ್ಪಡುವ ಇನ್ನಷ್ಟು ಸಂಸ್ಥೆಗಳು. ಇವರ “ಯೋಗ ಸಂದೇಶ” ಅನ್ನುವ ಪುಸ್ತಕ ಕನ್ನಡ ಭಾಷೆಯನ್ನು ಒಳಗೊಂಡು ಒಟ್ಟು 11 ಭಾಷೆಗಳಲ್ಲಿ ಪ್ರಕಟ ಗೊಂಡಿದೆ.

ಸಮಾಜ ಮುಖಿಯಾಗಿ ಬಾಬಾ ರಾಮ್ ದೇವ್ ರಾಜೀವ್ ದೀಕ್ಷಿತರ “ಭರತ್ ಸ್ವಾಭಿಮಾನ್” ಅನ್ನುವ ಧ್ಯೇಯ ವಾಕ್ಯದಡಿ, 100% ಮತದಾನ, ಸ್ವದೇಶಿ ವಸ್ತುಗಳ ಬಳಕೆ, ಸರ್ವ ಭಾರತೀಯರಿಗೂ ಸಮಾನತೆ,  ಸಾವಯವ ಕೃಷಿ ಆಧಾರ, ವಿದೇಶಿ ವಸ್ತುಗಳ ವ್ಯಾಮೋಹ ಹಾಗೂ ಅನುಕರಣೆಗಳ ವಿರುದ್ಧ ಸಮರ ಮತ್ತು ಭಾರತ ಒಂದು  ಯೋಗ ವನ್ನು ಅಭ್ಯಾಸ ಮಾಡುವ ರಾಷ್ಟ್ರ ವಾಗಬೇಕೆಂಬ ಸಂದೇಶವನ್ನೂ ತಮ್ಮ ಎಲ್ಲ ಯೋಗ ಶಿಬಿರಗಳಲ್ಲಿ ಪ್ರಚಾರ ಪಡಿಸುತ್ತಲೇ ಬಂದಿದ್ದಾರೆ.

ಬಾಬರಿಗೆ ಸಂದ ಪುರಸ್ಕಾರಗಳು ಕೆಲವು ಮಾತ್ರ ಅದರಲ್ಲಿ, 2007 ರ ಕಲಿಂಗ  ಇನ್ಸ್ಟಿಟ್ಯೂಟ್  ಅವರ ಗೌರವ ಡಾಕ್ಟರೇಟ್, ಅಮೇಟಿ ವಿಶ್ವವಿಧ್ಯಾಲಯದ  ಗೌರವ ಡಾಕ್ಟರೇಟ್,  ಡಿ.ವೈ ಪಾಟೀಲ್  ವಿಶ್ವವಿಧ್ಯಾನಿಲಯದಿಂದ ಯೋಗ ವಿಜ್ಞಾನಕ್ಕಾಗಿನ ಗೌರವ ಪದವಿ ಹಾಗೂ ಮಹಾರಾಷ್ಟ್ರ ಸರ್ಕಾರದ “ಚಂದ್ರಶೇಕರೇಂದ್ರ ಸರಸ್ವತಿ  ಸ್ಮಾರಕ ಪ್ರಶಸ್ತಿಗಳು ಮುಖ್ಯವಾದವುಗಳು.

ಕಪ್ಪು ಹಣದ ಬಗ್ಗೆ ತೀವ್ರವಾದ ಹೊರಾಟವನ್ನು ಅವರು ಈವರ್ಷದ ಫೆಬ್ರವರಿ 27 ರಂದು ರಾಮ ಲೀಲ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡುವಮೂಲಕ ಚಾಲನೆ ನೀಡಿದರು, ಅಣ್ಣಾ ಹಜಾರೆ, ಕಿರಣ್ ಬೇಡಿ, ರಾಮ್ ಜೇಟ್ ಮಲಾನಿ, ಸ್ವಾಮಿ ಅಗ್ನಿವೆಶ್, ಅರವಿಂದ ಕೆಜ್ರಿವಾಲ್, ಮುಂತಾದವರು ಭಾಗವಹಿಸಿದ್ದ ಸಮಾವೇಶ 1 ಲಕ್ಷ ಜನರನ್ನ ಒಟ್ಟುಗೂಡಿಸಿತ್ತು ಆದರೆ ದೇಶದ ಒಂದೂ ಸುದ್ದಿವಾಹಿನಿ ಇದರ ಬಗ್ಗೆ ಮತಾಡಲೆ ಇಲ್ಲ , ಆವಾಗಲೇ ಸೋನಿಯಾ ಅಂಡ್ ಕಂಪನಿಗೆ ತಿಳಿದುಹೋಗಿತ್ತೇನೋ ಈ ವ್ಯಕ್ತಿ ಸಾಮಾನ್ಯನಲ್ಲ ಅಂತ……

ಜೂನ್ 4 ರ ರಾಮ್ ಲೀಲ ಮೈದಾನದ ದುರಂತ ನಿಮಗೆಲ್ಲರಿಗೂ ಗೊತ್ತೇ ಇದೆ, ಸುಮಾರು 3 ಘಂಟೆಗಳ ಕಾಲ ನೆಡೆದ ಪೊಲೀಸ್ ದೌರ್ಜನ್ಯ ಅಲ್ಲಿ ಹೇಗಿತ್ತೆಂದರೆ, ಹೆಂಗಸರು, ವೃದ್ದರು ಮಲಗಿದ್ದ ಸಮಯದಲ್ಲಿ ಸಿಕ್ಕಿದ್ದು ಲಾಟಿ ಏಟು. 65000 ಸಾವಿರ ಜನರಿದ್ದ ಸ್ಥಳದಲ್ಲಿ 10000 ಪೊಲೀಸರ ಆಕ್ರಮಣ, ಟೆಂಟು, ಡೇರೆಗಳಿಗೆ ಬೆಂಕಿ ಇಟ್ಟರು, ಜೆನರೇಟರ್ ಗಳ ಮೇಲೆ ನೀರು ಸುರಿದರು ಅದರಿಂದ ರಾತ್ರಿ ನೆಡೆಯುತ್ತಿದ್ದ ಆ ಹಿಂಸೆ ಕ್ಯಾಮರಾ ಕಣ್ಣಿಗೆ ಕಾಣಬಾರದು ಅನ್ನುವ ದುರುದ್ದೇಶ ಅವರದ್ದು. ಬಾಬಾ ಆ ಸಂಧರ್ಬದಲ್ಲಿ “ದಯವಿಟ್ಟು ಯಾರಿಗೂ ಹೊಡೆಯಬೇಡಿ ಹಿಂಸೆ ಕೊಡಬೇಡಿ ನನ್ನನು ಬೇಕಾದರೆ ಜೈಲಿಗೆ ತಳ್ಳಿ” ಅನ್ನುವ ಮನವಿಯನ್ನ ಪರಿ ಪರಿಯಾಗಿ ನಿವೇಧಿಸಿಕೊಂಡರೂ  ಮನ್ನಣೆ ನೀಡದ ಪೊಲೀಸರು ಅಶ್ರುವಾಯು ಸಿಡಿಸಿದರು, ಯುದ್ದ ಸನ್ನದ್ಧರಾಗಿದ್ದ ಪೊಲೀಸರು ಎಷ್ಟರ ಮಟ್ಟಿಗೆ ಹಿಂಸಿಸಿದರೆಂದರೆ ಅಲ್ಲಿ ಅಕ್ಷರಶಃ ನರಕ ಸೃಷ್ಟಿಯಾಯಿತು.  ನಂತರ 15 ದಿನಗಳ ಕಾಲ  ಬಾಬರನ್ನು ದೆಹಲಿಗೆ ಕಾಲಿಡದಂತೆ ನಿರ್ಭಂದ ಹೇರಿದರು…. ಅಷ್ಟಕ್ಕೂ ರಾಮ್ ದೇವ್ ಸತ್ರ್ಯಗ್ರಹ ಮಾಡಿದ್ದು ಯಾವ ಬೇಡಿಕೆ ಇಟ್ಟುಕೊಂಡು? ಇಲ್ಲಿದೆ ಅದರ ಪಟ್ಟಿ.

1.      ರಾಷ್ಟ್ರದ ಹೊರಗೆ ಸ್ವಿಸ್ ಬ್ಯಾಂಕ್ ನಲ್ಲಿ ಕೊಳೆಯುತ್ತಿರುವ ಕಪ್ಪುಹಣವನ್ನ ರಾಷ್ಟ್ರೀಯ ಸಂಪತ್ತಾಗಿ ಘೋಷಿಸಬೇಕು.

2.      ಸಂಯುಕ್ತ ರಾಷ್ಟ್ರಗಳ “ಭ್ರಷ್ಟಾಚಾರ ನಿರ್ಮೂಲನ ಒಪ್ಪಂದಕ್ಕೆ ಸಹಿ ಹಾಕಬೇಕು (ಈ ಒಪ್ಪಂದ 2006 ರಿಂದ ಸರ್ಕಾರಿ ಕಡತಗಳಲ್ಲಿ ದೂಳು ಹಿಡಿದುಕೊಂಡು ಬಿದ್ದಿದೆ)

3.      ಲೋಕಪಾಲ್ ಮಸೂಧೆ ತಕ್ಷಣ ಜಾರಿಗೊಳ್ಳಬೇಕು.

4.      ಸರ್ಕಾರಕ್ಕೆ ತೆರಿಗೆ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

5.      ದೇಶದ ಹೊರಗೆ ಅನೈತಿಕವಾಗಿ ಕ್ರೋಡೀಕರಣಗೊಂಡ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.

6.      ನಕಲಿ ನೋಟು ಜಾಲ ತಡೆಗಾಗಿ 500 ಹಾಗೂ 1000 ರೂಪಾಯಿ ನೋಟುಗಳನ್ನು ತಕ್ಷಣದಿಂದಲೇ ನಿಷೇಧ ಮಾಡಬೇಕು.

7.      ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸಿ…..

ಬಾಬಾ ರಾಮ್ ದೇವ್ ಆಮರಣಾಂತ ಉಪವಾಸ ಕೈಗೊಂಡಿದ್ದು, ಅದನ್ನ ಪಂಡಿತ್ ರವಿಶಂಕರ್ ಗುರೂಜಿ ಯವರ ಸಂಧಾನದ ಮೂಲಕ ನಿಲ್ಲಿಸಿದ್ದು ಈಗ ಸುಧ್ಧಿಮಾತ್ರ., ಈಗಿನ ಸುದ್ಧಿ ಏನೆಂದರೆ ಬಾಬಾ ರಾಮ್ ದೇವ್ ಅವರ ಸಹಚರ ಆಚಾರ್ಯ ಬಾಲಕೃಷ್ಣ ಅವರ ಪಾಸ್ಪೋರ್ಟ್ ನಕಲಿ ಎಂದು ಸಿ.ಬಿ.ಐ ತನಿಖೆ ನೆಡೆಸುತ್ತಿರುವುದು.

ಎಂತಹ ವಿಪರ್ಯಾಸ ನೋಡಿ, ಒಬ್ಬ ಹೆಂಗಸು ನಮ್ಮ ರಾಷ್ಟ್ರಕ್ಕೆ ಸೇರಿದವರಲ್ಲ, ಅವರನ್ನು ಹೊತ್ತು ಮೆರೆಯುತ್ತಿದಾರೆ ರಾಜಕೀಯದ ಹೊಲಸು ಜೀವಿಗಳು, ಇನ್ನೂ ಪಾಕಿಸ್ತಾನ, ಬಾಂಗ್ಲಾದೇಶ, ಹಾಗೂ ಚೀನದಿಂದ ಕಾನೂನು ಭಾಹಿರವಾಗಿ ಪ್ರತಿಭಾರಿ  ಒಳನುಸುಳಿ ಬರುತ್ತಿರುವ ಸಾವಿರಾರು ಜನಗಳ ಪಾಸ್ಪೋರ್ಟ್ ಕೇಳಲು ಇವರಿಗೆ ಬಾಯಿ ಬರುತ್ತಿಲ್ಲ ಅಲ್ಲವೇ?

ದೇಶದ ಒಳಗಡೆ ನಕಲಿ ನೋಟಿನಿಂದ ಹಿಡಿದು ರೇಷನ್ ಕಾರ್ಡ್, ಡ್ರೈವಿಂಗ್  ಅನುಮತಿ, ನಕಲಿ ಮಾರ್ಕ್ಸ್ ಕಾರ್ಡುಗಳು, ನಕಲಿ ಪದವಿ, ಇನ್ನೂ ಏನೇನೋ ನಕಲಿಯಾಗಿ ಸಿಗುತ್ತಿವೆ, ಅವುಗಳನ್ನು ಮಟ್ಟ ಹಾಕುವ ಬದಲು ಸತ್ಯಾಗ್ರಹ ಮಾಡುತ್ತಿದ್ದ ಅಮಾಯಕ ಜನರಮೇಲೆ  ಲಾಟಿ ಬೀಸಿ ಏನು ದೊಡ್ಡ ಗಂಡಸ್ತನ ತೋರಿಸಿದಿರಿ ಸನ್ಮಾನ್ಯ ಪಧಾನ ಮಂತ್ರಿಗಳೆ?

ಇನ್ನು ಒಬ್ಬ ಸಾಧುವಿನ ಬಳಿ ಸಾವಿರಾರು ಕೋಟಿ ಆಸ್ತಿ ಇದೆ ಅನ್ನುವುದು, ಯಾವ ಮಠ ಮಾನ್ಯಗಳಲ್ಲಿ ದುಡ್ಡಿಲ್ಲ? ಹೋಗಲಿ, ಪರಮ ಹಿಂಸೆ ನಿತ್ಯಾನಂದನ ಆಸ್ತಿ ವಿಚಾರ ಏನಾಯ್ತು? 2ಜಿ ಹಗರಣದಲ್ಲಿ ಕಳೆದು ಹೋದ ಹಣ ಎಂದು ವಾಪಸ್ ಬರುತ್ತದೆ? ಲೋಕಾಯುಕ್ತರು 60 ದಿನಗಳ ಸಮಯ ನೀಡಿದ್ದರೂ ನಮ್ಮ ಮಂತ್ರಿಮಹಾಶಯರು ತಮ್ಮ ಆಸ್ತಿವಿವರಗಳನ್ನು ಯಾಕೆ ಬಹಿರಂಗ ಪಡಿಸಿಲ್ಲ? ನಮ್ಮ ರಾಜ್ಯದ ಅತಿ ಬಡವ (!!?) ದೇವೇಗೌಡರ ಕುಟುಂಬದ ಒಟ್ಟು ಆಸ್ತಿ ಎಷ್ಟಿದೆ? ಯಡ್ಯೂರಪ್ಪ ನವರ ಒಟ್ಟು ಗಳಿಕೆ ಎಷ್ಟು? ಯೆಜುರ್ಮಂದಿರದಲ್ಲಿ ಇರುವ ಸಾಯಿಬಾಬರ ಒಟ್ಟು ಹಣದ ಕಂತೆಗಳು ಎಷ್ಟು? ಇದೆಲ್ಲ ಬಿಡಿ ಹೋಗಲಿ, ಇವುಗಳಲ್ಲಿ ಎಷ್ಟು ರಾಜಕೀಯದ ವ್ಯಕ್ತಿಗಳು ತಮ್ಮ ಸ್ವಂತ ಹಣವನ್ನು ಬಡಬಗ್ಗರಿಗೆ, ದೀನ ದಲಿತರಿಗೆ ಧಾನ ಮಾಡಿದ್ದಾರೆ? ಬಡವರ ಉಧ್ಧಾರಕ್ಕಾಗಿ ಅವರ ಸ್ವಂತ ಖರ್ಚಿನಿಂದ ಎಂತಹಾ ಸೇವೆ ಸಲ್ಲಿಸಿದ್ದಾರೆ ? ಒಬ್ಬ ರಾಜಾಕರಣಿ ಇದ್ದಾನೆಯೇ ತನ್ನ ಸ್ವಂತ ಹಣದಿಂದ ಬೇರೆಯವರ ಹಿತ ಕಾಪಾಡಲು,,, ತೋರಿಸಿ ನೋಡೋಣ….

ಒಬ್ಬ ಭ್ರಷ್ಟಾತಿಭ್ರಷ್ಟ ಮುಖ್ಯಮಂತ್ರಿ, ಇನ್ನೊಬ್ಬ ಮಾಜಿ ಮುಖ್ಯಮಂತ್ರಿ, ಅವರು ಆಣೆ ಪ್ರಮಾಣ ಮಾಡಿದರೆ ಇಡೀ ದೇಶದ ಸುದ್ದಿವಾಹಿನಿಗಳಿಗೆ ಬೇರೆ ಕೆಲಸ ಇಲ್ಲ, ಅದನ್ನೇ ಮತ್ತೆ ಮತ್ತೆ ತೋರಿಸುವುದು, ಅದರ ಬಗ್ಗೆ ಹಗಲೂ ರಾತ್ರಿ ಚರ್ಚೆ ಮಾಡುವುದು, ಅದನ್ನ ನಮ್ಮಂತೋರು ಏನೋ ಸತ್ಯ ಹರಿಶ್ಚಂದ್ರ ನ ತುಂಡುಗಳು ಮಾತಾಡ್ತಿವೆ ಅಂತ ಬಾಯಿ ಬಿಟ್ಟುಕೊಂಡು ನೋಡೋದು….

 ನಮಗೆ  ಎನಾಗಿದೆ? ಇಲ್ಲಿ ಒಬ್ಬ ಅತ್ಯಂತ ಭ್ರಷ್ಟ ಒಬ್ಬ ಸಾವಿರಾರು ಕೋಟಿ ರೂಪಾಯಿಗಳನ್ನ ನುಂಗಿ ನೀರು ಕುಡಿಯುತ್ತಿದ್ದರೆ ಅವರನ್ನೇ ಮತ್ತೆ ಮತ್ತೆ ಆರಿಸಿ ಕಳಿಸುತ್ತಿದ್ದೆವಲ್ಲಾ? ಎಷ್ಟೇ ಹಗರಣಗಳನ್ನ ಮಾಡಿದರೂ ಮಠ ಮಾನ್ಯಗಳ ಸ್ವಾಮೀಜಿಗಳ ನೆರವಿನಿಂದ ಬಚಾವಾಗಿ ಮತ್ತದೇ ಕುಕೃತ್ಯಗಳಿಗೆ ಕೈ ಹಾಕಿದರೂ ಯಾಕೆ ನಾವು ಸುಮ್ಮನಿದ್ದೇವೆ?  ಅಬಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನ ತಮ್ಮ ಅಜ್ಜನ ಆಸ್ತಿಯಂತೆ ಭಾವಿಸಿ ಅದನ್ನ ಲಪಟಾಯಿಸುವ ತಿಮಿಂಗಿಲಗಳನ್ನು ಮಟ್ಟ ಹಾಕಲು ಒಬ್ಬ ಸಾಧು ನಿಂತರೆ ಅವನಿಗೆ ಎಷ್ಟು ಆಸ್ತಿ ಇದೆ? ಅವನ ಸಹಚರ ಒಬ್ಬ ಲಂಪಟ, ಇಲ್ಲವೇ ಆ ವ್ಯಕ್ತಿ ಕೋಮುವಾದಿ ಅನ್ನುವ ರಾಜಕಾರಣಿಗಳಿಗೆ ಮೊದಲು ಮಾನಸಿಕ ಸ್ಥಿತಿ ಹೇಗಿದೆ ಅನ್ನುವುದನ್ನ ತಿಳಿದುಕೊಳ್ಳುವುದು ಒಳ್ಳೆಯೇದೇನೋ ಅಲ್ಲವೇ? ಜೂನ್ 30ರ ಒಳಗಾಗಿ ಲೋಕಪಾಲ್ ಮಸೂದೆ ತಯಾರಾಗುತ್ತದೆ ಅದನ್ನು ಜಾರಿಗೆ ತರಲು ಎಲ್ಲ ಸಿಧ್ದ್ಧತೆಗಳು ನೆಡೆದಿವೆ ಅನ್ನುವ ರಾಜಕಾರಣಿಗಳು ಯಾಕೋ ತಲೆಮರೆಸಿಕೊಂಡತೆ ಕಾಣುತ್ತಿದೆ ಅಲ್ಲವೇ?

ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸಿ ಅನ್ನುವ ರಾಮದೇವರ ಬೇಡಿಕೆಯನ್ನ ಈಡೇರಿಸಿದರೆ ಬಹುಶಃ ರಾಷ್ಟ್ರದಲ್ಲಿ ಯಾವರಾಜಕಾರಣಿಯೂ ಜೀವಂತವಾಗಿ ಉಳಿಯಲು ಸಾಧ್ಯವಿಲ್ಲ ಅನ್ನುವ ಭಯವಿದ್ದಂತೆ ಇದೆ ನಮ್ಮ ಸರ್ಕಾರಗಳಿಗೆ ಅಲ್ಲವೇ? ಈ ಎಲ್ಲಾ  ಕೊಚ್ಚೆ, ಕೇಸೆರೆರೆಚಾಟಗಳ ಮಧ್ಯೆ ಒಬ್ಬ ಸಾಮಾನ್ಯ ನಾಗರೀಕನಾಗಿ ನಾವು ಇನ್ನುಮುಂದೆ ಮತ ಚಲಾಯಿಸುವ ಮೊದಲು ಯಾರಿಗೆ  ನಮ್ಮ ಮತ ಸೇರುತ್ತಿದೆ?? ಅವನು ಎಂತಹ ವ್ಯಕ್ತಿ? ನಮ್ಮಿಂದ ನಮ್ಮ ಮುಂದಿನ ಪೀಳೆಗೆಗೆ ಕೊಡಬೇಕಾದ ಕನಿಷ್ಠ ಕಾಣಿಕೆಯಾದರೂ ಏನು? ಅನ್ನುವುದನ್ನ ಯೋಚಿಸಿದಲ್ಲಿ ಕೆಲವೇ ವರ್ಷಗಳಲ್ಲಿ ನಾವು ಅಮೆರಿಕಾವನ್ನು ಮೀರಿಸಿ ಬೆಳೆದು ನಿಲ್ಲಬಹುದು ಅಲ್ಲವೇ? ನೀವೇನತೀರಿ?

ಗ್ರಾಂ ಸಭಿ!!

ಜುಲೈ 5, 2011

ನಮಸ್ಕಾರ ಸ್ನೇಹಿತರೇ, ನಾನು ಮೊನ್ನೆ ಊರಿಗೆ ಹೋಗಿದ್ದೆ , ಮನೆಗೆ ಹೋಗಿ ಇನ್ನೂ ಕಾಲಿಟ್ಟಿಲ್ಲ ಸುಮಾರು ಬೆಳಗಿನ 7 ಘಂಟೆಗೆಲ್ಲಾ ಮೈಕ್ ಹಿಡ್ಕೊಂಡು ಗೂಡ್ಸ್ ಆಟೋ ದಲ್ಲಿ ಪ್ರಚಾರ ಮಾಡ್ತೀದ್ರು ಸೋಮವಾರ ಗ್ರಾಂ ಸಬಿ ಅದೆ, ಗ್ರಾಮಸ್ತರು ಹೆಚ್ಚಿನ ಸಂಕೀಲಿ ಬಾಗವಹಿಸ್ಬಕು ಅಂತ….ಅಂತೂ ಸೋಮವಾರನೂ ಬಂತು ಜನನೂ ಮೌಳಿ ಇಸ್ಕೂಲ್ ಕಡೆ ಮಧ್ಯಾನ 12:30 ಹೊತ್ತಿಗೆ ಬಂದ್ರು….ಬನ್ನಿ ನಾವೂ ಹೋಗಿ ಬರೋಣ ,ನೋಡೋಣ ಜೀವರಾಜರ ಆಡಳಿತದಲ್ಲಿ ಏನೇನು ಸ್ಕೀಮುಗಳು ಇವೆ ಅಂತ !!

 ಎಂತಹಾ ಆಭಾಸ!! ಏನು ನೆಡಿತು ಗೊತ್ತಾ ? ಗ್ರಾಮ ಸಭೆಯಲ್ಲಿ ಬಂದವರು ನಮ್ಮ ಭಾಗದ  ಪಂಚಾಯತ್  ಸದಸ್ಯರು, ತಾಲೂಕ್ ಪಂಚಾಯತ್ ಸದಸ್ಯರು, ಹಾಗೂ ಒಬ್ಬ ನೋಡಲ್ ಅಧಿಕಾರಿ……ಕಾರ್ಯಕ್ರಮ ಶುರು ಆಗಿದ್ದು 12:30 ಘಂಟೆಗೆ ಹಾಗೆ ಮುಗಿದಿದ್ದು ಕೇವಲ 30 ನಿಮಿಷಗಳಲ್ಲಲ್ಲಿ!! ಮೊದಲು ಗ್ರಾಮ ಪಂಚಾಯಿತ್ ವತಿಯಿಂದ ಯಾವ ಯಾವ ಯೋಜನೆಗಳು ಇವೆ ಅಂತ ಹೇಳಿ ಸಾರ್, ಅಂದೆ ನಾನೇ ಮೊದಲಿಗನಾಗಿ ಮಾತಾಡಿದ್ದು ಅಲ್ಲಿ ಅನ್ಸುತ್ತೆ….

 ಒಬ್ಬರು ಮಹಾನುಬಾವರು ಎದ್ದು ನಿಂತರು, ನಾನು ಅಂದುಕೊಂಡೆ ಯೆಡ್ಡಿ ಸಾರ್ ಸುಮಾರೆಲ್ಲ ಟಿ‌ವಿ ಲಿ ಹೇಳ್ತಾ ಇರ್ತರಲ್ಲ ಹಾಗೆ ಒಂದು ದೊಡ್ಡ ಲಿಸ್ಟ್ ಇರ್ಬೊದು ಅಂತ ಆದರೆ ಅಲ್ಲಿ ಇದ್ದಿದ್ದು ಮೂರೇ ಮೂರು ಯೋಜನಗಳು ಅದು ಯಾವುವು ಗೊತ್ತ?

  1. ಕೇಂದ್ರದ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮದಲ್ಲಿ ಎಲ್ಲರನ್ನೂ ನೋಂದಾಯಿಸುವುದು.
  2. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಒಬ್ಬ ಗ್ರಾಮಸ್ತನಿಗೆ ಒಂದು ಹಸುವುನ್ನ ದಯಪಾಲಿಸುವುದು.
  3. ಗ್ರಾಮಕ್ಕೆ ಸಿಲಾವರ ಗಿಡಗಳನ್ನ ಹಂಚುವುದು ಆದರೆ ಅದನ್ನು ಪಡೆದರೆ 100 ಗಿಡಗಳನ್ನು ಕೊಡಮಾಡಲಾಗುತ್ತದೆ ಅದರಲ್ಲಿ 30 ಸಿಲಾವರ ಹಾಗೆ ಉಳಿದ 70 ಆಕೆಶಿಯ ಅನ್ನುವ ಪ್ರಯೋಜನಕ್ಕೆ ಬಾರದ ಗಿಡಗಳು!!!

ಅಷ್ಟೇ ಮುಗಿದೇ ಹೋಯಿತು, ಇನ್ನೇನು ಎಲ್ಲರೂ ಒಟ್ಟಿಗೆ ಗ್ರಾಮಸ್ಥರೊಡನೆ ಒಂದು ಫೋಟೋ ಕ್ಲಿಕ್ಕಿಸಿಕೊಂಡು (ದಾಖಲೆಗಾಗಿ ) ಹೊರಡಬೇಕೆನ್ನುವಷ್ಟರಲ್ಲಿ ನಾವು ಸ್ವಲ್ಪ ಜನ ತಡೆದು ನಿಲ್ಲಿಸಿದೆವು….. ಹಾಗೆ ನಿಮ್ಮ ಈ 3 ಯೋಜನೆಗಳನ್ನು ಸ್ವಲ್ಪ ವಿಸ್ತಾರವಾಗಿ ಹೇಳಿ ಆಂದೆವು.

ಆಗ ಮತ್ತೆ ಎದ್ದು ನಿಂತ ಮಹಾಶಯರು ಹೇಳಿದರು ಸಾರ್ ನಿಮ್ ಹತ್ರ ಬಿ‌ಪಿ‌ಎಲ್ ಕಾರ್ಡ್ (ಬಿಲೋ ಪಾವರ್ಟಿ ಲೈನ್) ಇದ್ದರೆ ಮಾತ್ರ ಈ 3 ಯೋಜನೆಗಳಿಗೆ ಒಳಪಡುತ್ತೀರಿ ಇಲ್ಲ ಅಂದ್ರೆ ಇಲ್ಲ ಸಾರ್ ….!!!

 ಸ್ನೇಹಿತರೇ ನಿಮಗೆ ಗೊತ್ತಿರಲಿ ನಮ್ಮ ಊರಿನ ಒಟ್ಟು ಜನಸಂಖ್ಯೆ ಸುಮಾರು 400 ಅಷ್ಟೇ, ಅದರಲ್ಲಿ ಗೌಡ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಲ್ಲರೂ, ಅಲ್ಲಿ ಹಿಂದುಳಿದ ವರ್ಗದ ಯಾವುದೇ ಕುಟುಂಬ ಇಲ್ಲ, ಅದೂ ಅಲ್ಲದೆ ಅಲ್ಲಿ ಇರುವ ಎಲ್ಲರೂ ಬಡತನ ರೇಖೆಯ ಮೇಲಿದ್ದವರೇ !!(ದಾಖಲೆಗಳಲ್ಲಿ ಮಾತ್ರ)  ಹಾಗಾದರೆ ಇವರು ಯಾರನ್ನು ಗಮನದಲ್ಲಿ ಇಟ್ಟುಕೊಂಡು ನಮ್ಮ ಗ್ರಾಮದಲ್ಲಿ ಈ ಮೂರು ಯೋಜನೆಗಳು ನಮ್ಮವೆಂದು ತೋರಿಸಲು ಬಂದಿದ್ದರು? ಭಾಗ್ಯಲಕ್ಷ್ಮಿ, ಆಶ್ರಯ ಮನೆ, ಬೆಳೆ ಸಾಲ, ಹುಡುಗರಿಗೆ ಸೈಕಲ್ಲು ಕೊಡೋ ಯೋಜನೆ, ಹಾಗೂ ಅಡಿಕೆಗೆ ಬಂದ ರೋಗ ನಿರ್ವಹಣೆಗೆ ಏನೂ ಯೋಜನೆಗಳಿಲ್ಲವೇ? ಇವರು ಕೊಡುವ 100 ಗಿಡಗಳಲ್ಲಿ 70 ಆಕೆಶಿಯಾ ಗಿಡಗಳನ್ನು ಎಲ್ಲಿ ನೆಡುವುದು? ಯಾತಕ್ಕಾಗಿ ನೆಡಬೇಕು? ನಮಗೆ ಬೇಕಿರುವುದು ಕೇವಲ ಸಿಲಾವರ ಗಿಡಗಳು ಮಾತ್ರ ಅದೂ ಅಡಿಕೆಗೆ ರೋಗಬಂದ ಹಿನ್ನೆಲೆಯಲ್ಲಿ ಕಾಳುಮೆಣಸು ಬಳ್ಳಿಯನ್ನು ಹಬ್ಬಿಸುವ ಉದ್ದೇಶಕ್ಕೆ….. ಹಾಗಾದರೆ ಇವರು ಕೊಡುವ 30 ಗಿಡಗಳಿಂದ ಏನು ಮಾಡೋದು? ಅಷ್ಟು ಸಾಕೇ?

 ಅದೂ ಅಲ್ಲದೆ ಗ್ರಾಂ ಸಭೆಯಲ್ಲಿ ಯಾವುದೇ ಅರ್ಜಿಗಳನ್ನ ಸ್ವೀಕರಿಸಿಲ್ಲ ಕೇವಲ ಒಂದು ಚೇಟಿಯಲ್ಲಿ ಎಲ್ಲರ ಹೆಸರುಗಳನ್ನ ಬರೆದುಕೊಂಡರು ಅಷ್ಟೆ, ಹಾಗಾದರೆ ಈ ಸಭೆಯಲ್ಲಿ ಹೇಳಿದ ಅಥವಾ ಲಭ್ಯವಿರುವ ಸೌಲಭ್ಯಗಳನ್ನು ಅರ್ಜಿ ಕೊಡದೆ ಹಾಗೆಯೇ ಮನೆಮುಂದೆ ತಂದು ಕೊಡುತ್ತಾರೆಯೇ?  ಅದೂ ಅಲ್ಲದೆ ನಮ್ಮ ಒಬ್ಬ ರೈತರ ಮನೆಗೆ ಹೋಗಲು ಸರಿಯಾದ ರೋಡ್ ಇಲ್ಲ ಮಳೆಗಾಲದಲ್ಲಿ ಮಣ್ಣಿನ ರೋಡು ತುಂಬಾ ಜಾರುತ್ತೆ, ದಯವಿಟ್ಟು ಏನಾದ್ರೂ ಮಾಡಿಕೊಡಿ ಅಂದ್ರೆ ಕನ್ನಡಕದ ಒಬ್ಬ ಅಧಿಕಾರಿ ಎಷ್ಟು ಖಾರವಾಗಿ ಉತ್ತರಿಸಿದ ಗೊತ್ತ? ಇನ್ನೊಬ್ಬರ ಮನೆಯ ಬಳಿ ಜಲ್ಲಿ ರೋಡ್ ಮಾಡಿದಾರೆ ಅಲ್ಲಿ ಈಗ ಜನಗಳೇನು, ಜಾನುವಾರುಗಳೂ ಒಡಿಯಾಡದ ಪರಿಸ್ಥಿತಿ ನಿರ್ಮಾಣ ವಾಗಿದೆ!! ಇನ್ನೂ ದುರಂತ ಏನು ಗೊತ್ತ? ಕುಡಿಯುವ ನೀರಿನ ಭಾವಿಯನ್ನ ಜೀವರಾಜ ಬೆಂಬಲಿತರ ಮನೆಮುಂದೆ ಅವಶ್ಯಕತೆ ಇಲ್ಲದಿದ್ದರೂ ತೊಡಿಸಿಕೊಡಲಾಗಿದೆ  ಒಬ್ಬ ಸಾಮಾನ್ಯ ರೈತರೊಬ್ಬರು 10 ವರ್ಷಗಳಿಂದ ತಮ್ಮ ಅರ್ಜಿ ಹಿಡಿದುಕೊಂಡು ಓಡಾಡಿದ್ದಾರೆ ಅವರಿಗೆ ಮಾತ್ರ ಕುಡಿಯುವ ನೀರಿನ ಬಾವಿ ಸಿಕ್ಕಿಲ್ಲ ಅವರಂತೂ ಅದನ್ನ ಹೇಳುವಾಗ ನನ್ನ ಕಣ್ಣಾಲೆಗಳೇ ತುಂಬಿಬಂದವು…. ಇದೆಂಥಾ ದುರಂತ !!

 ಇನ್ನೊಬ್ಬ ಹೆಂಗಸು, ಪಾಪ ಗಂಡಸಿಲ್ಲದ ಮನೆ ಅವರದ್ದು ತೋಟಒಂದರಲ್ಲಿ ಹಾಯ್ದು ಹೋಗುವ ಹಳ್ಳ ಅವರ ಮನೆಯ ಹಿಂಬದಿಯ ಮಣ್ಣನ್ನು ಕೊರೆದುಕೊಂಡು ಹೋಗುತ್ತಿದೆ, ಅದರಿಂದ ಅವರ ಮನೆಯೇ ಈಗ ಕುಸಿದುಬೀಳುವ ಪರಿಸ್ಥಿತಿಯಲ್ಲಿದೆ ಅವರಿಗೆ ಈ ನಮ್ಮ ಮಹಾಶಯರು ಕೊಟ್ಟ ಪರಿಹಾರ ಎಷ್ಟು ಗೊತ್ತ? ಕೇವಲ 500 ರೂಪಾಯಿ!!

 ನಮ್ಮ ಗ್ರಾಮವನ್ನು ಮಾದರಿ ಗ್ರಾಮಾವೆಂದು ಗೋಷಿಸಿದ್ದೀರಿ ಆದರೆ ಅಲ್ಲಿಯ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಸಾರ್ವಕಾಲಿಕ ರಸ್ತೆಗಳು ಸರಿ ಇದ್ದರೆ ಮಾತ್ರವಲ್ಲವೇ? ಅದು ಮಾದರಿ ಗ್ರಾಮವಾಗುವುದು? ನಿಮಗೆ ಗೊತ್ತ ನೀವು ನೀಡಿದ 25 ಕೆವಿ ಟ್ರಾನ್ಸ್ ಫಾರ್ಮರ್ ಸಂಜೆಹೊತ್ತಲ್ಲಿ ಒಲ್ಟೇಜ್ ಪೂರಯಿಸಲಾಗದೆ ಒದ್ದಾಡುತ್ತಿರುವುದು?  ರಸ್ತೆಗಳು ಕಿತ್ತು ಹೋಗಿರುವುದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ? ಕುಡಿಯುವ ನೀರಿನ ಬಾವಿಯನ್ನ ಸರಿಯಾದ ಫಲಾನುಭವಿಗಳಿಗೆ ನೀಡಿದ್ದೀರಾ?

 ಹೇಳಬೇಕೆಂದರೆ ಗ್ರಾಮ ಪಂಚಾಯಿತ್ ನ ಯೋಜನೆಗಳು ಜನರ ಕಿವಿಗೆ ಬೀಳುತ್ತಿಲ್ಲ, ಏಕೆ ಹೀಗೆ? ಈಗ ತುಂಬಾ ಮಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಯಾವ ಸಿದ್ದತೆಗಳನ್ನು ಮಾಡಿದ್ದೀರಿ? ಅದೂ ಅಲ್ಲದೆ ಕೆಲವೊಮ್ಮೆ ಬಂದ ಗೊಬ್ಬರ, ಕೀಟನಾಶಕಗಳು, ಕೆಲಒಬ್ಬರಿಗೆ ಮಾತ್ರ ಸಿಗುತ್ತಿವೆ ಅದೂ ಸಿಕ್ಕ 3 ದಿನಗಳ ನಂತರ ಬೇರೆಯವರಿಗೆ ಸುದ್ದಿ ಮುಟ್ಟುತ್ತದೆ ಅದು ಯಾಕೆ? ನಮ್ಮ ಬಡ ರೈತರು ಕೊಟ್ಟ ಅರ್ಜಿಗಳಿಗೆ ಬೆಲೆಯೇ ಇಲ್ಲವೇ? ಅಥವಾ ನಿಮ್ಮ ಗ್ರಾಮ ಸಭೆಗೆ ಬರಲು ಕೇವಲ ಬಡತನ ರೇಖೆಯ ಕೆಳಗಿರುವವರು ಮಾತ್ರ ಅರ್ಹರಾದರೆ ನಮ್ಮ ತೆರನಾದ ಸಾಮಾನ್ಯ ಜನರ ಮತಗಳನ್ನು ಏಕೆ ಕೇಳಿದಿರಿ? ಬಡತನ ಅನ್ನುವುದು ನೀವು ಕೊಡುವ ಹಳದಿ ಕಾರ್ಡಿನಿಂದ ಅಳೆಯುವುದು ಯಾವ ನ್ಯಾಯ? ಎಷ್ಟೋ ಜನ ಎಕರೆಗಟ್ಟಳೆ ತೋಟ ಇದ್ದವರು ಈಗ ಕಡು ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ಹೋಗಲಿ ಬಿಡಿ ಅಡಿಕೆ ಹೋಯಿತು ಪರ್ಯಾಯ ಬೆಳೆ ಬೆಳೆಯಲು ನಿಮ್ಮ ಸಹಾಯ ಏನು? ಕೇಂದ್ರ ದಿಂದ ಬಂದ ಹಳದಿ ರೋಗದ ಅಧ್ಯಯನಕ್ಕೆ ಬಂದ ಆಯೋಗಕ್ಕೆ ಏನನ್ನು ಹೇಳಿದ್ದೀರಿ?

 ನಮ್ಮ ರೈತರಿಗೆ ಈಗ ಫುಲ್ ಕೆಲಸ, ಅವರಿಗೆ ಬೇಕಿರುವುದು ಗದ್ದೆಗಳಲ್ಲಿ ಕೆಲಸ ಮಾಡಲು ಹಾರೆ, ಕಂಬಳಿ, ಪಿಕಾಸಿಯಂತಹ ಸಲಕರಣೆಗಳು ಅದನ್ನೇನು ಉಚಿತವಾಗಿ ಬೇಡ ಸಬ್ಸಿಡಿ ದರದಲ್ಲಿ ನೀಡಿ, ಅಡಿಕೆಗೆ ರೋಗ ಬಂದಿದೆ, ಅಳಿದುಳಿದ ತೋಟವನ್ನು ಈ ಮಳೆಗಾಲದಿಂದ ರಕ್ಷಿಸಲು ಬೇಕಿರುವುದು ಸರಿಯಾದ ಕೀಟನಾಶಕಗಳು ಗದ್ದೆಗೆ ಬೇಕಿರುವ ಗೊಬ್ಬರ ಅವನ್ನು ಪೂರಯಿಸುವ ಯೋಜನೆ ಏಕೆ ಮಾಡುತ್ತಿಲ್ಲ? ಅಥವಾ ಆರೀತಿಯ ಯೋಜನೆಗಳನ್ನು ಮಾಡುವ ಮನಸಿಲ್ಲವೇ?

 ಈ ರೀತಿಯ ಪ್ರಯೋಜನಕ್ಕೆ ಬಾರದ ಯೋಜನೆಗಳಿಂದಾಗಿಯೇ ನಮ್ಮ ರೈತರ ಮಕ್ಕಳಾದ ನಾವು ಗುಳೆ ಬಂದಿರುವುದು, ಅಲ್ಲಿರುವ ಜನಗಳು ಇತ್ತ ತೋಟವನ್ನೂ ನೋಡಲಾಗದೆ, ಬೇರೆ ಕೆಲಸಕ್ಕೂ ಹೋಗಲಾರದೆ ಒದ್ದಾಡುತ್ತಿರುವುದು ಅಲ್ಲವೇ?

 ಮಾನ್ಯ ನಾಯಕರೆ ಕೊನೆಯದಾಗಿ ನಿಮಗೆ ಕೆಲವು ಪ್ರಶ್ನೆಗಳು,ಹಾಲಿ ಚಲಾಯಿಸಿದ ಮತಗಳು ನಿಮಗೆ ಹೆಚ್ಚಾದವೆ? ಮುಂದೆ ನಮ್ಮಿಂದ ನಿಮಗೆ ಯಾವ ರೀತಿಯ ಸಹಾಯ ಪ್ರೋತ್ಸಾಹಗಳು ಬೇಡವೇ? ಇನ್ನೂ ಕೇಳಿದರೆ ಸರ್ಕಾರಿ ಕಾಲೇಜು ಹಾಗೂ ಸಂತೆ ಮಾಳಗಳನ್ನು ತೋರಿಸುವ ನೀವು ಒಮ್ಮೆ ಯೋಚಿಸಿ, ಕೇವಲ ಬೆರಳೆಣಿಕೆಯ ಯೋಜೆನೆಗಳ ಜಾರಿಗೆ ಮಾತ್ರ ನಿಮ್ಮನ್ನು ಆರಿಸಿದೆವೆ? ಅದಕ್ಕೆ ನಿಮಗೆ 5 ವರ್ಷಗಳ ಕಾಲಾವಧಿ ಯಾಕೆ? ಬಡ ರೈತರಿಂದ ಕಸಿಯುವ ಮನೆಗಂದಾಯ, ಜಮೀನುಗಂದಾಯಗಳು ಎಲ್ಲಿ ಹೋಗುತ್ತಿವೆ ಅದರಿಂದ ಏನನ್ನು ಮಾಡುತ್ತಿದ್ದೀರಿ?  ಎಲ್ಲ ಟಿ‌ವಿ ಪೇಪರ್ಗಳಲ್ಲಿ ನೋಡಿದರೆ ನಿಮ್ಮ ಸರ್ಕಾರದ ಯೋಜನೆಗಳು ಸಂಪೂರ್ಣ ರೈತಪರವಾಗಿ ಕಾಣುತ್ತವೆ ಆದರೆ ಅವು ಮಲೆನಾಡಭಾಗದ ರೈತರಿಗೆ ಸಿಗುವುದಿಲ್ಲ ಏಕೆ?

 ಸ್ನೇಹಿತರೇ ನಮ್ಮ ಊರಿನಿಂದ ಬಂದವರು ನಾವು ಸಾಕಷ್ಟುಜನರಿದ್ದೇವೆ  ಬೆಂಗಳೂರು ಹಾಗೂ ಮಲೆನಾಡು ಭಾಗದಲ್ಲಿ, ನಿಮ್ಮಲ್ಲೂ ಇಂತಹ ಸಮಸ್ಯೆಗಳು ಇಲ್ಲದೆನಿಲ್ಲ, ಊರಿಗೆ ಹೋದಾಗ ನೀವು ನೋಡಿದ ಇಂತಹಾ ಅವಸ್ಥೆಗಳನ್ನ ಇಲ್ಲಿ ಕಾಮೆಂಟಿಸಿ ನಾನು ಈ ಲೇಖನವನ್ನ ಮಾನ್ಯ ಶಾಸಕರ ಫೇಸ್ ಬುಕ್ ನ ಪ್ರೊಫೈಲ್ನಲ್ಲಿ ಅಂಟಿಸುತ್ತೇನೆ, ನೋಡೋಣ ಇನ್ನೂ ಕೆಲವಾರು ವರ್ಷಗಳಲ್ಲಿಯಾದರೂ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಅಲ್ಲವೇ? ಬರ್ಲಾ?

ದಯ್ಯದ ಹರಕೆ!!

ಜೂನ್ 21, 2011

ನೋಡಿ ಇತ್ತೀಚೆಗೆ ಸಕತ್ ಟೈಮ್ ಸಿಕ್ತಾ ಇರೋದಕ್ಕೂ, ನೀವು ನನ್ನ ಬ್ಲಾಗ್ ವಿಸಿಟ್ ಮಾಡಿ ಪ್ರೋತ್ಸಾಹ ನೀಡ್ತಾ ಇರೋದಕ್ಕೂ ಫುಲ್ ಕುಷಿಆಗ್ತಾ ಇದೆ. ಇವತ್ತು ಸ್ವಲ್ಪ ಹಾಗೆ ಏನಾದ್ರೂ ಮಾತಾಡೋಣ ಅಂತ, ಓಕೆ ಅಲ್ವಾ?  ನಂಗೆ ಈ ತಕ್ಷಣಕ್ಕೆ ಒಂದು ಐಡಿಯಾ ಬಂದಿದೆ ಯಾರು ಹೆಚ್ಚಾಗಿ ದೆವ್ವ, ಭೂತ, ಹೀಗೆ ಹೆದರಿಸೋ ಆರ್ಟಿಕಲ್ಲುಗಳನ್ನ ತಮ್ಮ ಬ್ಲಾಗ್ನಲ್ಲಿ ಪಬ್ಲಿಷ್ ಮಾಡಿಲ್ಲ, ಅಥವಾ ನಾನು ನೋಡಿಲ್ಲ. ಸೋ ನಾನು ಯಾಕೆ ಬಾರಿಬಾರ್ದು ಅಲ್ವಾ?

ನಿಮಗೆ ಗೊತ್ತಿದೆ ಎಷ್ಟೊಂದು ದೆವ್ವ ಭೂತ, ಪಿಚಾಚಿಗಳು, ಹಾಗೆ ಅದು ಇದು ಅಂತ ಮೂವೀಸ್ ಬಂದಿದಾವೆ, ಕಥೆಗಳು , ಕಾದಂಬರಿಗಳು, ಹಾಗೆ ಅಲ್ಲಿ ಇಲ್ಲಿ ಕೇಳಿದ್ದು ಎಲ್ಲ ನಮ್ಮ ಕಿವಿಗೂ ಬೀಳ್ತಾ ಇರ್ತವೆ. ಅದರಲ್ಲಿ ಕೆಲವೊಂದು ನಿಮಗಾಗಿ ಇಲ್ಲಿ ಬರೀತಿನಿ…..ಅದಕ್ಕೂ ಮುಂಚೆ ನಮ್ಮೂರಲ್ಲಿ ದೆವ್ವ, ದೈವ, ದಯ್ಯ ಹೀಗೆಲ್ಲಾ ಕರಿತಾರೆ ನಿಮಗೆ ಯಾವತರ ಅನ್ಸುತ್ತೋ ಹಾಗೆ ಓದಿ..

 ಮೊನ್ನೆ ಟಿ‌ವಿ 9 ಲಿ ತೋರಿಸ್ತಾ ಇದ್ರು ಬೆಂಗಳೂರಲ್ಲಿ ಒಂದು 8 ಮಹಡಿ ಬಿಲ್ಡಿಂಗ್ ಇದ್ಯಂತೆ ಅಲ್ಲಿ ಯಾರು ಹೋಗೋಕೆ ಅಗಲ್ವಂತೆ, ಅದು ಏನು ಅಂತ ನೋಡೋಕೆ ಟಿ‌ವಿ 9 ತಂಡ ಹೋದಾಗ ಭಯಾನಕ ಅನುಭವ ಆಯಿತಂತೆ, ಅದನ್ನು ತೋರಿಸ್ತಿದ್ರು ಅದು ರಾತ್ರಿ ಕಣ್ರೀ ಸ್ವಲ್ಪ ಭಯನೆ ಆಯಿತು ನನಗೂ.. ಎನ್ ಕೇಳ್ತೀರಾ ಆಟೋಮೇಟಿಕ್ ಆಗಿ ಮಾಮೂಲಿ ಬಾಗಿಲು ತೆಗೆದುಕೊಳ್ಳುತ್ತೆ, ನಿಮ್ಮ ಹತ್ತಿರದಲ್ಲೇ ನೆರಳುಗಳು ಒಡಿಯಾಡ್ತವೆ, 1ನೇ ಮಹಡಿಗೆ ಹೋದ್ರೆ 4ನೇ ಮಹಡಿಲಿ, ಹಾಗೆ 4ನೇ ದಕ್ಕೆ ಹೋದರೆ 1ನೆದರಲ್ಲಿ ಯಾರೋ ಭಯಾನಕವಾಗಿ ಅಳುತ್ತಿರುವ ಶಭ್ದ, ಮೆಟ್ಟಿಲುಗಳಿಂದ ಯಾರೋ ಇಳಿದುಕೊಂಡು ಹೋಗ್ತಾ ಇರೋ ಸದ್ದು ಕೇಳಿಸುತ್ತೆ ಅಬ್ಬಾ ನೋಡಿ ಸ್ವಲ್ಪ ನೀರಾದೆ….

 ಮತ್ತೆ ಒಂದು ಮನೆ ಇದೆ ನಮ್ಮ ಊರಲ್ಲಿ ಆ ಮನೆಯ ಯಜಮಾನ್ರು ನಮ್ಮ ಅಪ್ಪನ ಹತ್ರ ನಾವು ಚಿಕ್ಕವರಿದ್ದಾಗ ಬಂದು ಹೇಳ್ತಿದ್ರು, ಅವ್ರ ಮನೇಲಿ ಮರದ ತೊಲೆಗಳ ಮೇಲೆ ಯಾರೋ ಕಂಟಿನಿಯಸ್ ಆಗಿ ಗುದ್ದಿದ ಶಭ್ದ ಕೇಳುತ್ತಿತಂತೆ, ಹಾಗೆ ರಾತ್ರಿ ಒಬ್ಬ ಎತ್ತರದ ಮನುಷ್ಯ ದೀಪ ಹಿಡಿದುಕೊಂಡು ಹಾರಿ ಹೋಗ್ತಾ ಇದ್ದಹಾಗೆ, ಗೇಟಿನಬಳಿ ಯಾವುದೋ ಬಿಳಿ ಸೀರೆಯ ಹೆಂಗಸು ನಿಂತು ಅಳುತ್ತಿರುವ ಹಾಗೆ ಕಾಣಿಸ್ತಿತ್ತಂತೆ,

 ಮನೇಲಿ ಮಲಗಿದ್ರೆ ಮೈತುಂಬಾ ಯಾವುದೋ ಒಂದು ಹಾವು ಹರಿದಾಡಿದ ಅನುಭವ ಆಗಿ ಶಾಂತಿ ಮಾಡಿಸಿದ್ದನ್ನ ನೋಡಿದೀನಿ, ಮನೇಲಿ ನೀರು ಅದಾಗಿ ಅದೇ 5 ನಿಮಿಷದಲ್ಲಿ  ಕೆಂಪು ಬಣ್ಣಕ್ಕೆ ತಿರುಗೋದು, ಏನು ಅಡಿಗೆ ಮಾಡಿದ್ರೂ, ಉಪ್ಪು ಹಾಕದೇ ಇದ್ರು, ತಿಂದಾಗ ಅತಿಯಾಗಿ ಉಪ್ಪಾಗಿ ಊಟಾನೇ ಬಿಟ್ಟು ಏಳಬೇಕು ಹಾಗೆ ಆಗ್ತಿತ್ತು ಅಂತ ಹೇಳ್ತೀದ್ರು,  ಅದನ್ನ ನೋಡೋಕೆ ನಮ್ಮ ಕೆಲವು ಗುರುತು ಪರಿಚಯ ಇರೋರು ಹೋಗಿದ್ರೂ ನಾವು ಬಿಡಿ ತುಂಬಾ ದೈರ್ಯವಂತರು ಹಾಗಾಗಿ ಅಂತ ಸಾಹಸ ಮಾಡಲಿಲ್ಲ.

 ಇನ್ನೂ ನಮ್ಮೂರ ಒಬ್ಬರು ಆಟೋ ರಿಕ್ಷಾ ಓಡಿಸ್ತಾರೆ ಅವ್ರು ರಾತ್ರಿ ಬರಬೇಕಾದ್ರೆ ಒಂದು ಅಜ್ಜಿ  ಡ್ರಾಪ್ ಕೇಳಿದ್ಳಂತೆ ಕೂರಿಸಿಕೊಂಡು ಬಂದು ಸ್ವಲ್ಪ ದೂರದ ನಂತರ ಹಿಂತಿರುಗಿ ನೋಡಿದ್ರೆ ಅವಳಿಲ್ಲ!! ಹೆದರಿದ ಆಟೋ ಡ್ರೈವರ್ ಕೃಷ್ಣಪ್ಪ 7 ದಿನ ಜ್ವರದಿಂದ ಹಾಸಿಗೆ ಹಿಡಿದು, ವಿಜೇಂದ್ರ ಡಾಕ್ಟರ್ ಓವರ್ ಡೋಸೇಜ್ ಮಾತ್ರೆ ಕೊಟ್ಟಮೇಲೆ ಸರಿಯಾಗಿದ್ದು.

ಇನ್ನೂ ಒಂದು ಕಡೆ ಅಂತೂ, ದೆವ್ವ ದಿನಾ ಮನೆಮೇಲೆ ಕಲ್ಲು ಎಸಿತಾ ಇತ್ತಂತೆ, ಮತ್ತೆ ಇನ್ನೊಬ್ಬ ಇದಾನೆ ಅವ್ನಿಗೆ ದೆವ್ವ ಬಂದು ಮೈಯೆಲ್ಲಾ ಬ್ಲೇಡ್ ಇಂದ ಕುಯ್ಯಿದಂತಾ ಗಾಯಗಳು, ಮತ್ತೆ ನಮ್ಮೂರಿನ ಅನುಭವಕ್ಕೆ ಬಂದ್ರೆ ಅಲ್ಲಿ ಯವದಾರು ಜಾನುವಾರು ಕಾಡಲ್ಲೆ ಸತ್ತು ಹೋದ್ರೆ , ಕಾಣೆಯಾದ್ರೆ ಅದನ್ನ ರಣ ಹೊಡೆದಿದೆ ಅನ್ನುವ  ಕನ್ಫರ್ಮ್  ಉತ್ತರ ಸಿಗುತ್ತೆ.

 ರಾತ್ರಿ ನೆಡೆದುಕೊಂಡು ಬರ್ತಿದ್ದ ಗೌಡ್ರಿಗೆ ಯಾರೋ ಹಿಂಬದಿಯಿಂದ ಫಾಲೋ ಮಾಡ್ತಿದಾರೆ ಅಂತ ಅನ್ನಿಸಿ ತಿರುಗಿ ನೋಡಿದ್ರೆ ಯಾರು ಇಲ್ಲ!! ಫುಲ್ ಜ್ವರ ಆವೃಗಂತೂ, ಇನ್ನೊ ಒಂದು ಹೆಜ್ಜೆ ಮುಂದೆ ಹೋಗಿ ರಾತ್ರಿ ಕತ್ತಲಲ್ಲಿ ಯಾರೋ ಬಂದಹಾಗೆ, ಅವರ ಗೆಜ್ಜೆ ಸಪ್ಪಳ ಕೇಳೋದು, ಇವರು ನಿಂತರೆ ಗೆಜ್ಜೆನೂ ನಿಲ್ಲುತ್ತೇ, ಹೊರಟರೆ ಮತ್ತೆ ಅದೇ ನಾಗವಲ್ಲಿ ಗೆಜ್ಜೆ…….

 ಇನ್ನೂ ಕೆಲವು ಕಡೆ ದೆವ್ವದ ಬನಗಳು ಇರ್ತವೆ,  ಅದು ಅಲ್ಲಿನ ಹತ್ತಿರದ ಮನೆಗಳಲ್ಲಿನ ಕೆಲವರಿಗೆ ಭಯಾನಕ ತೊಂದರೆಗಳನ್ನು ಕೊಟ್ಟು ಆಮೇಲೆ ಅದಕ್ಕೆ ಒಂದು ದೇವಸ್ಥಾನ ಕಟ್ಟಿದ್ದು ನೋಡಿದೇನೆ. ಆಮೇಲೆ ಅಲ್ಲಿ ಹರಕೆ, ಹಂದಿ, ಕೋಳಿಬಲಿಗಳು ಸಾಮಾನ್ಯ ಬಿಡಿ. ಕಾಡಿನ ಸ್ವಲ್ಪ ದೂರದಲ್ಲಿ ರೋಡ್ ಇರುತ್ತೆ ಅಲ್ಲೇ ಒಂದು ಕಲ್ಲು, ಅದರ ಬಳಿ ರಾತ್ರಿ ನೆಡೆದು ಹೋದರೆ ಜಾರಿ ಬೀಳೋದು, ಉಸಿರುಕಟ್ಟಿದಹಾಗೆ ಆಗೋದು ಇದೆಲ್ಲ ಇದೆ ಕೇಳಿದೀರಾ ಅಲ್ವಾ?

 ಇನ್ನೂ ಬಿಡಿ ವಾಮಚಾರಿಗಳಬಗ್ಗೆ ಹೇಳೋದೇ ಬೇಡ ರವಿಬೇಳೆಗೆರೆಯವರ “ಸರ್ಪ ಸಂಭಂದ” ಓದಿ ಮೂರು ದಿನ ಊಟದ ಖರ್ಚು ಉಳಿಸಿದ ಕೀರ್ತಿ ಅವರಿಗೆ ಸಲ್ಲಬೇಕು, ಅದು ಅಲ್ಲದೆ ವಾಮಾಚಾರಿಗಳಿಗೆ ಫೇಸ್ಬುಕ್  ಅಕೌಂಟ್ ಇದ್ದರೆ ಬರೀ ದೆವ್ವಗಳೆ  ಫ್ರೆಂಡ್ಸ್ ಇರ್ತಾರೆನೋ ಅಲ್ವಾ? ದೆವ್ವಗಳ ಲೈಕು, ಕಾಮೆಂಟು, ವಿಡಿಯೋ, ಅಯ್ಯೋ ಬಿಡಿ ಯಾಕೆ ಅದೆಲ್ಲ ನಮಗೆ…

 ಇನ್ನೂ ನಮ್ಮ ಮನೆ ಹತ್ರ ಒಬ್ಬರಿಗೆ ಯಾರೋ ಯಾವಗ್ಲೂ ಮಾಟ ಮಾಡ್ಸೋದು ಕಣ್ರೀ, ಮಾಟ ಮಾಡಿದ ಸ್ವಲ್ಪ ದಿನದಲ್ಲೆ ಇವರ ಎಮ್ಮೆ, ಇಲ್ಲಾ ದನ ಸತ್ತು ಬೀಳೋದು, ಇವರು ಮತ್ತೆ ಮರು ಮಾಟ ಮಾಡೋಕೆ ಕೇರಳಕ್ಕೆ ಹೋಗೋದು ಇದೆಲ್ಲ ಗುಸು ಗುಸು ಸುದ್ದಿ.

 ಪಂಜುರ್ಲಿ, ಜಟಿಕ, ಊರ ಮಾರಿ, ರಣ, ಕೆಂಬತ್ತ, ಇನ್ನೂ ಏನೇನೋ ಹೆಸರುಗಳು ಇವು ಊರ / ಗ್ರಾಮ ದೇವತೆಗಳು, ಕೆಲವೊಂದು ಮಾತ್ರ ಅದರಲ್ಲಿ ಸ್ವಲ್ಪ ಕುಟುಂಬಗಳಿಗೆ ಮಾತ್ರ ಸೇರಿರ್ತವೆ. ಇದನ್ನ  ದೆವ್ವ ಅಂತೀರಾ, ದೇವರು ಅಂತೀರಾ? ಬೇಡ ಬಿಡಿ ಅವರವರ ನಂಬಿಕೆಗೆ ಬಿಟ್ಟ ವಿಷ್ಯ, ಸುಮ್ನೆ ಯಾಕೆ ವಿವಾದ.

ಇನ್ನೂ ಕೆಲವರಿಗೆ ವಯಕ್ತಿಕವಾಗಿ ದೆವ್ವಗಳ ಕಾಟ, ಮೈಮೇಲೆ ಬರೋದು, ನೋಡೋಕೆ ಹಗಲು ಹೊತ್ತೆ ಭಯಾನಕವಾಗಿ ಕಾಣೋ ವ್ಯಕ್ತಿಗಳು ಇದ್ದಾರೆ ಅವರನ್ನ ಗಣಮಗ ಅಂತ ಕರಿತಾರೆ ನಮ್ಮ ಕಡೆ ಹಾಗೆ “ಅವನಿಗೆ ಗಾಳಿ ಸೋಕಿದೆ ಆಂತಾರೆ, ಇನ್ನೂ ಇಲ್ಲಿ ಭೂತ ಕೋಲ ಅನ್ನುವ ದಕ್ಷಿಣ ಕನ್ನಡದ ವಿಶಿಷ್ಟ ಸಂಪ್ರದಾಯದ ಬಗ್ಗೆ ಬರ್ದಿಲ್ಲ ಯಾಕಂದ್ರೆ ಅದು ಅಲ್ಲಿಯ ಜನರ ನಂಬಿಕೆ ಮತ್ತೆ ಹೆಚ್ಚಾಗಿ ಅವರು ತೊಂದರೆಗಳಲ್ಲಿ ಸಿಲುಕಿದಾಗ ದೇವರಿಗಿಂತ ದೆವ್ವ (ದೈವ)ಗಳಿಗೆ ಮೊರೆ ಹೋಗ್ತಾರೆ ಅಂತ ನಂಬಿಕೆ ಬಗ್ಗೆ ಹೇಳೋದು ಬೇಡ ಅನ್ನಿಸ್ತಿದೆ ಅದು ದಕ್ಷಿಣ ಕನ್ನಡದವರ ಅನುಭವಗಳನ್ನ ಕೇಳಿದ್ರೆ ಒಂದು ಗ್ರಂಥನೇ ಬರಿಬೋದು…..

ನಾವು ಚಿಕ್ಕವರಿದ್ದಾಗ ಪ್ಯಾರಳೆ ಮರ ಹತ್ತಿ ಅಲ್ಲಿನ ಕಾಯಿಗಳನ್ನ ತಿನ್ನೋ ಅಭ್ಯಾಸ, ಅಲ್ಲಿ ಅಪರೂಪಕ್ಕೆ ನಮ್ಮ ಕಣ್ಣಿಗೆ ಕಾಣದ ಒಂದು ಹಣ್ಣು ಇದ್ದು ಅದನ್ನ ಹಕ್ಕಿಗಳು ಅರ್ಧ ತಿಂದಿದ್ದದ್ದನ್ನ ನಾವು ಮನೆಗೆ ತಂದರೆ ಕಥೆ ಮುಗೀತು ಅಮ್ಮ ಫುಲ್ ಹೆದುರ್ಸ್ತಿದ್ರು ಅದು ದೆವ್ವ ತಿಂದಿರೋ ಹಣ್ಣು, ತಿನ್ನಬೇಡ ಅಂತ!! ಇನ್ನೂ ಮರಹತ್ತಿ ಬಿದ್ದರೆ ಅಂತೂ ದೆವ್ವದ ಕಾಟ ಇತ್ತು ಸೋ ಅದು ಎಳೆದು ಕೆಳಗಡೆ ಹಾಕಿ ಸರಿಯಾಗಿ ಏಟು ಮಾಡಿದೆ ಅಂತ ಮಂತ್ರ, ತಂತ್ರ, ತಾಯತ, ಎಲ್ಲ ನಮ್ಮ ಹಣೆ, ಕುತ್ತಿಗೆಗಳನ್ನ ಆವರಿಸ್ತಿದ್ವು.

ದೆವ್ವಗಳನ್ನ ಎದಿರು ಹಾಕ್ಕೊಂಡ್ರೆ ಅದಕ್ಕೂ ಭಲವಾದ ಶಿಕ್ಷೆ ಇದೆ ಅಂತ ಜನ ನಂಬುತ್ತಾರೆ, ರಕ್ತ ಕಾರಿ ಸಾಯಿತಾರೆ, ಅನ್ನ ನೀರು ಕೊಡಿಯೋಕೆ ಆಗ್ದೆ ಸಾವು, ಕಾಡಿಗೆ ಹೋದಾಗ ಹೊಡೆದು ಹಾಕುತ್ತೆ, ಮನೆ ಜಾನುವಾರುಗಳು ಮಟ್ಯಾಷ್!! ಹೀಗೆ ಇನ್ನೂ ಏನೇನೋ.ಅದಕ್ಕೆ ನಂಗೆ ಅನ್ನಿಸೋದು ನಮ್ಮ  ರಾಜಕಾರಣಿಗಳು ಇತ್ತೀಚೆಗೆ ಆಣೆ ಭಾಷೆ ಶುರುಮಾಡಿದ್ದರಲ್ಲ ದೇವರ ಬಳಿ ಮಾಡ್ಸೋದಕ್ಕಿಂತ ದೆವ್ವಗಳ ಬಳಿ ಮಾಡ್ಲಿ, ಸಕತ್ ಶಿಕ್ಷೆ!! ಒಟ್ಟಿಗೆ ಆಣೆ ಮಾಡಿದ ಎರಡೂ ಪಾರ್ಟಿಗಳು ನೆಗದು ಬಿದ್ದು ಹೋಗ್ಲಿ ಎನಂತೀರ?

 ನೀವು “ನಾಳೆ ಬಾ” ದೆವ್ವದ ಬಗ್ಗೆ ಕೇಳಿದೀರಾ? ನಾನು ಸಣ್ಣವನಿರುವಾಗ ಕೆಲವು ಸೈಟ್ ಮನೆಗಳ ಬಾಗಿಲುಗಳ ಮೇಲೆ ಇದನ್ನ ಬರೆದಿರ್ತಿದ್ರು, ದೆವ್ವ ಬಂದ್ರೆ ಅದಕ್ಕೆ ಕನ್ನಡ ಓದೊಕೆ ಬರುತ್ತಾ? ಎಜುಕಟೆಡ್ ದೆವ್ವಗಳು ಇದಾವ ? ಅಥವಾ ಈ ಸರ್ಕಾರಿ ಅಧಿಕಾರಿಗಳು ಸತ್ತು ಹೀಗೆ ದೆವ್ವಗಳಾಗಿದ್ದಾರಾ? ಇದೆಲ್ಲ ಉತ್ತರ ಸಿಗದ ಪ್ರಶ್ನೆಗಳು. ಹೋಗ್ಲಿ ಸಧ್ಯ ದೆವ್ವ ಬಂದ್ರೆ ಓಕೆ. ಮನೇಲಿ ಯಾರು ಇಲ್ಲದಿದ್ದಾಗ ನೆಂಟರೊಬ್ಬರು ಬಂದ್ರೆ ಅವರ ಕಥೆ ಏನು? ಬಾಗಿಲು ನೋಡಿ ನಾಳೆ ಬಾ…?!!!

 ಇನ್ನೂ ಮಜಾ ಏನು ಗೊತ್ತ ನಮ್ಮ ಊರಲ್ಲಿ ಹಳೆಯಕಾಲದಲ್ಲಿ ಎತ್ತಿನ ಗಾಡಿಗಳು ಇದ್ವು, ಈಗ ಇಲ್ಲ ಬಿಡಿ, ಆವಾಗ ಅಪ್ಪ ಮತ್ತೆ ಮಗ  ಅಮಾವಾಸ್ಯೆಯ ರಾತ್ರಿಯಲ್ಲಿ ಗಾಡಿ ಹೊಡ್ಕೊ0ಡು ಮನೆಗೆ ಬರುವಾಗ ಹಿಂದಿನಿಂದ ಯಾವುದೋ ನೆರಳು ಡ್ಯಾನ್ಸ್ ಮಾಡಿದಹಾಗೆ ಕಾಣಿಸ್ತಾ ಇತ್ತಂತೆ, ಅಪ್ಪ ಹೌಹಾರಿ ಹೋದ, ಆದರೆ ಸ್ವಲ್ಪ ಬುದ್ಧಿವಂತನಾದ ಮಗ ಗಾಡಿ ನಿಲ್ಲಿಸಲು ಹೇಳಿ ಸರಿಯಾಗಿ ನೋಡಿದ್ರೆ ಗಾಡಿಗೆ ಕಟ್ಟಿದ ಲಾಟೀನ್ ದೀಪದ ಬೆಳಕು ನೆರಳಿನ ಆಟ ಅಂತ ಗೊತ್ತಾಯಿತು!!

 ದೇವಸ್ಥಾನಗಳು ಎಷ್ಟು ಇದಾವೋ ಅದರ ಅರ್ಧದಷ್ಟು ದೆವ್ವಗಳ ಅಂದರೆ ದೈವಗಳ ಗುಡಿ ಬನಗಳೂ ಇವೆ ಅಲ್ವಾ? ದೇವರು ಅನ್ನುವ ಆಪಥ್ಬಾಂದವನ ನಡುವೆಯೇ ಇಂತ ದೆವ್ವಗಳು ನೀಡುವ ಶೀಘ್ರ ಪರಿಹಾರದ ನಂಬಿಕೆಇಂದಾಗಿಯೇ ಹೆಚ್ಚಿನ ಅಸ್ತಿತ್ವಕ್ಕೆ ಕಾರಣನೆನೋ ಅಲ್ವಾ? ಹಾಗೆ ಇವುಗಳ ಹೆಸರು ಬಳಸಿ ಮೋಸ ಮಾಡುವ, ಹೆದರಿಸಿ ದುಡ್ಡು ಮಾಡುವ ಕ್ಷುದ್ರ ಮನಸ್ಸುಗಳು ಇದ್ದವೇ ಅನ್ನೋದು ವಿಪರ್ಯಾಸ..

 ದೇವರು, ದೈವ, ದೆವ್ವ, ಇವುಗಳ ಇರುವಿಕೆಯ ಹುಡುಕಾದಲ್ಲಿ, ಈ ವಿಸ್ಮಯಗಳು, ವಿಚಿತ್ರಗಳ ನಡುವೆ ಕಾಡುವ ಒಂದೇ ಒಂದು ಪ್ರಶ್ನೆ ಹೀಗೂ ಊಂಟೇ?” (ಟಿ‌ವಿ 9 ನಾರಾಯಣ ಸ್ವಾಮಿ ಸ್ಟೈಲ್ ಅಲ್ಲಿ ಓದಿ ಮಜಾ ಬರುತ್ತೆ )ಅದೇನೇ ಇರಲಿ ಇದೆಲ್ಲ ನಾನು ಕೇಳಿದ ಸುದ್ದಿಗಳು ಅಷ್ಟೇ, ತುಂಬಾ ಸೀರಿಯಸ್ ಆಗಿ ಓದಿ ತಲೆ ಕೆಡಿಸಿಕೊಳ್ಳಬೇಡಿ, ಹಾಗೆ ನಿಮಗೆ ಕೇಳಿರೋ ಗಾಳಿ ಸುದ್ದಿ , ಇಂತ ಕಥೆಗಳು ಇದ್ರೆ ನಂಗೂ ಹೇಳಿ ನಮ್ಮ ಮ್ಯಾನೇಜರ್ ಯಾಕೋ ಸಂಬಳ ಜಾಸ್ತಿ ಮಾಡ್ತಿಲ್ಲ ಅವ್ನಿಗೆ ಈ ಕಥೆ ಹೇಳಿ ಹೆದರಿಸಿ ಕೆಲ್ಸ ಮಾಡ್ಕೊಳ್ಳೋ ಕೊನೆ ಪ್ರಯತ್ನ ಮಾಡ್ತೀನಿ….ಬರ್ಲಾ..?

ನಮ್ಮೂರಲ್ಲಿ ಮಳೆಗಾಲ!!

ಜೂನ್ 2, 2011

ಮತ್ತೊಮ್ಮೆ  ಮಲೆನಾಡು, ಅಲ್ಲಿ ಮಳೆಗಾಲ, ನೆರೆ, ಗಾಳಿ, ಎಲ್ಲ ನೆನಪಾಯಿತು, ಹಾಗಾದಮೇಲೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕೆಂಬ ತವಕ.

 ತುಂಬಾ ಸುಂದರ ಅಲ್ವಾ? ನಮ್ಮ ಮಲೆನಾಡು ಮಳೆಗಾಲ ಶುರುವಾಯ್ತು ಅಂದ್ರೆ? ನಮ್ಮೆಲ್ಲ ರೈತಬಾಂದವರಿಗೆ ಮೈತುಂಬಾ ಕೆಲಸ ಶುರುವಾಗಿಬಿಡುತ್ತೆ, ಅಗಡಿ ಮಾಡಬೇಕು ಬೇಲಿ ಹಾಕಬೇಕು ಗದ್ದೆಗೆ ಗೊಬ್ಬರ ಸಾಗಿಸಬೇಕು, ಅದನ್ನ ಬಿಕ್ಕಬೇಕು, ನೆಲ ಹೂಡಬೇಕು, ಆಮೇಲೆ ಮತ್ತೆ ಕೆಲಸದವರಿಗಾಗಿ ಪರದಾಟ, ಬಿತ್ತನೆ ಬೀಜ ತರಬೇಕು, ಮೊಳಕೆ ಬರಿಸಬೇಕು, ನೆಟ್ಟಿ ಕೆಲಸ ಶುರುಮಾಡಬೇಕು ಅದಕ್ಕೂ ಮುಂಚೆ ಶೃಂಗೇರಿಗೆ ಹೋಗಿ ಒಂದು ಒಳ್ಳೆಯ ಕಂಬಳಿ ಕೊಳ್ಳಬೇಕು ಅದರ ಕಸೆ ಕಟ್ಟಬೇಕು. ನೆಟ್ಟಿಗೆ ಟಿಲ್ಲರ್ ಒಂದನ್ನ ಹುಡುಕಿ ಅದರ ಒಡೆಯನಿಂದ ದಿನಾಂಕ ನಿಗದಿಪಡಿಸಿಕೊಂಡು ಅಂದೆ ಎಲ್ಲಾ ಕೆಲಸದವರನ್ನ ಒಟ್ಟುಗೂಡಿಸಬೇಕು.ಮತ್ತೆ ನೆಟ್ಟೆ ಮಾಡಬೇಕು, ಗದ್ದೆಗೆ ಹೊಸ ಅಂಚು ಹಾಕಬೇಕು, ಪ್ರತಿದಿನ ಅದನ್ನ ಮಕ್ಕಳಂತೆ ನೋಡಿಕೊಳ್ಳಬೇಕು ಗದ್ದೆಗೆ ನೀರು ಹೆಚ್ಚಾದರೂ ಕಷ್ಟ ಕಡಿಮೆಯಾದರೂ ಕಷ್ಟ …….

 ಇನ್ನೂ ತೋಟದ ಕಳೆ ಕೀಳಬೇಕು, ಔಷದಿ ಹೊಡೆಯುವರನ್ನ ಕರೆಸಬೇಕು, ಮಳೆಜಾಸ್ತಿ ಇದ್ದರೆ 2 ಅಥವಾ 3 ಬಾರಿ ಔಷದಿ ಹೊಡೆಸಬೇಕಾಗಬಹುದು.ಮತ್ತದೇ ಪಸಲಿಗಾಗಿ ಹೋರಾಟ, ಕಾಯುವಿಕೆ, ಒಳ್ಳೆಬೆಲೆಯ ನೀರಿಕ್ಷೆ ಎಷ್ಟೊಂದು ಕೆಲ್ಸ ಅಲ್ವಾ?

 ಮತ್ತೆ ನಮ್ಮೂರಲ್ಲ೦ತೂ ಮಳೆಗಾಲ ಒಂದು ಸುಂದರ ಅನುಭವ ಪ್ರತಿವರ್ಷ, ಮೊದಲು ಸರಿಯಾದ ಗಾಳಿ ಮಳೆ, ಆನಂತರ ತೋಟದ ಅಡಿಕೆಮರಗಳು ನೆಲಕಚ್ಚುವ ಭಯ, ಮಳೆಗಾಲ ಇಡೀ ಹಳ್ಳಿಗಳಲ್ಲ೦ತೂ ಕರೆಂಟ್ ನ ಸಮಸ್ಯೆ, ಅದರ ಮಧ್ಯದಲ್ಲೂ ಒಂದು ತೆರನಾದ  ಮಜಾ.

 ಮಳೆಗಾಲ ಶುರುವಾಯ್ತು ಅಂದ್ರೆ ಹುಡುಗರಿಗೆ ಹೊಸ ಛತ್ರಿ ಆಗಬೇಕು ಅದು ಬಟನ್ ಛತ್ರಿ!! ಜೋರಾಗಿ ಗಾಳಿಬೀಸಿದರೆ ಅದು ತಲೆಕೆಳಗಾಗಿ ಕೊಡುವ ತೊಂದರೆ ಮಳೆಯಲ್ಲಿ ಬ್ಯಾಗುಗಳು ಅದರೊಳಗಿನ ಪುಸ್ತಕಗಳು ನೆಂದು ಹೋದರಂತೂ ಎಲ್ಲಿಲ್ಲದ ಭಯ ನಾಳೆ ಮೇಷ್ಟ್ರು ಹೊಡೆದು ಬಿಟ್ರೆ?, ಆದರೂ ಅದೇ ಬೇಕು. ಪ್ಯಾಂಟ್ ಅರ್ಧ ಒದ್ದೆಯಾಗಿ ಕ್ಲಾಸ್ ರೂಮಿನಲ್ಲೇ ಒಣಗಬೇಕು ಅದು ಒಣಗುವುದೊರಳಗಾಗಿ ಸಂಜೆ ಆಗಿ ಸ್ಕೂಲ್ ಬಿಟ್ಟು ಮನೆಕಡೆ ಹೊರಡಬೇಕು ಮತ್ತದೇ ಮಳೆ ಒದ್ದೆ ಪ್ಯಾಂಟು….ಮನೆಗೆ ಬಂದರೆ ಮಧ್ಯನದ ಬುತ್ತಿಯಿಂದ ಹೊಟ್ಟೆ ತುಂಬಿರುವುದಿಲ್ಲ ಅನ್ನುವುದನ್ನು ಅರಿತ ಅಮ್ಮ ತಟ್ಟೆ ಇಟ್ಟು ಊಟಕ್ಕೆ ರೆಡಿ ಮಾಡಿರ್ತಾರೆ, ಅಡಿಗೆ ನೋಡಿದ್ದ್ರೆ ಅದೇ ಸೌತೆಕಾಯಿ ಹುಳಿ (ಸಾಂಬಾರು) , ಯಾಕಂದ್ರೆ ಮಳೆಗಾಲದ ಮುಂಚೆ ಗದ್ದೆ ಸೌತೆಕಾಯಿಯನ್ನ ಶೇಕರಿಸಿಟ್ಟುಕೊಂಡು ಅದನ್ನೇ  ಮಳೆಗಾಲ ಮುಗಿಯುವವರೆಗೂ ಊಣಬಡಿಸುವ ಹರಕೆ ಮಾಡಿರ್ತಾರೇನೋ ಅಮ್ಮಂದಿರು ಅಲ್ವಾ?  ಯವತ್ತಾದ್ರು ಪತ್ರವೊಡೆ ಪಲ್ಯಾ ಮಾಡಿದ್ದಾರೆ ಅಂತ ಗೊತ್ತಾದ್ರೆ ಕ್ಲಾಸಲ್ಲೆಲ್ಲ ಅದೇ ಯೋಚನೆ ಅದೆಷ್ಟು ರುಚಿ ಮುಂಡೆದು ….

 ಆದ್ರೆ ಸ್ವಲ್ಪ ಯೋಚನೆ ಮಾಡಿ, ಆ ಹಲಸಿನ ಹಪ್ಪಳ, ಹಲಸಿನ ಚಿಪ್ಸ್  ಅದರೊಂದಿಗೆ ಅಮ್ಮ ಮಾಡಿದ ಬಿಸಿ ಬಿಸಿ ಕಾಪಿ (ನಮ್ಮಲ್ಲಿ ಹಾಲಿಗೆ ಡಿಕಾಕ್ಷನ್ ಹಾಕೋದು ಕಡಿಮೆ ಡಿಕಾಕ್ಷನ್ ಅನ್ನೋ ಬೆಲ್ಲ ಹಾಗೂ ಕಾಫಿ ಪುಡಿ ಮಿಶ್ರಿತ ನೀರಿಗೆ (?) ಹಾಲು ಹಾಕ್ತಾರೆ ಅದಕ್ಕೆ ನಾನು ಅದನ್ನ ಕಾಪಿ ಅನ್ನೋದು ಕಾಫಿ ಆನ್ನಲ್ಲ )ಇದೆಲ್ಲವೂ ಇದ್ರೆ ಅದೃಷ್ಟಕ್ಕೆ ಕರೆಂಟು ಇದ್ರೆ ಟಿ‌ವಿ ನೋಡ್ತಾ ಸವಿಯುತ್ತಾ ಇದ್ರೆ ಅದರ ಮಜಾನೆ ಬೇರೆ ಬಿಡಿ. ಆದ್ರಲ್ಲೂ ಹೊಂವರ್ಕ್ ಮಾಡೋಕೆ ಸೀಮೆಯೆಣ್ಣೆಯ ಚಿಮಣಿಯೇ ಗತಿ ಅದರ ಹೊಗೆಯೋ ಯಾವುದೇ ಕಾರ್ಖಾನೆಯ ಹೊಗೆಗೇನೂ ಕಮ್ಮಿ ಇರಲ್ಲ. ಇದೆಲ್ಲ ಮುಗಿಸಿ ರಾತ್ರಿಯ ಊಟ ಮುಗಿಸಿ ತಣ್ಣಗೆ ರಗ್ಗು, (ಅಭ್ಯಾಸ ಇರೋರು ಪೆಗ್ಗು ಎಂದು ಓದಿಕೊಳ್ಳಿ) ಏರಿಸಿಕೊಂಡು ಮಲಗಿದರೆ ಮರುದಿನವೇ ಎಚ್ಚರ ಆಗೋದು.

 ಇನ್ನೂ ಮಜಾ ಅಂದ್ರೆ ಹಲಸಿನ ಬೀಜಗಳದ್ದು ಅದನ್ನ ಒಲೆಯ ಒಳಗಡೆ ಹಾಕಿ ಬೂದಿಯಲ್ಲಿ ಬೇಯಿಸಿ ತಿನ್ನೋದು, ಬೇಯಿಸುವಾಗ ಮಧ್ಯದಲ್ಲಿ ಅದು ಬಾಂಬಿನತೆ ಸ್ಪೋಟಗೊಂಡರೆ ಸುತ್ತ ಬೂದಿ ಹಾರಿ ಅಮ್ಮನಿಂದ ಬೈಗುಳ ಬೇರೆ.

 ಮಳೆಗಾಲದ ವಿಶೇಷ ಹಣ್ಣುಗಳು ಹುಡುಗರ ಪಾಲಿನ ಸಿಹಿತಿನಿಸುಗಳು ,

ಕಲ್ಲುಸಂಪಿಗೆ: ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿ ಕೆಲ್ವಂದರಲ್ಲಿ ಹುಳ ಆಗಿರ್ತವೆ  ನೋಡಿಕೊಂಡು ತಿನ್ನಬೇಕು.

ರಂಜದ ಹಣ್ಣು: ತಿಂದರೆ ಬಾಯಿತುಂಬಾ ಹಿಟ್ಟು ಹಿಟ್ಟಿನ ಅನುಭವ.

ಕಾಡು ನೇರಳೆ: ಕೈಗೆಟುಕುವಂತೆ ಹಣ್ಣಾಗಿರುತ್ತವೆ ಜಾಸ್ತಿ ತಿಂದರೆ ಶೀತ ಗ್ಯಾರಂಟಿ!!

ಹೆಬ್ಬಲಸು: ಚಿಕ್ಕ ಹಲಸಿನ ಹಣ್ಣಿನಂತೆ ಇರೋದು ಆದರೆ ಬೀಜವನ್ನ ಬೇಯಿಸಿಕೊಂಡು ತಿಂದರೆ ಮಜಾ..

ಪೇರಲೆ ಹಣ್ಣು: ಚಿರ ಪರಿಚಿತ ಹಣ್ಣು.

ಹಲಸಿನ ಹಣ್ಣು : ಬಕ್ಕೆ ಹಾಗೂ ಬೆಳುವ ಅನ್ನುವ ೨ ರೀತಿ. ಬೆಳುವದ ಸೊಳೆಗಳು ಅತಿಯಾಗಿ ಮೃದುವಾಗಿದ್ದರೆ ಬಕ್ಕೆಯ ಹಣ್ಣುಗಳು ಸ್ವಲ್ಪ ಬಿಡಿಸಲು ಬರುವಷ್ಟು ಮೆತ್ತಗೆ.

ಕಾಡು ಮಾವು : ಕೆಲವೊಂದು ಹುಳಿ, ಕೆಲವೊಂದು ಸಿಹಿ ಅತಿಯಾಗಿ ತಿಂದು ಹೊಟ್ಟೆನೋವು ಮಾಡಿಕೊಂಡ ನೆನಪುಬಂದಾಗಲೆಲ್ಲ ಮಾವಿನ ಹಣ್ಣಿನಿಂದ ದೂರ ಓಡಿಬಿಡಬೇಕೆನಿಸುತ್ತದೆ ಈಗಲೂ!!

ಹಿಪ್ಪಲಿ ಹಣ್ಣು: ಸಕತ್ ಹುಳಿ ಇದಂತೂ………

ಬೆಂಬಾರಳ ಹಣ್ಣು: ಒಂದು ರೀತಿಯ ಕಾಡು ಹಣ್ಣು

ಪನ್ನೇರಳ ಹಣ್ಣು: ನಮ್ಮ ಮನೆಯಕಡೇ ಸಕತ್ ಅಪರೂಪವಾಗಿದೆ ಇದು.

ಗೇರು ಹಣ್ಣು : ಸರಿಯಾಗಿ ಹಣ್ಣಾಗದ್ದನ್ನ ತಿಂದರೆ ಗಂಟಲ ತುರಿಕೆ ಗ್ಯಾರಂಟಿ.

ನೆನಪಿದೆಯಾ? ಈ ಎಲ್ಲಾ ಹಣ್ಣುಗಳ ಸವಿಯನ್ನ ಅತಿಯಾಗಿ ಸವಿದು ಜ್ವರ ಶೀತ ಮಾಡಿಕೊಂಡು ಡಾಕ್ಟರ್ ಹತ್ರ ಇಂಜೆಕ್ಷನ್ ತಗೊಂಡಿದ್ದು? ಸ್ಕೂಲಿಗೆ ಚಕ್ಕರ್ ಹೊಡೆದದ್ದೂ? ಇನ್ನಂತೂ ನೆರೆ ಬಂದರೆ ಮನೆಯವರಿಗೆ ಎಲ್ಲಿ ಗದ್ದೆಯಲ್ಲಿ ಹುಗುಳು (ಹೊಂಡ) ಹೋಗುತ್ತೋ ನೆಟ್ಟಿ ಕೊಚ್ಚಿಕೊಂಡು ಹೋಗುತ್ತೋ , ಅಥವಾ ತೋಟಕ್ಕೆ ಕೊಳೆರೋಗ ಬರುತ್ತೇನೋ ಅಂತೆಲ್ಲ ಭಯ ಆದ್ರೆ ನಮ್ಮ್ ಹುಡುಗರಿಗೆ ಫುಲ್ ಮಜಾ, ಶಾಲೆಗೆ ರಜಾ.ಮಧ್ಯದಲ್ಲಿ ನೆರೆ ಬಂದಿದ್ದನ್ನ ನೋಡೋಕೆ ಹೋಗೋದು ನೋಡಿಬಂದು ಎಲ್ಲರಿಗೂ ಹೇಳೋದು ಆಹಾ ಚೆನ್ನಾಗಿರುತ್ತೆ ……

ಅವರಿವರ ಮನೆ ಮಾವಿನ ಮರ ಹತ್ತಿ ಬೈಸಿಕೊಳ್ಳೋದು, ಸ್ವಲ್ಪ ತುಂಬಿದ ಹಳ್ಳ ದಾಟೋದು, ಹೊಸ ಅಂಚು ಹಾಕಿದ ಗದ್ದೆಮೇಲೆ ನೆಡೆದು ಜಾರಿಬಿದ್ದು ಎದ್ದು ಮನೆಗೆ ಹೋಗೋದು, ಜಾರುತ್ತೆ ಅಂತ ಗೊತ್ತಿದ್ದೂ  ಮರಹತ್ತಿ ಬಿದ್ದು ಏಟು ಮಾಡಿಕೊಂಡ್ರೆನೇ ಮಳೆಗಾಲ ಸಾರ್ಥಕವಾಗ್ತಿದ್ದಿದ್ದು  ನಮ್ಮ  ಸ್ಕೂಲ್ ದಿನಗಳಲ್ಲಿ ಗೊತ್ತ?

ಮಳೆಗಾಲದಲ್ಲಿ ಶಾಲೆಗೆ ರಜೆ ಇದ್ದರೆ ಅಡೊ ಚೆನ್ನೆ ಮಣೆ, ಹಾವು ಏಣಿ, ಚದುರಂಗ, ಮನೆ ದೊಡ್ಡಡಿದ್ರೆ ಕದ್ದು ಕೂರುವ ಆಟ ಇದೆಲ್ಲ ಚಿಕ್ಕಮಕ್ಕಳಿಗೆ…..

ಈ ವರ್ಷವೂ ಮಳೆಗಾಲ, ತಂಗಾಳಿ ,ನಮ್ಮಮಲೆನಾಡ ಮೇಲಂತೂ ವರುಣನ ವರ್ಷ ಸಿಂಚನ ಶುರುವಾಗಿ ಬಿಟ್ಟಿದೆ, ಹೀಗಿರುವಾಗ ನಮ್ಮೆಲ್ಲ ರೈತ ಭಾಂಧವರು ಕೆಲಸ ಶುರುಮಾಡಿದ್ದಾರೆ ಹಾಗೆ ಹುಡುಗರಿಗೆ ಶಾಲೆ ಶುರುವಾಗಿದೆ ಅವರಿಗೆಲ್ಲ ನಮ್ಮ ನಿಮ್ಮ ಕಡೆಯಿಂದ ಆಲ್ ದಿ ಬೆಸ್ಟ್ ಹೇಳೋಣ ಅಲ್ವಾ?  ಮತ್ತೊಮ್ಮೆ ಬರ್ತೀನಿ. (ಸೂಚನೆ :ಇದನ್ನ ನೋಡಿ ಹಲಸಿನ ಬೀಜ ಸುಟ್ಟು ಅದು ಹೊಟ್ಟಿ, ಅಥವಾ ಜಾಸ್ತಿ ತಿಂದು ಗ್ಯಾಸ್ ಪ್ರಾಬ್ಲಮ್ ಆದ್ರೆ ನಾನಂತೂ ಕಾರಣ ಅಲ್ಲಪ್ಪ )

ನಮ್ಮೂರು ಈಗ!!

ಫೆಬ್ರವರಿ 28, 2011

ಮತ್ತೆ ಎನ್ ಸಮಾಚಾರ? ಹೇಗಿದ್ದೀರಿ? ಈ ಸಲಾನು ತುಂಬಾ ದಿನಗಳಾದಮೇಲೆ ಬರೀತಾ ಇದೀನಿ ಅಂತ ಸಿಟ್ಟು ಇಲ್ಲ ತಾನೇ? ನಂಗೆ ಗೊತ್ತು  ನೀವು ನನ್ನ ಕ್ಲೋಸ್ ಫ್ರೆಂಡು ಅಂತ…….. ಆದ್ರೆ ಈಸಲ ನಾನು ತುಂಬಾ ಸೀರಿಯಸ್ ಮ್ಯಾಟರ್ ನೇ ಡಿಸ್ಕಸ್ಸ್ ಮಾಡೋಕೆ ಬಂದಿದೀನಿ…….

ಮೊನ್ನೆ ಊರಿಗೆ ಹೋಗಿದ್ದೆ ಮತ್ತೆ ನಿದಾನವಾಗಿ ಶುರು ಆಗ್ತಿರೋ ಶಕೆ, ಹೂ ಬಿಟ್ಟ ಮಾವಿನಮರಗಳು,  ಹಸಿರುಟ್ಟ ಹಲಸು, ಚಳಿಇಂದ ಕೊಡವಿಕೊಂಡು ಮೇಲೆದ್ದ ನೆನಪುಗಳನ್ನು ಒಮ್ಮೆ ಮುದ್ದಿಸುವ ಬಯಕೆ ಇಂದಹೋಗಿದ್ದು…ಆದ್ರೆ ತುಂಬಾ ಬೇಜಾರು ಆಗುವಂತ ವಿಷ್ಯಗಳು ನಮ್ಮ ಮಲೆನಾಡಲ್ಲಿ ನೆಡಿತಿವೆ ಅಂತ ಕೇಳಿ ಮನಸಿಗೆ ತುಂಬಾನೇ ನೋವಾಯಿತು..

ನಮ್ಮ ಯಡಿಯೂರಪ್ಪ ನವರ ಸರ್ಕಾರ ಕೊಟ್ಟೆ(ಸಾರಾಯಿ ) ಬ್ಯಾನ್ ಮಾಡಿರೋದು ನಿಮ್ಗೆ ಗೊತ್ತಿರೋ ವಿಚಾರ ಅಲ್ವಾ? ಆದ್ರೆ ನಮ್ಮ ಮಲೆನಾಡಲ್ಲಿ “ಕಳ್ಳ ಬಟ್ಟಿ ಯನ್ನತಯಾರ್ಸೋಕೆ ಅಂತ ಹೊಸ ಕಂಪನಿಗಳು ಶುರುವಾಗಿದೆ  ಗೊತ್ತ? ……ಮಲೆನಾಡ ಮಡಿಲಲ್ಲಿ ಬಟ್ಟಿ ಸರಾಯಿಯ ಕಮಟು ವಾಸನೆ..

ಅದನ್ನ ಮತ್ತೆ ಯಾರು ಅಲ್ಲ ಇಲ್ಲಿನ ಲೋಕಲ್ ಜನಗಳೇ ಮಾಡಿ ಕದ್ದು ಮಾರಾಟ ಮಾಡ್ತಾರೆ ಅಂದ್ರೆ ಎಷ್ಟು ಬೇಜಾರು ಆಗುತ್ತೆ ಅಲ್ವಾ? ಎಲ್ಲೋ ಇರುವ ಕೊಳಕು ಪುಡಿ ಕಾಸಿನ ಆಸೆಗೆಬಿದ್ದು ನನ್ನ ಮಲೆನಾಡ ಜನ ಇಂತ ನೀಚ ಕೆಲಸಕ್ಕೆ ಕೈ ಹಾಕ್ತಾರೆ ಅಂತ ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ!!

ಇದರಿಂದಲೇ  ನಮ್ಮಲ್ಲಿ ಈಗ ಬೆಲ್ಲದ ಬೆಲೆ ತೀರ ಹೆಚ್ಚಿರುವುದು ಅನ್ನೋದು ಸತ್ಯ ಅಂತ ನಮ್ಮೂರಲ್ಲಿ ಜನ ಮಾತಾಡ್ತಾರೆ, ಅಲ್ಲಲ್ಲಿ ಸಿಗೋ ಕಪ್ಪು ತುಳಸಿಕಟ್ಟೆ ಅಚ್ಚು ಅನ್ನೋ ಬೆಲ್ಲವನ್ನು ತಂದು ನೀರಲ್ಲಿ ವಾರಗಟ್ಟಲೆ  ನೆನಸಿ ಅದಕ್ಕೆ ನವಸಾಗರ (ನ್ಯಾಯವಾಗಿ ನೋಡಿದ್ರೆ ನವಸಾಗರ ಅಂದ್ರೆ ಅಂತ ದೊಡ್ಡ ವಸ್ತುವೇನು ಅಲ್ಲ ಅದು ನಾವು ನೀವು ನೋಡಿರೋ ಸಾಲ್ದರಿಂಗ್ ಪೇಸ್ಟ್ !! ಅದೇನು ಅಂತ ಕೇಳ್ತೀರಾ? ಅದು ಸಿಂಪಲ್ಲು ಯಾವುದಾದ್ರು ಎಲೆಕ್ಟ್ರಾನಿಕ್ ಶಾಪ್ ಅಲ್ಲಿ ನೋಡಿ ಸಾಲ್ಡರ್ ಮಾಡಬೇಕಾದ ಸರ್ಕ್ಯೂಟ್ ತಳಬಾಗಕ್ಕೆ ಹಚ್ಚೋ ಒಂದು ಪೇಸ್ಟ್ ನಂತಹ ಪದಾರ್ಥ ಅದೇ ನವಸಾಗರ !!!) ಅನ್ನೋ ಒಂದು ವಸ್ತುವನ್ನು ಬೆರಸಿ, ಮಂಗನ ಬಳ್ಳಿಯನ್ನು  ಕುಟ್ಟಿ ಹಾಕಿ  ಬಟ್ಟಿ ಇಳಿಸಿ ಅದನ್ನ ಕದ್ದು ಬೇಕಾದ ಜಾಗಗಳಿಗೆ ಸಾಗಿಸಿ ಅಲ್ಲಿಂದ ಅದನ್ನು ಮಾರಾಟ ಮಾಡುವ ಅನೇಕ ಜಾಲಗಳು ತಲೆಎತ್ತಿರುವುದು ವಿಷಾದದ ಸಂಗತಿ, ಅದನ್ನ ಮಟ್ಟ ಹಾಕುವುದರಲ್ಲಿ ನಮ್ಮ ಪೋಲಿಸಿನವರು ಕೂಡ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುತ್ತಿರುವುದು ಕೂಡ ಪ್ರಶಂಸೆ ಗೆ ಅರ್ಹವಾದಂತ ವಿಚಾರ ಆದ್ರೆ……

ನಮ್ಮ ಮಲೆನಾಡಿನಲ್ಲಿ ಏರೀತಿಯ ಆಕ್ರಮಚಟುವಟಿಕೆಯೇ? ನಂಬಲು ಆಸಾದ್ಯ , ಅಸಹ್ಯ  …

ಶಾಂತಿ, ನೆಮ್ಮದಿ, ಸ್ವಚ್ಛಂದ ಪರಿಸರ, ಒಳ್ಳೆಯ ಸಂಸ್ಕೃತಿ ಅಂದ್ರೆ ಮಲೆನಾಡು, ಅನ್ನೋ ಮಾತಿತ್ತು, ಆದ್ರೆ ಈ ರೀತಿ ಆದ್ರೆ ಅದು ಎಸ್ಟು ದಿನ ಉಳಿದೀತು? ನೀವೇ ಹೇಳಿ. ಎಲ್ಲೋ ಉತ್ತರದ ಬಾಗದಲ್ಲಿ ಈ ರೀತಿ ಚಟುವಟಿಕೆಗಳು ನೆಡಿತಿವೆ ಅಂತ ಕೇಳಿದ್ವಿ ಆದ್ರೆ ನಮ್ಮ ಊರಲ್ಲೇ ಕಳ್ಳಾರಿದಾರೆ ಅಂದ್ರೆ ಯೋಚನೆ ಮಾಡಿ..ಹಾಲು ಕೂಡಿದ ಮಕ್ಕಳೇ ಬದುಕೊಲ್ಲ ಇನ್ನೂ ಕಳ್ಳಬಟ್ಟಿ …..ಛೇ!! ಇದೆಂಥಾ ದುರಾಸೆ? “ಏನೇ ಆದ್ರೂ ಮೂರು ಹೊತ್ತು ಗಂಜಿ ಕುಡಿಯೋಕೆ ದೇವರು ನಮ್ಗೆ ಯೇನು ಕಮ್ಮಿ ಮಾಡಿಲ್ಲ” ಅಂತ ಹೇಳ್ತಿದ್ದ ಜನ ಇಂತ ಹೇಸಿಗೆ ಕೆಲ್ಸಕ್ಕೆ ನಮ್ಮೂರಲ್ಲಿ ಕೈ ಹಾಕ್ತಾರೆ ಅಂದ್ರೆ ಎಂತ ಕಾಲ ಬಂತಪ್ಪ ಅನಿಸಲ್ವಾ?

ಹಾಗಂತ ನಾವು ಸರ್ಕಾರಕ್ಕೋ, ಸ್ಥಳೀಯ ಆಡಳಿತದಮೇಲೋ ಗೂಬೆ ಕೂರಿಸೋಕೆ ಆಗಲ್ಲ ಅನ್ಸುತ್ತೆ, ಅವ್ರು ಮಾಡೋ ಕೆಲ್ಸಗಳನ್ನು ಮಾಡ್ತಾನೆ ಇರ್ತಾರೆ ಆದ್ರೆ  ನಮ್ಮೊರಿನ ಮಾನ, ಗೌರವವನ್ನು ವುಳಿಸುವ ಮನಸ್ಸು ಬಟ್ಟಿ ಇಳಿಸುವ ಬಟ್ಟೀ ಮಕ್ಕಳಿಗೆ ಇರಬೇಕು ಅಲ್ವಾ?  ಅದನ್ನ ಕುಡಿಯೋಕೆ ಹೋಗೋರು ಕೂಡ ಏನು ಹೊರಗಿನವರಲ್ಲ ಸ್ಥಳೀಯ ಜನಗಳೆ. ಕುಡಿಯದೆ ಬದುಕು ಮಾಡೋದು ಅಸ್ಟು ಕಷ್ಟವೇ?

ನಮ್ಗೆಲ್ಲಾ ಗೊತ್ತು ಅಡಿಕೆಗೆ  ತುಂಡೆರೋಗ ಬಂದು ಸಂಪೂರ್ಣ ಹಾಳಾಗಿದೆ ಅದರಿಂದ ಜೀವನಸಾಗಿಸೋದು ಕಷ್ಟ ಅಂತಾನೂ ಗೊತ್ತಿದೆ, ಆದ್ರೆ  ಈ ರೀತಿಯ ಹೀನ ದಾರಿ ಹಿಡಿದು ತಮ್ಮ ಹೆಂಡತಿ ಮಕ್ಕಳನ್ನ ಸಾಕೋ ಪರಿಸ್ಥಿತಿ ಬಂದಿದ್ಯ? ಇದರಿಂದ ಎಸ್ಟು ಕೆಟ್ಟ ಹೆಸರು ಅಲ್ವಾ? ಹುಟ್ಟಿ ಬೆಳೆದ ನಾಡಿನ ಹೆಸರನ್ನೆ ಹಾಳು ಮಾಡುವ ನೀಚ ಬುದ್ದಿ ನಮ್ಮವರಿಗೆ ಎಲ್ಲಿಂದನಾದ್ರೂ ಬಂತು? ಇನ್ನೂ ಕೆಲವರಂತೂ ತಮ್ಮ ಓಟುಗಳನ್ನ ರಾಜಾ ರೋಷವಾಗಿ ಹಣಕ್ಕೋಸ್ಕರ ಮಾರಿಕೊಳ್ಳುತ್ತಿದಾರೆ ಅದೂ ಕೂಡ ಅಸ್ಟೆ ನೀಚ ಅಪರಾಧ, ಪುಡಿ ಕಾಸಿನ ಆಸೆಇಂದ ಅಯೋಗ್ಯರನ್ನ ಅಧಿಕಾರಕ್ಕೆ ತಂದು ದೋಚಲು ಬಿಟ್ಟರೆ ಮುಂದಿನ ಪೀಳಿಗೆಗೆ ಏನನ್ನು ಉಳಿಸಿದ ಹಾಗೆ ಆಗುತ್ತದೆ? ಇದೆ ಏನು ದುಡ್ಡಿಗಾಗಿ ಓಟು ಮಾರಿಕೊಂಡವರ ಉಡುಗೊರೆ ತಮ್ಮ ಮುಂದಿನ ಸಂತಾನಕ್ಕೆ? ಅಂತೂ ನಮ್ಮೂರಿನ ಅಡಿಕೆ ಮರಗಳ ಎಲೆಗಳು ಹಸಿರಾಗುವ ಬದಲು ಹಳದಿಯಾಗಿ ಬಾಡಿಹೋಗುವದರೊಂದಿಗೆ ಜನ ಜೀವನವೂ ಅಸ್ತವ್ಯಸ್ಥವಾಗುತ್ತಿದೆ ಅನ್ನಿಸುತ್ತಿದೆ, ಪರ್ಯಾಯವಾಗಿ ಕಾಫಿ,ಬಾಳೆ ಬೆಳೆದರೆ ಮಂಗಗಳ ಕೀಟಲೆ, ಕಾಳುಮೆಣಸು ಬಂದರೆ ಕುಯ್ಯಲು ಜನರಿಲ್ಲ, ಹೀಗೆಯಾದರೆ “ಪೂರ್ಣ ಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್” ನಲ್ಲಿ ಬರೋ ಬಿದಿರಿನ ಬುಟ್ಟಿ ಹೆಣೆಯುತ್ತಿದ್ದ  ಹಳ್ಳಿಯೊಂದು ಪ್ಲಾಸ್ಟಿಕ್ ಹಾವಳಿಇಂದ ನಶಿಶಿ ಹೋದ ಕಥೆ ನಮ್ಮೂರಲ್ಲೂ ಆಗಬಹುದೇನೋ….

ಏನಾದರೂ ಆಗಲಿ ಮಲೆನಾಡ ಸೊಗಡು ಉಳಿಯಲಿ ಬರಡಾದ ತೋಟಗಳಲ್ಲಿ ಹೊಸ ಚಿಗುರು ಬರಲಿ , ನೇರ ನಡೆ, ಶುದ್ದವಾದ ಚಿಂತನೆ,ಕಷ್ಟ ಪಟ್ಟು ಮೈ ಬಗ್ಗಿಸಿ ದುಡಿದು ನೆಮ್ಮದಿಯ ಬದುಕು ಸಾಗಿಸುವ ಮನಸು, ಶಕ್ತಿ ಮತ್ತೆ ನಮ್ಮ  ಮುಗ್ದ ಜನರಲ್ಲಿ ಬರಲಿ…..ಅಲ್ವಾ? ನಿಮ್ಗೆ ಎನನ್ನಿಸಿತು? ನಂಗೆ ತಿಳಿಸಿ……ಬರ್ಲಾ?

ಖೇಲೆ ಹಮ್ ಜೀ ಜಾನ್ ಸೆ

ಡಿಸೆಂಬರ್ 23, 2010

ನಮಸ್ತೆ ನನ್ನ ಎಲ್ಲಾ ಬ್ಲಾಗ್ ಸ್ನೇಹಿತರಿಗೆ,

ತುಂಬಾದಿನಗಳೇನು ಈಬಾರಿ ಹಲವು ತಿಂಗಳುಗಳೆ ಕಳೆದು ಹೋಗಿವೆ ನಿಮ್ಮೊಂದಿಗೆ ಮಾತಾಡಿ ಅಲ್ವೆ? ಅದಕ್ಕೆ ಎನಾದ್ರು ಮಾಡಿ ಇವತ್ತು ಸ್ವಲ್ಪ ಎನಾದ್ರು ಬರೀಲೇಬೇಕು ಅಂತ ತೀರ್ಮಾನ ಮಾಡಿಕೊಂಡು ಕೂತಿದೀನಿ….ವಿಚಾರ ಏನಪ್ಪಾ ಅಂದ್ರೆ ನಾನು ಸುಮಾರು ೧೫ ದಿನಗಳ ಹಿಂದೆ “ಖೇಲೆ ಹಮ್ ಜೀ ಜಾನ್ ಸೆ” ಅಂತ ಒಂದು ಪಿಚ್ಚರ್ ನೊಡ್ದೆ ….ತುಂಬಾ ಚೆನಾಗಿದೆ…

ಮಾನಿನಿ ಚಟರ್ಜಿಯವರ “do and die” ಅನ್ನುವ ಕಾದಂಬರಿ ಆಧಾರಿತವಾಗಿರುವ ಚಿತ್ರ ಅದು. ಅಲ್ಲಿನ ಎಲ್ಲಾ ನಮ್ಮ ಕ್ರಾಂತಿವೀರರ ಪಾತ್ರಗಳಿಗೆ ಜೀವತುಂಬಿಸಿ ಅಧ್ಬುತವಾಗಿ ತೊರಿಸಲಾಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಈ ಘಟನೆಯನ್ನು “ಚಿತ್ತಗಾಂಗ್ ಆರ್ಮರಿ ರೈಡ್” ಎಂದೂ ಕರೆಯಲಾಗಿದೆ ಮತ್ತು  ಈ ಘಟನೆಯು ಎಪ್ರಿಲ್ ೧೮ ೧೯೩೦ ರಂದು ನೆಡೆದಿರುವುದೆಂದು ಚಟರ್ಜೀ ಅವರ ಪುಸ್ತಕದಲ್ಲಿ ಹೇಳಲಾಗಿದೆ.

ಕಥೆ ಚಿತ್ತಗಾಂಗ್ ನ  ಹುಡುಗರು ಆಡುವ ಆಟದ ಮೈದಾನವನ್ನ ಬ್ರಿಟೀಷ್ ಅಧಿಕಾರಿಗಳ ತರಬೇತಿಗಾಗಿ ವಶಪಡಿಸಿಕೊಳ್ಳುವ ಮೂಲಕ ಶುರುವಾಗುತ್ತೆ.ಚಿತ್ರದ ಪ್ರಮುಖ ಪಾತ್ರ ಅಭಿಷೇಕ್ ಬಚ್ಚನ್  ಅವರದ್ದು,ಅದರಲ್ಲಿ ಅವರು ಸೂರ್ಜೊ ಸೇನ್ (ಮಾಸ್ಟರ್ ದಾ) ಆಗಿ ಕಾಣಿಸಿಕೊಂಡಿದ್ದಾರೆ.

ಆಟದ ಮೈದಾನ ವಾಪಸ್ ಪಡೆಯಲು ಸಹಾಯ ಕೇಳಿ ಬರುವ ಹುಡುಗರಲ್ಲಿನ ಉತ್ಸಾಹ ಕಂಡು ಅವರನ್ನು ಕ್ರಾಂತಿಕಾರಿ ಚಳುವಳಿಗೆ ಸೂರ್ಜೊ ಸೇನ್ ಸೇರಿಸಿಕೊಳ್ಳುತ್ತಾನೆ, ನಂತರ ಕ್ರಾಂತಿಯ ಮೊದಲ ಅಂಗವಾಗಿ ಬ್ರಿಟೀಷ್ ಅಧಿಕಾರಿಗಳು  ಇರುವ ಅರಮನೆಯಂತಹ ಮನೆಯ ಒಳಗೂ ಹೊರಗೂ ಏನೇನಿದೆ,  ಹಾಗೆ ಯಾವಕಡೆಯಿಂದ ದಾಳಿಮಾಡಿ ಅವರನ್ನು ಓಡಿಸಬಹುದು ಅನ್ನುವ ಲೆಕ್ಕಾಚಾರ ಶುರುವಾಗುತ್ತದೆ ಆ ಸಮಯದಲ್ಲಿ ಕೊಲ್ಪನ (ದೀಪಿಕಾ ಪಡುಕೋಣೆ ಈ ಪಾತ್ರದಲ್ಲಿದ್ದಾರೆ ) ಮತ್ತು ಅವಳ ಗೆಳತಿ ಅಲ್ಲಿನ ಕೆಲಸಗಾರರ ರೂಪದಲ್ಲಿ ಹೋಗಿ ಎಲ್ಲಾ ಮಾಹಿತಿ ಸಂಗ್ರಹಿಸಿಕೊಂಡು ಬರುತ್ತಾರೆ, ನಂತರದಲ್ಲಿ ಅವ್ರು ಸಹ ಸಕ್ರೀಯ ಕ್ರಾಂತಿ ಯ ಹೋರಾಟದಲ್ಲಿ ಬಾಗವಹಿಸುವ ಅವಕಾಶವನ್ನು ಪಡೆಯುತ್ತಾರೆ.

ನಂತರ ಕ್ರಾಂತಿ ಚಳುವಳಿಗೆ ದುಮುಕಿದ ಪ್ರತಿಯೊಬ್ಬರ ಮನೆಯಿಂದ  ನಗ, ನಾಣ್ಯಗಳನ್ನು ಸಂಗ್ರಹಿಸಿ ಸೂರ್ಜೋ ಸೇನ್ ತಂಡವು ೭ ಬಂದೂಕು ಹಾಗೆ ೩ ಪಿಸ್ತೂಲುಗಳನ್ನು ಖರೀದಿಸುತ್ತದೆ ಕಲ್ಪೊನಾ ನಾಡಬಾಂಬ್ ತಯಾರಿಕೆಗೆ ಬೇಕಾಗುವ ರಾಸಾಯನಿಕಗಳನ್ನು ಒಟ್ಟುಗೂಡಿಸಿ ೩ ಬಾಂಬ್ ಗಳನ್ನೂ ತ ತಯಾರಿಸಿ  ಕೊಡುತ್ತಾಳೆ. ಆಮೇಲೆ ಮೊದಲ ದಾಳಿಯಾಗಿ ಟೆಲಿಗ್ರಾಫ್ ಕಚೇರಿಯನ್ನು ರಾತ್ರೊ ರಾತ್ರಿ ಪುಡಿ ಪುಡಿ ಮಾಡಲಾಗುತ್ತದೆ, ಹಾಗೆ ರೈಲ್ವೆ ಹಳಿಗಳನ್ನು ತುಂಡುಮಾಡಲಾಗುತ್ತದೆ. ನಂತರ ೨ನೇಯದಾಗಿ ಬ್ರೀಟೀಷ್ ಅಧಿಕಾರಿಗಳಿರುವ ಅರಮನೆಗೆ ದಾಳಿ ಮಾಡಿ ಅಲ್ಲಿ ಇರುವ ಅಧಿಕಾರಿಗಳನ್ನು ಕೊಲ್ಲುವ ಅಥವ ಓಡಿಸುವ ಯತ್ನ ವಿಫಲವಾಗುತ್ತದೆ ಎಕೆಂದರೆ ಅಲ್ಲಿ “Good Friday” ಆಗಿರುವುದರಿಂದ ಅಲ್ಲಿ ಯಾವ ಅಧಿಕಾರಿಯೂ ಇರುವುದಿಲ್ಲ!!

ಆಂಗ್ಲರವೇ ಶಸ್ತ್ರಾಸ್ತ್ರಗಳನ್ನ ವಷಪಡಿಸಿಕೊಂಡು ಅವರನ್ನ ಹಿಮ್ಮೆಟ್ಟಿಸುವಕೆಲಸಕ್ಕೆ ಸೂರ್ಜೊ ಸೇನ್ ತಂಡ ರೆಡಿಯಾಗುತ್ತದೆ ಇರುವ ಮೂರೇ ಮೂರು ಬಾಂಬ್ ಗಳನ್ನ ಬಳಸಿ ಅವರ ಬಂದೂಕು ಸಂಗ್ರಹಗಾರವನ್ನೇನೊ ವಷ ಪಡಿಸಿಕೊಳ್ಳಲಾಗುತ್ತದೆ, ಆದರೆ ಅಲ್ಲಿ ಇವರಿಗೆ ಬಂದೂಕಿಗೆ ಬೇಕಾಗುವ ಮದ್ದುಗುಂಡುಗಳು ಸಿಗುವುದೇಇಲ್ಲ. ಯಾಕೆಂದರೆ ಅತಿಬುದ್ಧಿವಂತರಾದ ಬ್ರಿಟೀಷರು ಬಂದುಕುಗಳನ್ನು ಒಂದುಕಡೆ ಹಾಗು ಮದ್ದುಗುಂಡುಗಳನ್ನು ಮತ್ತೊಂದೆಡೆ ಸಂಗ್ರಹಿಸಿಟ್ಟುಕೊಂಡಿರುವುದು.ಇವರಲ್ಲಿರುವ ಒಂದೇ ನಳಿಕೆಯ ಬಂದೂಕುಗಳಿಂದ ಹೋರಾಟ ಮುಂದುವರೆಸುವ ಸಾಹಸಕ್ಕೆ ಕೈ ಹಾಕುತ್ತಾರೆ,ಆದರೆ ಆಂಗ್ಲರ ಅಸಂಕ್ಯ ಸೈನ್ಯ ಬಲದಿಂದ ತಪ್ಪಿಸಿಕೊಳ್ಳಲಾದೀತೇ? ಅವರಲ್ಲಿರುವ ಆಧುನಿಕ ಶಸ್ತ್ರಾಸ್ತ್ರ ಗಳನ್ನ ಬಳಸಿಕೊಂಡು ಎಲ್ಲ ನಮ್ಮ ಕ್ರಾಂತಿಕಾರಿಗಳ ಮಾರಣ ಹೋಮ ಮಾಡುವ, ಹೆಣಗಳನ್ನು ಒಟ್ಟುಗೂಡಿಸಿ ಪೆಟ್ರೋಲ್ ಹಾಕಿ ಸುಡುವ ರೀತಿ, ಅವುಗಳನ್ನ ಚಿತ್ರದಲ್ಲಿ ತೋರಿಸುವ ಪರಿ ಎಂತಹ ಭಾರತೀಯನಲ್ಲೂ ಸ್ವಾತಂತ್ರ ಹೋರಾಟದ ಭಯಾನಕ ದೃಶ್ಯಗಳನ್ನು ತೆರೆದಿಡುತ್ತದೆ.ಕೊನೆಗೆ ಸೂರ್ಜೋ ಸೇನ್ ಗೆ ಗಲ್ಲು ಶಿಕ್ಷೆಯಾಗುತ್ತದೆ, ಅವರಿಗೆ ಸಹಕರಿಸಿದ ಕೊಲ್ಪನ ಹಾಗು ಅವಳ ಗೆಳತಿಗೆ ಜೀವಾವದಿ ಶಿಕ್ಷೆ………

ಚಿತ್ರ ನೋಡುವ ಪ್ರತಿಕ್ಷಣವೂ ರೋಮಾಂಚನಕಾರಿ ಘಟನೆಗಳು ಕಣ್ಣೆದುರು ಬಂದು ನಿಲ್ಲುತ್ತವೆ, ಬ್ರಿಟೀಷರ ಅರಮನೆಯ ಮುಂದೆ “ಇಲ್ಲಿ ನಾಯಿಗಳಿಗೆ ಹಾಗು ಭಾರತೀಯರಿಗೆ ಪ್ರವೇಶವಿಲ್ಲ”  ಅನ್ನುವ ಬೋರ್ಡ್ ಹಾಕಿರುವುದನ್ನು ತೋರಿಸುತ್ತಿರುವಾಗ ಮೈ ಉರಿದು ಹೋಗುತ್ತದೆ.ಸೂರ್ಜೋ ಸೇನ್ ಹಾಗು ಅವರ ತಂಡ ಆಡುವ ಪ್ರತಿಯೊಂದು ಮಾತು ನಮ್ಮಲ್ಲಿ ದೇಶಪ್ರೇಮ ತರದೇ ಇರದು. ಅವರಿಗಾಗುವ ದು:ಸ್ಥಿತಿ  ಯನ್ನು ನೋಡುವಾಗಲಂತೂ ಕಣ್ಣೀರು ಬಂದುಬಿಡುತ್ತವೆ.

ಚಿತ್ತಗಾಂಗ್ ಹೋರಾಟದಲ್ಲಿ ಮಡಿದ ನಮ್ಮೆಲ್ಲ ಸ್ವಾತಂತ್ರ್ಯ ಹೋರಾಟಗರರು: ಸೂರ್ಜೊ ಸೇನ್ (ಮಾಸ್ತರ್ ದಾ), ಗಣೇಶ್ ಘೊಷ್, ಲೊಕೆನಾಥ್ ಬಾಲ್, ನಿರ್ಮಲ್ ಸೇನ್, ನರೇಶ್ ರಾಯ್, ಸಸಾಂಕ ದತ್ತಾ, ಅರ್ದೆಂದು ದಸ್ತಿದಾರ್, ಹರಿಗೋಪಾಲ್ ಬಾಲ್, ತರಕೆಶ್ವರ್ ದಸ್ತಿದಾರ್, ಜಿಬಾನ್ ಘೋಶಾಲ್, ಆನಂದ ಗುಪ್ತ, ಪ್ರೀತಿ ಲತ್ತಾ, ಹಾಗು ಸೋಬೋದ್ ರಾಯ್ (ಕೇವಲ ೧೪ ವರ್ಷದ ಹುಡುಗ ಇವನು) ಇವರೆಲ್ಲರಿಗೂ ನನ್ನ ಈ ಲೇಖನದ ಮೂಲಕ ಅಕ್ಷರ ನಮನ

ಹಾಗೆ ಸ್ನೇಹಿತರೆ, ಯಾವಾಗಲು, ದೊಡ್ಡ ದೊಡ್ಡ ಹೆಸರುಗಳನ್ನ ಸ್ವಾತಂತ್ರ ಹೋರಾಟಗಾರೆಂದು ಹೇಳುವಾಗ, ಅವರ ಜಯಂತಿಗಳನ್ನು ಆಚರಿಸುವಾಗ, ರಾಷ್ಟ್ರೀಯ ಹಬ್ಬಗಳಲ್ಲಿ ಅವರುಗಳ ಗುಣಗಾನ ಮಾಡುವಾಗ ನಮಗಾಗಿ ಪ್ರಾಣ ತೆತ್ತ ಎಷ್ಟೋ ಸೂರ್ಜೋ ಸೇನ್ರಂತಹ ಕ್ರಾಂತಿಕಾರಿಗಳನ್ನು ನೆನೆಯುವುದಲ್ಲದೆ ಅವರ ಬಗ್ಗೆ ನಮ್ಮ ಮುಂದಿನ ಪೀಳಿಗೆಗೂ ತಿಳಿಹೇಳುವ ಅಗತ್ಯ ಎಷ್ಟಿದೆ ಅಲ್ಲವೆ? ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ ಬಂದ ಸ್ವಾತಂತ್ರ ದ ಹಿಂದೆ ಎಷ್ಟೋ ಕ್ರಾಂತಿಕಾರಿಗಳ ರಕ್ತದ ಗುರುತಿದೆ ಎನ್ನುವುದನ್ನ ನಾವು, ಈಗಿನ ರಾಜಕೀಯ ನಾಯಕರು ಮರೆತಹಾಗಿದೆ…ನಿಮಗೆ ಏನನ್ನಿಸಿತು ಅನ್ನುವುದನ್ನೂ ತಿಳಿಸಿ.. … ಮತ್ತೊಮ್ಮೆ ಸಿಗುತ್ತೇನೆ…..

ಹಾಗೆ “Do and Die ” ಬಗ್ಗೆ ಹೆಚ್ಚಿನ ವಿವರಗಳು ಈ ಲಿಂಕಿನಲ್ಲಿ ಇವೆ ಒಮ್ಮೆ ಕ್ಲಿಕ್ಕಿಸಿ (ವಿಕಿಪೀಡಿಯ ಸಂಗ್ರಹ)